- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಏಷ್ಯನ್ ಕ್ರೀಡಾಕೂಟ : ಯೋಗೇಶ್ವರ್ ಗೆ ಚಿನ್ನ, ರಾಜ್ಯದ ಅಥ್ಲೀಟ್ ಪೂವಮ್ಮಗೆ ಕಂಚು

Yogeshwar Poovamma [1]

ಇಂಚೆನ್ : ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಪುರುಷರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ತೋರಿದರೆ ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಮಹಿಳೆಯರ 400 ಮೀ. ಓಟದಲ್ಲಿ ಕಂಚಿನ ಪದಕ್ ಪಡೆದಿದ್ದಾರೆ. ಪಂಜಾಬಿನ ಖುಷ್‌ಬಿರ್‌ ಕೌರ್ ಅವರು ಮಹಿಳೆಯ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದು, 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾನುವಾರ 9ನೇ ದಿನವೂ ಭಾರತದ ಪರ ಭರ್ಜರಿ ಪದಕ ಬೇಟೆಯಾಡಿದರು.

ಯೋಗೇಶ್ವರ್ ಅವರ ಚಿನ್ನದ ಸಾಧನೆಯೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಪೂವಮ್ಮ ಅವರು ನಿಗದಿತ ಗುರಿಯನ್ನು 52.36 ಸೆ.ಗಳಲ್ಲಿ ಕ್ರಮಿಸಿದರು.

ಬೆಳ್ಳಿ ಪದಕ: ಖುಷ್‌ಬಿರ್‌ ಕೌರ್ ಅವರು ಮಹಿಳಾ ವಿಭಾಗದ 20 ಕಿ.ಮೀ ದೂರದ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು.

21 ವರ್ಷದ ಕೌರ್ ಅವರು 1:33:07 ನಿಮಿಷಗಳಲ್ಲಿ ನಿಗದಿತ ದೂರವನ್ನು ತಲುಪಿದರು. 1:31:06 ನಿಮಿಷಗಳಲ್ಲಿ ಗುರಿ ತಲುಪಿದ ಚೀನಾದ ಲು ಕ್ಸಿಯುಝಿ ಚಿನ್ನದ ಪದಕ ಗೆದ್ದರು.

18 ಕಿ.ಮೀ ವರೆಗೂ ಮೂರನೇ ಸ್ಥಾನದಲ್ಲಿದ್ದ ಕೌರ್‌ ಬಳಿಕದ ಎರಡು ಕಿ.ಮೀ ದೂರದಲ್ಲಿ ವೇಗ ಹೆಚ್ಚಿಸಿಕೊಂಡು ಬೆಳ್ಳಿ ಪದಕ ಪಡೆದರು.

ಟೆನಿಸ್‌ನಲ್ಲಿ ಮೂರು ಕಂಚು: ಭಾರತದ ಟೆನಿಸ್‌ ಆಟಗಾರರು ಪದಕ ಗೆಲ್ಲುವಲ್ಲಿ ಹಿಂದೆ ಬೀಳಲಿಲ್ಲ. ಮೂರು ಕಂಚು ಜಯಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭರವಸೆಯ ಆಟಗಾರ ಯೂಕಿ ಭಾಂಬ್ರಿ ಕಂಚು ಗೆದ್ದರು. ಪುರುಷರ ಡಬಲ್ಸ್‌ನಲ್ಲಿ ದಿವಿಜ್‌ಶರಣ್ ಅವರ ಜತೆಗೂಡಿದ ಭಾಂಬ್ರಿ ಭಾರತಕ್ಕೆ ಮತ್ತೊಂದು ಕಂಚು ತಂದಿತ್ತರು.

ಇನ್ನು, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ಪ್ರಾರ್ಥನಾ ಥೋಂಬರೆ ಅವರು ಕಂಚಿನ ಪದಕ ಗೆದ್ದರು.

ನಿರಾಸೆ: ಭಾರತೀಯ ಮಹಿಳಾ ತಂಡ ಆರ್ಚರಿ ಸ್ಪರ್ಧೆಯ ರಿಕರ್ವ್‌ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನೂ ಕಳೆದುಕೊಂಡು ನಿರಾಸೆ ಅನುಭವಿಸಿದರು.

ಭಾನುವಾರ 6 ಪದಕ (ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚು) ಸೇರಿ ಭಾರತ ಒಟ್ಟು ನಾಲ್ಕು ಬಂಗಾರ, ಆರು ಬೆಳ್ಳಿ ಹಾಗೂ 24 ಕಂಚಿನ ಪದಕಗಳೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.