ಕುಡಿಯುವ ನೀರು ಪೂರೈಕೆ 962 ಕಾಮಗಾರಿಗಳಿಗೆ ರೂ.51.79 ಕೋಟಿ ವೆಚ್ಚ- ತುಳಸಿ ಮದ್ದಿನೇನಿ

7:23 PM, Wednesday, May 7th, 2014
Share
1 Star2 Stars3 Stars4 Stars5 Stars
(5 rating, 3 votes)
Loading...

Maddineni

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಒಟ್ಟು 962 ಕಾಮಗಾರಿಗಳನ್ನು ಕೈಗೊಂಡು ರೂ.51.79 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆಯೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.

ಅವರು ಇಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯಸರ್ಕಾರದ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ಭರತ್ ಲಾಲ್ ಮೀನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಬರ ಪರಿಸ್ಥಿತಿ,ಕುಡಿಯುವ ನೀರು, ಜಾನುವಾರು ಮೇವು ಮತ್ತು ಇಂಧನ ಸಮಸ್ಯೆಗಳ ಪರಿಶೀಲನಾ ಸಭೆಗೆ ತಿಳಿಸಿದರು.

2013-14 ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಜಿಲ್ಲೆಯಲ್ಲಿ ರೂ.363.12 ಕೋಟಿಗಳ ಕ್ರಿಯಾ ಯೋಜನೆ ತಯಾರಿಸಲಾಗಿ ರೂ.51.79 ಕೋಟಿ ಅನುದಾನ ಪಡೆದು 126 ಕೊಳವೆ ನೀರು ಸರಬರಾಜು,38 ಕಿರು ನೀರು ಸರಬರಾಜು,5 ಕೈಪಂಪು ಕೊಳವೆ ಬಾವಿಗಳು,5 ತೆರೆದ ಬಾವಿಗಳು,67 ಶಾಲೆಗಳಿಗೆ 72 ಅಂಗನವಾಡಿಗಳಿಗೆ ನೀರು ಸರಬರಾಜು ಹಾಗೂ ಇತರೆ 649 ಕಾಮಗಾರಿಗಳು ಸೇರಿದಂತೆ ಒಟ್ಟು 962 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು. ಇದಲ್ಲದೆ ಜಿಲ್ಲೆಗೆ 21 ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಅನುಮೋದನೆಯಾಗಿದ್ದು,4 ಬಹು ಗ್ರಾಮ ಕುಡಿಯುವ ನೀರು ಯೋಜನೆಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.ಉಳಿದ 17 ಯೋಜನೆಗಳಿಗೆ ಮಂಜೂರಾತಿಗೆ ಕಾಯಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜಿನ ವ್ಯತ್ಯಯದಿಂದ ಕುಡಿಯುವ ನೀರಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಈ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದ ಮೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲೆಯಲ್ಲಿ ಟ್ರಾನ್ಸ್ಪಾರ್ಮ್ರ್ಗಳ ಬ್ಯಾಂಡ್ನ್ನು ಹೊಂದಿ ಕೆಟ್ಟು ಹೋದ ಟ್ರಾನ್ಸ್ಫಾರ್ಮರ್ಗಳನ್ನು ಕೂಡಲೇ ಬದಲಾಯಸುವ ವ್ಯವಸ್ಥೆ ಹೊಂದುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಯಾವುದೇ ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿಲ್ಲ.ಜಾನುವಾರು ಮೇವು ಕೊರತೆ ಇಲ್ಲ,ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದೆ,ಜಿಲ್ಲೆಯ 4 ಸ್ಥಳೀಯ ಆಡಳಿತ ಪುರಸಭೆಗಳಿಗೆ 55 ಕುಡಿಯುವ ನೀರು ಯೋಜನೆಗಳಿಗಾಗಿ ರಾಜ್ಯ ವಿಕೋಪ ಪರಿಹಾರ ನಿಧಿಯಿಂದ 1.05 ಕೋಟಿ ಬಿಡುಗಡೆ ಮಾಡಿದೆ. ಅಲ್ಲದೆ ಕುಡಿಯುವ ನೀರು ಸರಬರಾಜಿಗಾಗಿ ಈಗಿರುವ ರೂ.1.95 ಕೋಟಿ ಜೊತೆಗೆ ರೂ.1.00 ಕೋಟಿ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. ತುಂಬೆ ವೆಂಟೆಡ್ ಡ್ಯಾಂನಿಂದ ಮಂಗಳೂರು ಮಹಾನಗರಪಾಲಿಕೆಗೆ ಜೂನ್ ಅಂತ್ಯದ ವರೆಗೂ ನೀರಿನ ಕೊರತೆಯಾಗಬಾರದು ಎಂಬ ವಿಶ್ವಾಸವಿದೆ ಎಂದ ಜಿಲ್ಲಾಧಿಕಾರಿಗಳು ಕಳೆದ ವರ್ಷದ ಅತೀವೃಷ್ಠಿಯಿಂದ ಜಿಲ್ಲೆಯ ಅಡಿಕೆ ಬೆಳೆಗೆ ಕೊಳೆರೋಗ ಬಂದು ನಷ್ಟ ಅನುಭವಿಸಿದ್ದ 36,562 ರೈತರಿಗೆ ರೂ.25.83 ಕೋಟಿ ಪರಿಹಾರ ಹಣವನ್ನು ವಿತರಿಸಲು ಆಯಾ ತಾಲೂಕಿನ ತಹಶೀಲ್ದಾರ್ರಿಗೆ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ 2014 ನೇ ಸಾಲಿನಲ್ಲಿ ಇಲ್ಲಿಯ ವರೆಗೆ ಪ್ರಕೃತಿ ವಿಕೋಪದಿಂದ 7 ಜನ ಸಾವಿಗೀಡಾಗಿದ್ದು,5 ಜಾನುವಾರುಗಳು,4 ಜನರಿಗೆ ಗಾಯಗಳು ಹಾಗೂ 79 ಮನೆಗಳು ಪೂರ್ಣ ಕುಸಿದಿವೆ ಇವರಿಗೆ ಪರಿಹಾರ ವಿತರಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿ ಗಳಿಗೆ ತಿಳಿಸಿದರು.

Maddineni

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English