ತುಳು ಸಿನಿಮಾ ‘ಚಾಲಿಪೋಲಿಲು’ ಸೆಪ್ತೆಂಬರ್ ನಲ್ಲಿ ತೆರೆಗೆ

12:52 PM, Saturday, June 7th, 2014
Share
1 Star2 Stars3 Stars4 Stars5 Stars
(5 rating, 5 votes)
Loading...

Chali Polilu

ಮಂಗಳೂರು : ಜಯಕಿರಣ ಫಿಲ್ಮ್ಸ್ ಲಾಂಛನದಡಿ ಪ್ರಕಾಶ್ ಪಾಂಡೇಶ್ವರ ಅವರು ನಿರ್ಮಿಸುತ್ತಿರುವ ಚಾಲಿಪೋಲಿಲು ತುಳು ಸಿನಮಾ ಬಗ್ಗೆ ಚಿತ್ರಪ್ರೇಮಿಗಳು ಅತೀವ ನರೀಕ್ಷೆ ಇಟ್ಟುಕೊಂಡು ಕಾಯುತ್ತಿರುವುದಕ್ಕೆ ಕಾರಣಗಳು ಹಲವಾರು. ಈ ಬ್ಯಾನರ್ನಡಿಯಲ್ಲಿ ನಿರ್ಮಾಣವಾಗುವ ಮೊದಲ ಸಿನಿಮಾ ಇದಾಗಿದ್ದರೂ, ಇದರಲ್ಲಿರುವ ಹಲವಾರು ಗುಣಾತ್ಮಕ ಅಂಶಗಳು ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ.

ಹಲವು ಪ್ರಥಮಗಳಿಗೆ ಚಾಲಿಪೋಲಿಲು ಸಿನಮಾ ಸಾಕ್ಷಿಯಾಗಿದೆ. ಮುಖ್ಯವಾಗಿ ತುಳು ರಂಗಭೂಮಿಯ ಹೆಚ್ಚಿನೆಲ್ಲ ಪ್ರಮುಖ ತಂಡಗಳ ಮುಖ್ಯ ಕಲಾವಿದರೆಲ್ಲರಿಗೂ ಇಲ್ಲಿ ಅವಕಾಶ ನೀಡಲಾಗಿರುವುದು ಮತ್ತು ಈ ರೀತಿ ಎಲ್ಲ ಪ್ರಮುಖ ಕಲಾವಿದರನ್ನು ಸೇರಿಸಿ ಕೊಂಡು ನಿರ್ಮಾಣವಾಗುತ್ತಿರುವ ಮೊದಲ ತುಳು ಸಿನಮಾ ಇದು. ಸುಮಾರು 400ಕ್ಕೂ ಮಿಕ್ಕಿದ ತಮಿಳು, ತೆಲುಗು, ಮಲಯಾಳ, ಕನ್ನಡ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಕೂಲ್ ಜಯಂತ್ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವ ಮೊದಲ ತುಳು ಸಿನಿಮಾ ಚಾಲಿಪೋಲಿಲು. ಮಲಯಾಳಿ ಸಿನಿಮಾಗಳಲ್ಲಿ ಕಂಡುಬರುವಂಥ ಉತ್ಕೃಷ್ಟ ಗುಣಮಟ್ಟದ ಹಾಸ್ಯಪ್ರಧಾನ ಚಿತ್ರವಾಗಿರುವ ಇದು ಆ ಸಾಲಿಗೆ ಸೇರುವ ಮೊದಲ ತುಳು ಚಿತ್ರ. ಮಲಯಾಳ ಚಿತ್ರರಂಗದ ಖ್ಯಾತ ಕೆಮೆರಾಮ್ಯಾನ್ ಉತ್ಪಲ್ ನಾಯನಾರ್ ಅವರ ಕೆಮರಾದಿಂದ ಮೂಡಿ ಬಂದಿರುವ ಮೊದಲ ತುಳು ಚಿತ್ರ ಚಾಲಿಪೋಲಿಲು. ಎರಡು ಕೆಮರಾಗಳನ್ನು ಬಳಸಿಕೊಂಡು ಸುಮಾರು 26 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾದಲ್ಲಿ ಒಂದು ಉತ್ತಮ ಸ್ಟಂಟ್ ದೃಶ್ಯವಿದೆ. ಈ ದೃಶ್ಯಕ್ಕಾಗಿ ವಿಶೇಷ ತಯಾರಿ ಮಾಡಲಾಗಿದ್ದು, ವಿನೋದ್ ಬೆಂಗಳೂರು ನೇತೃತ್ವದಲ್ಲಿ ನಡೆದಿದೆ. ಈ ಸ್ಟಂಟ್ ದೃಶ್ಯಕ್ಕಾಗಿ ಬೆಂಗಳೂರಿನ ಒಂದು ತಂಡವೇ ಬಂದಿತ್ತು. ಹೊಡೆದಾಟದ ದೃಶ್ಯವನ್ನು ಉತ್ಕೃಷ್ಟ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ.

ಯುವ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರ ನಿರ್ದೇಶನವಿರುವ ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಅವರದ್ದೇ. ಜತೆಗೆ ಸಾಹಿತ್ಯವನ್ನೂ ಒದಗಿಸಿದ್ದಾರೆ. ಇವರ ಜತೆಗೆ ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ಬೈಲ್, ವಿ. ಮನೋಹರ್ ಕೂಡ ಹಾಡುಗಳನ್ನು ಬರೆದಿದ್ದಾರೆ.ಸಿನಿಮಾಕ್ಕೆ ವಿ. ಮನೋಹರ್ ಅವರೇ ಸಂಗೀತ ನಡಿದ್ದಾರೆ. ಈ ಪೈಕಿ ಕಾಪಿಕಾಡ್ ಮತ್ತು ಕೊಡಿಯಾಲ್ಬೈಲ್ ರಚನೆಯ ಹಾಡುಗಳು ಈಗಾಗಲೇ ಕೆಲವು ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡಲ್ಪಡುತ್ತಿದ್ದು, ಅಪಾರ ಜನಮನ್ನಣೆ ಪಡೆಯುತ್ತಿದೆ. ಜನರ ಬಾಯಲ್ಲಿ ಗುನುಗುನಸಲ್ಪಡುತ್ತಿದೆ. ಈ ಚಿತ್ರದಲ್ಲಿ ಒಂದು ಹಾಡನ್ನು ಸ್ವತಹ ದೇವದಾಸ್ ಕಾಪಿಕಾಡ್ ಹಾಡಿದ್ದಾರೆ. ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿದ್ದು, ಒಂದು ಹಾಡನ್ನು ಮಡಿಕೇರಿಯಲ್ಲಿ ಅದ್ಭುತವಾಗಿ ಚಿತ್ರೀಕರಿಸಿಕೊಳ್ಳಲಾಗಿದೆ. ಮಂಗಳೂರಿನ ಸುತ್ತಮುತ್ತ, ಕಾವೂರು, ಸುರತ್ಕಲ್ ಸಮೀಪದ ಚೇಳ್ಯಾರುಪದವು, ಸಸಿಹಿತ್ಲು, ಮಡಿಕೇರಿ..ಮುಂತಾದ ಆಕರ್ಷಕ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲ್ಪಟ್ಟಿರುವ ಈ ಸಿನಿಮಾದಲ್ಲಿ ಜಿಲ್ಲೆಯ ಪ್ರಕೃತಿ ಸೊಬಗನ್ನು ಪ್ರೇಕ್ಷಕರಿಗೆ ಉಣ ಬಡಿಸಲು ನಿರ್ಮಾಪಕರು ಬಯಸಿರುವುದು ಸಿನಿಮಾದಲ್ಲಿ ಪ್ರತಿಬಿಂಬಿಸಲ್ಪಡಲಿದೆ.

ಚಾಲಿಪೋಲಿಲು ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್ ಅವರು ತನ್ನ ಪ್ರತಿಭೆಯ ವಿಶ್ವದರ್ಶನ ಮಾಡಿದ್ದಾರೆ ಎಂದು ಹೇಳಿದರೂ ತಪ್ಪಾಗದು. ಅದ್ಭುತ ಅಭಿನಯದ ಮೂಲಕ ನಟನಾಗಿ, ಒಂದು ಹಾಡು ಬರೆದು ಹಾಡುವ ಮೂಲಕ ಸಾಹಿತಿ ಮತ್ತು ಗಾಯಕನಾಗಿ, ಡ್ಯಾನ್ಸ್ ಮಾಡುವ ಮೂಲಕ ಡ್ಯಾನ್ಸರ್ ಆಗಿ, ಸ್ಟಂಟ್ ದೃಶ್ಯದಲ್ಲೂ ಭಾಗವಹಿಸಿ ಫೈಟರ್ ಆಗಿಯೂ ಕಾಣಿಸಿಕೊಂಡಿರುವುದು ಭೇಷ್ ಎನ್ನಲೇಬೇಕಾದ ಸಂಗತಿ. ಒಬ್ಬ ವ್ಯಕ್ತಿ ಇಷ್ಟೆಲ್ಲ ಮಾಡಿರುವುದು ಅದ್ಭುತವೇ. ಕಾಪಿಕಾಡ್ರಂಥ ಮಹಾ ಕಲಾವಿದರಿಂದ ಇಂಥ ಕಲಾಸೇವೆಯನ್ನು ಪಡೆದುಕೊಂಡಿರುವ ಚಾಲಿಪೋಲಿಲು ಬಗ್ಗೆ ಪ್ರೇಕ್ಷಕರಿಗೆ ಅಪಾರ ನಿರೀಕ್ಷೆಯಿರುವುದು ಸಹಜವೇ. ಕಾಪಿಕಾಡ್ ಅವರಿಗೆ ಕುಸೇಲ್ದರಸೆ ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಸಾಥ್ ನೀಡಿದ್ದಾರೆ. ಈ ಸಿನಿಮಾದಲ್ಲಿ ತಂದೆ ಕಾಪಿಕಾಡ್ ಮತ್ತು ಮಗ ಅರ್ಜುನ್ ಜೋಡಿಯೂ ನಟಿಸಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ತೆಲಿಕೆದ ಬೊಳ್ಳಿಯಲ್ಲಿ ಈ ಜೋಡಿ ಕಾಣಸಿಕ್ಕಿದ್ದು, ಮತ್ತೆ ಚಾಲಿಪೋಲಿಲು ಸಿನಿಮಾದಲ್ಲಿ ಅವರನ್ನು ಕಾಣುವ ಅವಕಾಶ ತುಳು ಚಿತ್ರಪ್ರೇಮಿಗಳಿಗೆ ಒದಗಿ ಬಂದಿದೆ.

ಚಾಲಿಪೋಲಿಲು ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ, ಅರವಿಂದ ಬೋಳಾರ್, ಚೇತನ್ ರೈ ಅವರ ಸ್ಪರ್ಧಾತ್ಮಕ ನಟನೆ ಒಂದು ದೊಡ್ಡ ಪ್ಲಸ್ ಪಾಯಿಂಟ್. ಸೀರಿಯಲ್ ನಟಿಯರಾದ ದಿವ್ಯಾ ಮತ್ತು ನವ್ಯಾ ಅವರು ನಾಯಕಿಯರಾಗಿದ್ದು, ಕಾಪಿಕಾಡ್ ಅವರ ಪುತ್ರ ಅರ್ಜುನ್ ಅವರು ಒಂದು ಪಾತ್ರದಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಸುರೇಂದ್ರ ಬಂಟ್ವಾಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪದ್ಮಜಾ ರಾವ್, ಲಕ್ಷ್ಮಣ ಕುಮಾರ್ ಮಲ್ಲೂರು, ಉಮೇಶ್ ಮಿಜಾರ್, ರಾಘವೇಂದ್ರ ರೈ, ಪ್ರಸನ್ನ ಶೆಟ್ಟಿ ಬೈಲೂರು, ಶೋಭಾ ರೈ, ಸರೋಜಿನಿ ಶೆಟ್ಟಿ, ತಿಮ್ಮಪ್ಪ ಕುಲಾಲ್ ಉಮಾನಾಥ ಕೋಟ್ಯಾನ್, ಕರ್ನೂರು ಮೋಹನ್ ರೈ, ಗಿರೀಶ್ ಶೆಟ್ಟಿ ಪೆರ್ಮುದೆ , ಪ್ರದೀಪ್ ಆಳ್ವ ಕದ್ರಿ, ಸದಾಶಿವ ದಾಸ್, ಆ್ಯಗ್ನಲ್, ಪಾಂಡುರಂಗ, ಮಂಗೇಶ್ ಭಟ್, ರವಿ ಸುರತ್ಕಲ್, ದಯಾನಂದ ಕುಲಾಲ್, ಸುರೇಶ್ ಕುಲಾಲ್, ಸುಮಿತ್ರಾ ರೈ, ರಶ್ಮಿಕಾ, ವಿದ್ಯಾಶ್ರಿ, ಕರುಣಾಕರ ಸರಿಪಳ್ಳ, ಸೋಮು ಜೋಕಟ್ಟೆ ಮೊದಲಾದ ಕಲಾವಿದರ ದಂಡೇ ಚಿತ್ರದಲ್ಲಿದೆ. ಹಾಗೆಂದು ಇದು ಕೇವಲ ಹಾಸ್ಯದಲ್ಲೇ ಮುಗಿದು ಹೋಗುವ ಸಿನಿಮಾವಲ್ಲ. ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರಿಗೆ ಹಾಸ್ಯದೊಂದಿಗೆ ಉತ್ತಮ ಸಂದೇಶವನ್ನು ನೀಡುವ ಕಥೆಯೂ ಇದರಲ್ಲಿದೆ. ಚಿತ್ರದಲ್ಲಿ ಬೆಟ್ಟಿಂಗ್, ಜ್ಯೋತಿಷದ ಬಗೆಗೂ ವಿಡಂಬನಾತ್ಮಕ ಕಥೆಯಿರುವುದು ಒಂದು ದೊಡ್ಡ ಪ್ಲಸ್ ಪಾಯಿಂಟ್.

ಚಿತ್ರದ ಸಹ ನಿರ್ಮಾಪಕರಾಗಿರುವ ಪತ್ರಕರ್ತ ಮತ್ತು ತುಳು ರಂಗಭೂಮಿ-ಸಿನಿಮಾ ರಂಗದ ಬಗ್ಗೆ ಅಪಾರ ಅನುಭವ ಹೊಂದಿರುವ ಜಗನ್ನಾಥ ಶೆಟ್ಟಿ ಬಾಳ ಅವರ ಶ್ರಮವೂ ಈ ಚಿತ್ರದಲ್ಲಿ ವಿಶೇಷ ವಾಗಿದೆ. ತುಳು ರಂಗಭೂಮಿಯ ಹೆಚ್ಚಿನೆಲ್ಲ ಪ್ರಮುಖ ಕಲಾವಿದರನ್ನು ಒಂದೇ ವೇದಿಕೆಗೆ ತಂದು, ಎಲ್ಲರನ್ನೂ ಈ ಸಿನಿಮಾಕ್ಕಾಗಿ ಬಣ್ಣ ಹಚ್ಚಿಸಿರುವುದು ಶ್ಲಾಘನೀಯ. ಹೀಗೆ ಹಲವಾರು ವೈಶಿಷ್ಟಗಳನ್ನು ಹೊಂದಿರುವ ಚಾಲಿಪೋಲಿಲು ಸಿನಿಮಾ ಈಗ ಎಡಿಟಿಂಗ್ ಪೂರೈಸಿ ಡಬ್ಬಿಂಗ್ ಹಂತದಲ್ಲಿದೆ. ಸೆಪ್ಟಂಬರ್ನಲ್ಲಿ ತೆರೆಗೆ ಬರಲಿರುವ ಚಾಲಿಪೋಲಿಲು ತುಳು ಚಿತ್ರಪ್ರೇಮಿಗಳು ಮತ್ತು ಚಿತ್ರಾಭಿಮಾನಿಗಳಿಗೆ ರಸದೌತಣ ನೀಡುವುದು ಖಚಿತ.

ಚಾಲಿಪೋಲಿಲು ಸಿನಮಾದಲ್ಲಿ ಪಾಂಡುರಂಗ, ದೇವದಾಸ್ ಕಾಪಿಕಾಡ್, ಸುಂದರ ರೈ ಮಂದಾರ, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಮುಂತಾದವರಿದ್ದಾರೆ.

1 ಪ್ರತಿಕ್ರಿಯೆ - ಶೀರ್ಷಿಕೆ - ತುಳು ಸಿನಿಮಾ ‘ಚಾಲಿಪೋಲಿಲು’ ಸೆಪ್ತೆಂಬರ್ ನಲ್ಲಿ ತೆರೆಗೆ

  1. KHUSHI, belthangady

    namma e tulu nadinalli tulu nadna janate yanna nambi chitrakke…chalane nidirodu thumba olle vishaya…adke e tulunadina janate paravagi dhanyavada..yakandre..nimge protsaha nidbekaddu tulu janadadavru hage innu protsaha sigalinta hasistini..
    innu hosa hosa kalavidarige avakashagalu siguvantagali,..agle namma e tulunadu beleyoke sadya…sadyavadast hosabarige avkasha kottu nodi…nimmanta olle kalavidarinda kaliyoke thuma ide aa ondu avakashana,,,,hosabarige kottu….avrannu e tulunadinalli ondu olle kalavidanannagi…madodu nimma hone nta nanna bhavane…nimma chitra tanda innu olle hantakke barali endu bayastini all the best…

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English