- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

2.19 ಕೆ.ಜಿ ಚಿನ್ನ ವಶ– ಇಬ್ಬರ ಸೆರೆ

G-Gold-Seizure [1]ಮಂಗಳೂರು: ‘ಹಪ್ಪಳ ರೂಪದಲ್ಲಿ ಬಂತು ಚಿನ್ನವಿದೇಶದಿಂದ’ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಮೂರು ಪ್ರತ್ಯೇಕ ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಭೇದಿಸಿದ್ದಾರೆ.

ಒಟ್ಟು ₨ 65.29 ಲಕ್ಷ ಮೌಲ್ಯದ 2,191.200 ಗ್ರಾಂ (2.19 ಕೆ.ಜಿ) ಚಿನ್ನವನ್ನು ವಶಪಡಿಸಿ­ಕೊಂಡಿದ್ದಾರೆ. ಆರೋಪಿಗಳು ಈ ಬಾರಿ  ಕಳ್ಳಸಾಗಣೆ ಮಾಡಲು ಚಿನ್ನವನ್ನು ಹಪ್ಪಳ ರೂಪಕ್ಕೂ ಪರಿ ವರ್ತಿಸಿದ್ದಾರೆ. ಅದಲ್ಲದೇ ಕಾಯಿಲ್‌ ಹಾಗೂ ಸರಿಗೆ ರೂಪಕ್ಕೆ ಪರಿವರ್ತಿಸಿ ಕಳ್ಳಸಾಗಣೆ ಮಾಡಿದ ಚಿನ್ನವೂ ಕಸ್ಟಮ್ಸ್‌ ಅಧಿ­ಕಾರಿಗಳ ಕಣ್ಣಿಗೆ ಬಿದ್ದಿದೆ.

ಕಾಸರಗೋಡು ಮಧೂರಿನ ಉಳಿಯ­ತ್ತಡ್ಕದ ಬಷೀರ್‌ ಖೂರಿ ಅಬ್ದುಲ್‌ ರಹಿಮಾನ್‌, ಚಿನ್ನವನ್ನು ಕಾಯಿಲ್‌ ರೂಪಕ್ಕೆ ಪರಿವರ್ತಿಸಿ, ಅದನ್ನು ಎಲೆಕ್ಟ್ರಿಕ್‌ ಸ್ಟೌನಲ್ಲಿ ಅಳವಡಿಸಿ ಕಳ್ಳಸಾಗಣೆ ನಡೆಸಿದ್ದ. ಆತನ ಬಳಿ  ಒಟ್ಟು 13 ಕಾಯಿಲ್‌ಗಳು (ಒಟ್ಟು 999.650 ಗ್ರಾಂ) ಪತ್ತೆಯಾದವು. ಅವುಗಳ ಒಟ್ಟು ಮೊತ್ತ ₨ 29.78 ಲಕ್ಷ. ಆರೋಪಿಯು ದುಬೈನಿಂದ ಬೆಳಿಗ್ಗೆ 5.30ಕ್ಕೆ ಬಂದ ಜೆಟ್‌ ಏರ್‌ವೇಸ್‌ 9ಡಬ್ಲ್ಯು531 ವಿಮಾನದಲ್ಲಿ ಪ್ರಯಾಣಿಸಿದ್ದ.

ಕಾಸರಗೋಡು ಜಿಲ್ಲೆಯ ಪಳ್ಳಿಕೆರೆ ಕೀಕನ್‌ ಗ್ರಾಮದ ತೆಕ್ಕುಪುರದ ನಿವಾಸಿ ನಝರ್‌ನಿಂದ ಒಟ್ಟು 699.900 ಗ್ರಾಂ ಚಿನ್ನವನ್ನು ವಶಪಡಿಸಿ­ಕೊಳ್ಳಲಾಗಿದೆ. ಈ ಚಿನ್ನದ ಒಟ್ಟು ಮೌಲ್ಯ ₨20.85 ಲಕ್ಷ. ಆರೋಪಿ ನಝರ್‌, ಚಿನ್ನವನ್ನು ಸರಿಗೆಗಳನ್ನಾಗಿ ಪರಿವರ್ತಿಸಿ ಸೂಟ್‌ಕೇಸ್‌ನ ಅಲ್ಯು ಮಿನಿಯಂ ಫ್ರೇಂನ ಸುತ್ತ ಅಡಗಿಸಿಟ್ಟಿದ್ದ. ದುಬೈನಿಂದ ಬಂದ ಏರ್‌ಇಂಡಿಯ ಎಕ್ಸ್‌ಪ್ರೆಸ್‌ ಐಎಕ್ಸ್‌ 814 ವಿಮಾನ ದಲ್ಲಿ ಬೆಳಿಗ್ಗೆ 7.45ಕ್ಕೆ ಇಳಿದ ನಝರ್‌ನ ಸೂಟ್‌ಕೇಸ್‌ ಅನ್ನು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ ದಾಖಲೆ ಗಳಿಲ್ಲದ ಚಿನ್ನದ ಎರಡು ಸರಿಗೆಗಳು ಪತ್ತೆಯಾದವು.

ಕಾಸರಗೋಡಿನ ಮೌವ್ವಲ್‌ ಗ್ರಾಮದ ಪಳ್ಳಿಕೆರೆಯ ರಹ್ಮತ್‌ ಮಂಝಿಲ್‌ ಚಿನ್ನವನ್ನು ಹಪ್ಪಳ ರೂಪದ ತಟ್ಟೆಗಳನ್ನಾಗಿ ಪರಿವರ್ತಿಸಿ ಕಳ್ಳಸಾಗಣೆ ಮಾಡಿದ್ದ. ಏರ್ಇಂಡಿಯ ಎಕ್ಸ್‌ಪ್ರೆಸ್‌  ಐಎಕ್ಸ್‌ 814 ವಿಮಾನ­ದಲ್ಲಿ ಬೆಳಿಗ್ಗೆ 7.45ಕ್ಕೆ ಬಂದಿಳಿದ  ರಹ್ಮತ್‌ ಬಳಿ ಚಿನ್ನದ ನಾಲ್ಕು ಹಪ್ಪಳಗಳು (ಒಟ್ಟು ತೂಕ 491.650 ಗ್ರಾಂ) ಪತ್ತೆ ಯಾದವು. ಇವುಗಳ ಒಟ್ಟು ಮೌಲ್ಯ ₨ 14.65 ಲಕ್ಷ.

ಆರೋಪಿಗಳ ಪೈಕಿ ಬಷೀರ್‌ ಖೂರಿ ಅಬ್ದುಲ್‌ ರಹಿಮಾನ್‌ ಹಾಗೂ ನಝರ್‌ನನ್ನು ಕಸ್ಟಮ್ಸ್‌ ಪೊಲೀಸರು ಬಂಧಿಸಿ, ನ್ಯಾಯಾ­ಲಯ­ದಲ್ಲಿ ಹಾಜರು­ಪಡಿಸಿ­ದರು.

ಕಸ್ಟಮ್ಸ್‌ ಆಯುಕ್ತ ಡಿ.ಪುರು­ಷೋತ್ತಮ್‌ ಮಾರ್ಗ­­ದರ್ಶನದಲ್ಲಿ ಮಂಗಳೂರು ಅಂತರ­ರಾಷ್ಟ್ರೀಯ ವಿಮಾನ­ನಿಲ್ದಾಣ­ದಲ್ಲಿ ಚಿನ್ನ ಕಳ್ಳಸಾಗಣೆ ತಡೆಯಲು ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿ­ಸಲಾಗಿದೆ. ಸಹಾಯಕ ಆಯುಕ್ತ ಕೃಷ್ಣ ಕುಮಾರ್‌ ನೇತೃತ್ವದ ಕಸ್ಟಮ್ಸ್‌ ಇಲಾ­ಖೆಯ ಸಿಬ್ಬಂದಿಯ ತಂಡ  ಕಳೆದ 15 ದಿನಗಳಲ್ಲಿ ಭಾರಿ ಚಿನ್ನ ಕಳ್ಳ­ಸಾಗಣೆಯ ಆರಕ್ಕೂ ಅಧಿಕ ಪ್ರಕರಣಗಳನ್ನು ಬಯಲಿಗೆಳೆದಿದೆ.