- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸ್ಥಳಾಂತರ ಎಂಬ 40 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೇಕಿದೆಯೇ

Dc Complex [1]

ಮಂಗಳೂರು : ಯಾರಾದರೂ ಒಬ್ಬ ನಾಗರಿಕ ಬಂದು ನಿಮ್ಮ ಬಳಿ ದಯವಿಟ್ಟು ಜಿಲ್ಲಾಧಿಕಾರಿ ಕಚೇರಿಯನ್ನು ಮಂಗಳೂರಿನಿಂದ ಹೊರಗೆ ಎಲ್ಲಿಯಾದರೂ ದೂರ ಶಿಫ್ಟ್ ಮಾಡಿಬಿಡಿ. ನಮಗೆ ಇಲ್ಲಿ ಬರಲು ತುಂಬಾ ಕಷ್ಟವಾಗುತ್ತದೆ ಎಂದು ಬರೆದು ಕೊಟ್ಟಿದ್ದಾನಾ ಅಥವಾ ಮಂಗಳೂರು ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಗೆ ಬಂದರೆ ಹೆಜ್ಜೆಗಳ ಅಂತರದಲ್ಲಿ ಸಿಗುವ ಅಷ್ಟೂ ಕಚೇರಿಗಳನ್ನು ತೆಗೆದು ಬೇರೆಡೆ ಹಾಕಿದರೆ ಅದಕ್ಕಿಂತ ಬೇರೆ ಉಪಕಾರ ಇಲ್ಲ ಎಂದು ಮಂಗಳೂರಿನ ನಾಗರಿಕನಿಗೆ ಅನಿಸುತ್ತಿದೆಯಾ? ಅಥವಾ ಪುತ್ತೂರು, ಬೆಳ್ತಂಗಡಿ, ಸುಳ್ಯ ದ ಜನರಿಗೆ ಸ್ಟೇಟ್ ಬ್ಯಾಂಕಿನ ತನಕ ಬರುವುದು ಕಷ್ಟ ಎನ್ನುವ ಭಾವನೆ ಜಿಲ್ಲಾಡಳಿತಕ್ಕೆ ಬಂದಿದೆಯಾ? ಯಾವುದಕ್ಕಾದರೂ ಒಂದಕ್ಕೆ ಉತ್ತರವನ್ನು ಜಿಲ್ಲಾಧಿಕಾರಿಗಳು ನೀಡಿದರೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮಂಗಳೂರಿನ ಹೊರಗೆ ಯಾಕೆ ನಿರ್ಮಾಣವಾಗುತ್ತದೆ ಎಂದು ಜನರಿಗೆ ಗೊತ್ತಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಯಾಕೆ ಮಂಗಳೂರಿನ ಹೊರ ವಲಯದ ಪಡೀಲ್ ನಲ್ಲಿ ನಿರ್ಮಾಣ ವಾಗಬೇಕು ಎನ್ನುವ ಬಗ್ಗೆ ಜಿಲ್ಲಾಧಿಕಾರಿಗಳು ಒಂದು ಜನಾಭಿಪ್ರಾಯ ರೂಪಿಸುವ ಪ್ರಯತ್ನ ಮಾಡಿ ನಂತರ ಆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವುದು ಉತ್ತಮ. ಯಾಕೆಂದರೆ ಈ ವಿಷಯ ಕೇವಲ ಶಿಫ್ಟ್ ಎಂಬ ಶಬ್ದಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಸರಕಾರದ ಮೇಲೆ ಆರ್ಥಿಕ ಹೊರೆ ಕೂಡ ಬೀಳುತ್ತದೆ. ಅದು ಕೂಡ ಬರೊಬ್ಬರಿ 40 ಕೋಟಿಗಳಷ್ಟು. ಅದರ ಅಗತ್ಯ ಇದೆಯಾ ಎನ್ನುವುದು ಮೊದಲ ಪ್ರಶ್ನೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಾಗರಿಕರಿಗೂ ಅನುಕೂಲಕರವಾಗಲಿ ಎಂದು ಹೃದಯ ಭಾಗದಲ್ಲಿಯೇ ನಿರ್ಮಿಸಿದ ಆರ್ ಟಿ ಓ, ತಾಲೂಕು ಪಂಚಾಯತ್, ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿಗಳನ್ನು ಎನು ಮಾಡುವುದು. ಅವು ಇರುವ ಕಚೇರಿಗಳನ್ನು ನಿರ್ಮಿಸಲು ಖರ್ಚು ಮಾಡಿದ ಹಣ ಪಾಪದ ನಾಗರಿಕನ ತೆರಿಗೆಯ ಹಣವಲ್ಲವೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ನಿರ್ಮಾಣ ಮಾಡಿದ ಜಿಲ್ಲಾಡಳಿತದ ಕಚೇರಿಗಳನ್ನು ಶಿಫ್ಟ್ ಮಾಡುವುದರಿಂದ ಹಣ ವ್ಯರ್ಥ ಎಂದು ಅನಿಸುವುದಿಲ್ಲವೇ. ಅಷ್ಟಕ್ಕೂ ಜಿಲ್ಲಾಧಿಕಾರಿ ಕಚೇರಿ ಇರುವ ಕಟ್ಟಡವನ್ನು ಮಿನಿ ವಿಧಾನಸೌಧ ಎನ್ನುವ ಕಾಮಗಾರಿಯ ಅಡಿಯಲ್ಲಿಯೇ ನಿಮಾಣ ಮಾಡಿದ್ದು. ಆದರೆ ಅದರ ಬಳಿಕ ಒಂದು ಹಂತದ ಕಾಮಗಾರಿ ಮಾತ್ರ ನಡೆಯಿತೇ ವಿನ; ಸಂಪೂರ್ಣವಾಗಿ ಮಿನಿ ವಿಧಾನ ಸಭಾ ಪ್ರಾಜೆಕ್ಟ್ ಈಡೇರಲೇ ಇಲ್ಲ. ಅಷ್ಟಕ್ಕೂ ಯಾವುದೇ ಯೋಜನೆ ಅನುಷ್ಟಾನಕ್ಕೆ ತರುವ ಮೊದಲು ಅದನ್ನು ಜಿಲ್ಲೆಯ ನಾಗರಿಕರಿಗೆ ಹೊರೆಯಾಗಬಾರದು ಎನ್ನುವ ಚಿಂತನೆ ಅದನ್ನು ತರಲು ಪ್ರಯತ್ನಿಸುವವರಲ್ಲಿ ಇರಬೇಕು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಯಾಕೆ ಅದರ ಹಿಂದೆ ಬಿದ್ದಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಅವರಲ್ಲಿ ಪ್ರತಿ ಬಾರಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಶಿಫ್ಟ್ ಕುರಿತಾದ ಸಭೆಗಳು ನಡೆದಾಗ ಜಿಲ್ಲಾಧಿಕಾರಿಗಳು ನೀಡುತ್ತಿರುವ ಉತ್ತರ ಒಂದೇ, ಮಂಗಳೂರು ನಗರದ ದಟ್ಟಣಿ ಹೆಚ್ಚಾಗಿದೆ. ಅದನ್ನು ತಗ್ಗಿಸಲು ಇದು ಅನಿವಾರ್ಯ. ಈ ಒಂದೇ ವಾಕ್ಯ ಹಿಡಿದುಕೊಂಡು ಸಚಿವರು ಮತ್ತು ಜಿಲ್ಲಾಧಿಕಾರಿಗಳು ಶಿಫ್ಟ್ ಬಗ್ಗೆ ಚಿಂತಿಸುತ್ತಿದ್ದರೆ ಅದರಷ್ಟು ಬಾಲಿಶತನ ಬೇರೆ ಯಾವುದೂ ಇಲ್ಲ.

ಮೊದಲನೇಯದಾಗಿ ಮಂಗಳೂರು ಖಾಸಗಿ ಸರ್ವೀಸ್ ಬಸ್ ನಿಲ್ದಾಣವನ್ನು ಮಂಗಳೂರಿನಿಂದ ಪಂಪ್ ವೆಲ್ ಗೆ ಶಿಫ್ಟ್ ಮಾಡುವ ಪ್ರಕ್ರಿಯೆ ಏನಾಯಿತು ಸ್ವಾಮಿ? ಅದಕ್ಕೆ ನೀವು ಕೊಡುತ್ತಿರುವ ಕಾರಣ ಇದೇ ಅಲ್ವಾ, “ಮಂಗಳೂರು ನಗರದ ದಟ್ಟಣೆ ಹೆಚ್ಚಾಗಿದೆ” ನೀವು ಯಾವುದೇ ಹೊಸ ಪ್ರಾಜೆಕ್ಟ್ ತರುವಾಗ ಕೊಡುವ ಕಾರಣ ಮತ್ತು ನೆನೆಗುದಿಗೆ ಬಿದ್ದಿರುವ ನಿಮ್ಮದೇ ಹಳೇ ಪ್ರಾಜೆಕ್ಟ್ ಗೆ ಕೊಟ್ಟಿರುವ ಕಾರಣ ಒಂದೇ ಆಗುವುದಾದರೇ ಮೊದಲು ಹಳೇ ಪ್ರಾಜೆಕ್ಟ್ ನ ಕೆಲಸ ಮುಗಿಸಿ ನಂತರ ಹೊಸತಕ್ಕೆ ಕೈ ಹಾಕಬಹುದಲ್ಲಾ? ಮಂಗಳೂರಿನ ನಾಗರಿಕರು ಸ್ವಲ್ಪ ಸೂಕ್ಷ್ಮವಾಗಿ ಯೋಚಿಸಬೇಕಾದ ಅಗತ್ಯ ಇಲ್ಲಿದೆ. ಈಗ ಮಂಗಳೂರು ನಗರದೊಳಗೆ ಸುಮಾರು 789 ಬಸ್ ಗಳು ಓಡಾಡುತ್ತಿರುತ್ತವೆ. ನೀವು ಒಂದು ವೇಳೆ ಮಂಗಳೂರಿನ ನಗರದ ಹೊರ ಭಾಗದಲ್ಲಿರುವ ಪಂಪ್ ವೆಲ್ ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಲ್ಲಿ, ಈ 789 (ಸರ್ವೀಸ್ ಮತ್ತು ಸಿಟಿ ಬಸ್ಸುಗಳು ಸೇರಿ) ಬಸ್ಸುಗಳಲ್ಲಿ ಕನಿಷ್ಟ 700 ಬಸ್ಸುಗಳನ್ನು ಸ್ಟೇಟ್ ಬ್ಯಾಂಕ್ ಪರಿಸರದಲ್ಲಿರುವ ದಶಕದಿಂದ ತಾತ್ಕಾಲಿಕ ನಿಲ್ದಾಣವೆಂದೆ ಗುರುತಿಸಲ್ಪಟ್ಟಿರುವ ಬಸ್ ನಿಲ್ದಾಣದೊಳಗೆ ಬರುವ ಅಗತ್ಯ ಇರುವುದಿಲ್ಲ. ಆಗ 80 ರಿಂದ 90 ಬಸ್ಸುಗಳನ್ನು ಮಾತ್ರ ಪಂಪ್ ವೆಲ್ ನಿಂದ ಸ್ಟೇಟ್ ಬ್ಯಾಂಕ್ ನಡುವಿರುವ ಸ್ಥಳಗಳಿಗೆ ಓಡಾಡಿಸಿದ್ದಲ್ಲಿ ಮತ್ತು ಭವಿಷ್ಯದಲ್ಲಿ ಮಂಗಳೂರಿಗೆ ಸಿಗುವ 35 ನರ್ಮ್ ಬಸ್ಸುಗಳನ್ನು ಬಳಸಿಕೊಂಡಲ್ಲಿ ಮಂಗಳೂರು ನಗರದೊಳಗೆ ಬಸ್ಸುಗಳ ಜಂಜಾಟ ಕಡಿಮೆಯಾಗಲಿದೆ…

ಈಗ ಹೇಗಾಗಿದೆ.
ಕಳೆದ 3 ದಶಕಗಳಿಂದ ಮಂಗಳೂರಿಗೆ ಒಂದು ಸುಸಜ್ಕಿತ ಶಾಶ್ವತ ಬಸ್ ನಿಲ್ದಾಣ ನಿರ್ಮಿಸಲಾಗದ ಜಿಲ್ಲಾಡಳಿತ, ಈಗ ಏಕಾಏಕಿ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿರುವುದು ನೋಡುವಾಗ ಇವರಿಗೆ ಏನು ಹೇಳುವುದು ಎಂದು ಗೊತ್ತಾಗುವುದಿಲ್ಲ. ಇನ್ನೂ ಕಳೆದ 8 ವರ್ಷಗಳಿಂದ ಒಂದು ಹೊಸ ತಾಲೂಕು ಕಚೇರಿ ನಿರ್ಮಿಸಲು ಒದ್ದಾಡುತ್ತಿರುವವರಿಗೆ ಈಗ ಹೊಸ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕನಸು ಬಿದ್ದಿದೆ. ಈ ಹೊಸ ಕಾಮಗಾರಿಗೆ ರಾಜ್ಯ ಸರಕಾರ ಎತ್ತಿಟ್ಟಿರುವ ಮೊತ್ತ 40 ಕೋಟಿ. ಮೊದಲಿಗೆ ಮಂಗಳೂರಿಗೆ ಬೇಕಾಗಿರುವುದು ಒಂದು ಉತ್ತಮ ಬಸ್ ನಿಲ್ದಾಣ. ಮಳೆ ಬಂದರೆ ತೊಯ್ಯುವ, ಜೋರು ಗಾಳಿ ಬಂದರೆ ಪಟಪಟ ಹೊಡೆದುಕೊಳ್ಳುವ ಮಾಡನ್ನು ಹೊಂದಿರುವ ಸರಿಯಾಗಿ ಜನ ಕುಳಿತುಕೊಳ್ಳಲು ವ್ಯವಸ್ಥೆನೆ ಇಲ್ಲದಿರುವ ಮಂಗಳೂರು ಬಸ್ ನಿಲ್ದಾಣ ಬೆಳೆಯುತ್ತಿರುವ ಮಂಗಳೂರಿಗೆ ಶೋಭೆ ತರುವಂತದ್ದು ಅಲ್ಲವೇ ಅಲ್ಲ. ಬೇಕಾದರೆ ಹಾಸನದಲ್ಲಿ ಎಚ್.ಡಿ. ದೇವೇಗೌಡರು ಕಟ್ಟಿರುವ ರಾಜ್ಯ ಸರಕಾರಿ ಬಸ್ ನಿಲ್ದಾಣವನ್ನು ಒಮ್ಮೆ ನೋಡಿಕೊಂಡು ಬರಲಿ. ಅದು ಬಸ್ ನಿಲ್ದಾಣವೋ ಅಥವಾ ಏರ್ ಪೋರ್ಟೋ ಎಂದು ಗೊತ್ತಾಗದಷ್ಟು ಅಧ್ಬುತವಾಗಿದೆ.

ನಾವು ಬುದ್ಧಿವಂತ ಜನ ನಿಜ. ಆದರೆ ಅಭಿವೃದ್ಧಿ ಮಾತ್ರ ಯಾವ ಎಂಗಲ್ ನಿಂದ ಎಂದು ಗೊತ್ತಿಲ್ಲದಷ್ಟು ಬುದ್ಧಿವಂತರು. ಇನ್ನೂ ಆಶ್ಚರ್ಯ ಎಂದರೆ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಗುರುತಿಸಿರುವ ಜಾಗದಲ್ಲಿ ಅಪರೂಪ ಎನಿಸಿರುವ ಅನೇಕ ಮರಗಳ ಸಂಕುಲಗಳಿವೆ. ಸುಮಾರು 400 ರಷ್ಟು ಫಲವತ್ತಾದ ಮರಗಳ ಮತ್ತು ಸಸ್ಯ ಸಂಕುಲದ ಮಾರಣ ಹೋಮ ನಡೆದ ಬಳಿಕವಷ್ಟೇ ಅಲ್ಲಿ ಬಸ್ ನಿಲ್ದಾಣ ಸಾಧ್ಯ. ಅಷ್ಟೇ ಅಲ್ಲದೆ ಅಪರೂಪವೆನಿಸಿದ ಹಲವಾರು ಪ್ರಾಣಿ ಪಕ್ಷಿಗಳು ನಾಶವಾಗಲಿದೆ. ಮರಗಿಡಗಳನ್ನು ಉಳಿಸಿ ಎಂದು ಕೂಗಾಡುವ ನಾವು ಅವೇ ಅಮೂಲ್ಯ ಮರಗಳನ್ನು ಧರೆಗುರುಳಿಸಿ ಅಲ್ಲಿ ಭವ್ಯ ಸೌಧ ನಿರ್ಮಿಸಿದರೆ ಅದು ಹಸಿರನ್ನು ಕೊಂದು ಅದರ ಮೇಲೆ ಸಮಾಧಿ ನಡೆಸಿದ ಹಾಗಲ್ಲವೇ? ಪರಿಸರದ ನಾಶದಿಂದ ಮಳೆ ಬೆಳೆ ಸರಿಯಾಗಿ ಬರುತ್ತಿಲ್ಲ, ಉಷ್ಣತೆ ಹೆಚ್ಚಾಗಿದೆ, ಅನೇಕ ಜೀವಿ ಸಂಕುಲಗಳು ವಿನಾಶದತ್ತ ಮುಖ ಮಾಡಿ ಆಗಿದೆ ಎಂದು ಮಾಧ್ಯಮಗಳಲ್ಲಿ ಓದಿರುವ, ಸ್ವತ: ಅನುಭವಕ್ಕೆ ಬಂದಿರುವ ನಮಗೆ ಬುದ್ಧಿ ಬರುವುದು ಯಾವಾಗ?.

ರಾಷ್ಟ್ರೀಯ ಹೆದ್ದಾರಿ 75 ಅತೀ ಹೆಚ್ಚು ವಾಹನ ಓಡಾಡುವ ರಸ್ತೆ. ಇಲ್ಲಿ ಪ್ರತಿ ನಿತ್ಯ ಟ್ರಾಫಿಕ್ ಜಾಮ್ ಸಾಮಾನ್ಯ, ಅಂತಹ ಪ್ರದೇಶದಲ್ಲೇ ಈಗ ಜಿಲ್ಲಾಧಿಕಾರಿ ಸಂಕೀರ್ಣ ನಿರ್ಮಿಸ ಹೊರಟಿದ್ದಾರೆ. ಇಲ್ಲಿ ನಿತ್ಯ ಪ್ರತಿಭಟನೆಗಳು ಯೇನಾದರೂ ನಡೆದರೆ ಸಂಚಾರ ವ್ಯವಸ್ಥೆ ಹದಗೆಡಬಹುದು. ನಾಲ್ಕು ಕಡೆಯಿಂದ ರಸ್ತೆ ಸೇರುವ ಪಂಪ್‌ವೆಲ್ ಸರ್ಕಲ್ ಸಹ ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಬಹುದು.

ಯಾಕೋ, ಮಂಗಳೂರಿನ ನಾಗರಿಕರು ಚಳಿಗೆ ಚಾದರ ಹೊದ್ದು ಮಲಗಿರುವಾಗ ಅನೇಕ ವ್ಯರ್ಥ ಯೋಜನೆಗಳು ಹಾಸಿಗೆಯ ಅಡಿಯಲ್ಲಿ ನುಸುಳಿದರೂ ನಮಗೆ ಗೊತ್ತಾಗುವುದಿಲ್ಲ!

ಕೃಪೆ : ಮೆಗಾ ಮಿಡಿಯಾ ನ್ಯೂಸ್ ಪತ್ರಿಕೆ