- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಮೂರು ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ

Adoption [1]

ಬಂಟ್ವಾಳ: ಆರ್ಥಿಕವಾಗಿ ದುರ್ಬಲ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ತಾಲೂಕಿನ ಮೂಡುನಡುಗೋಡು ಗ್ರಾಮದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಮೂರು ಮಂದಿ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿಕೊಂಡು ಸಂಪೂರ್ಣ ವಿದ್ಯಾಭ್ಯಾಸ ನೀಡಲು ಮುಂದಾಗಿದೆ.

ಭಾನುವಾರ ಕರೆಂಕಿ ಶ್ರೀ ದುರ್ಗಾ ಪರಮೇಶ್ವರೀ ದೇವಿ ದೇವಸ್ಥಾನದ ವಠಾರದಲ್ಲಿ ನಡೆದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಬಡ ವಿದ್ಯಾರ್ಥಿಗಳ ದತ್ತು ಸ್ವೀಕರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರ ಒಪ್ಪಿಗೆಯಂತೆ ದತ್ತು ಸ್ವೀಕಾರ ನಡೆಯಿತು.

ತಂದೆ- ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆಶ್ರಯಲ್ಲಿ ಬೆಳೆಯುತ್ತಿದ್ದ ಕರ್ಪೆ ಗ್ರಾಮದ ಸುಹಾಸ್, ಅನಾರೋಗ್ಯ ಪೀಡಿತ ತಂದೆ, ಬೀಡಿಕಟ್ಟಿ ಜೀವನ ಸಾಗಿಸುತ್ತಿರುವ ತಾಯಿಯ ಬಡತನದ ನಡುವೆ ಜೀವನ ನಡೆಸುತ್ತಿದ್ದ ವಿಘ್ನೇಶ್, ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಬಡತನದ ಜೀವನ ನಡೆಸುತ್ತಿದ್ದ ಅಮ್ಟಾಡಿ ಗ್ರಾಮದ ಸಿಂಚನ, ಈ ಮೂರು ಮಂದಿ ಬಡ ವಿದ್ಯಾರ್ಥಿಗಳನ್ನು ಶ್ರೀ ದುರ್ಗಾ ಫ್ರೆಂಡ್ಸ್ ಶೈಕ್ಷಣಿಕ ದತ್ತು ಸ್ವೀಕರಿಸಿಕೊಂಡು ಅವರ ಸಂಪೂರ್ಣ ವಿದ್ಯಾಭ್ಯಾಸದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಅಲ್ಲದೆ ಸ್ಥಳೀಯ ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿನಿ ಭವ್ಯ ಹಾಗೂ ಮತ್ತಿತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಅವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸಲು ಸಂಘ ನಿರ್ಧರಿಸಿದೆ.

ಇದರೊಂದಿಗೆ ಸ್ಥಳೀಯ ಸುಮಾರು ಇನ್ನೂರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ನೂತನ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಎಲ್ಲಾ ಬಡಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಮಾದರಿಯಾಗಿಟ್ಟುಕೊಂಡು ಎಲ್ಲಾ ಗ್ರಾಮಗಳಲ್ಲೂ ಅಲ್ಲಿನ ಯುವಕ ಸಂಘಗಳು ದಾನಿಗಳ ನೆರವು ಪಡೆದುಕೊಂಡು ನಡೆಸಿದರೆ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಿ ಉಳಿಯಲು ಸಾಧ್ಯವಿಲ್ಲ ಎಂದರು.

ವೇದಿಕೆಯಲ್ಲಿ ಅಂಚನ್ ಗಾರ್ಮೆಂಟ್ಸ್‌ನ ಶೇಖರ್ ಅಂಚನ್, ಪ್ರಮುಖರಾದ ಮೋನಪ್ಪ ಸಪಲ್ಯ, ಧರ್ನಪ್ಪ ಪೂಜಾರಿ, ಚೆನ್ನಪ್ಪ ಪೂಜಾರಿ, ನಾರಾಯಣ ಕುಲಾಲ್, ಕೃಷ್ಣಮ್ಮ , ಮೀನಾಕ್ಷಿ, ರೇವತಿ, ನಾರಾಯಣ ಗೌಡ, ಶ್ರೀ. ಕ್ಷೇ. ಧ.ಗ್ರಾ. ಯೋ. ಸಿದ್ದಕಟ್ಟೆ ವಲಯ ಮೇಲ್ವಿಚಾರಕ ವಿನಾಯಕ ಗುಣಗ, ವಸಂತ ಗೌಡ ಉಪಸ್ಥಿತರಿದ್ದರು. ಶ್ರೀ ದುರ್ಗಾ ಫ್ರೆಂಡ್ಸ್‌ನ ಕಾರ್ಯದರ್ಶಿ ನವೀನ್ ಸೇಸಗುರಿ, ಕೋಶಾಧಿಕಾರಿ ವಿನೋಧ್ ರಾಮನಗರ, ಪೂವಪ್ಪ ಮೆಂಡನ್ ಹಾಜರಿದ್ದರು.