ಮಕ್ಕಳಲ್ಲಿ ತಂದೆತಾಯಂದಿರ ಮೇಲಿರುವ ಗೌರವ ಕಡಿಮೆಯಾಗುತ್ತಿದೆ : ಸುಲೋಚನಾ ಭಟ್

3:18 PM, Sunday, January 17th, 2016
Share
1 Star2 Stars3 Stars4 Stars5 Stars
(4 rating, 5 votes)
Loading...
mathru devobhava

ಉಪ್ಪಳ: ಇತ್ತೀಚೆಗೆ ಮಕ್ಕಳಲ್ಲಿ ತಂದೆತಾಯಂದಿರ ಮೇಲಿರುವ ಗೌರವ ಕಡಿಮೆಯಾಗುತ್ತಿದೆ, ತಾಯಿಯನ್ನು ‘ಮಾತೃದೇವೋಭವ’ ಎಂದು ಹೇಳುತ್ತೇವೆ, ಚಿಕ್ಕ ಮಕ್ಕಳ ಮನಸ್ಸಿನಲ್ಲಿ ನಾವು ಒಳ್ಳೆಯ ಚಿಂತನೆಯನ್ನು ಬೆಳೆಸಿದರೆ ಮುಂದೆ ಅದು ಬೆಳೆದು ಹೆಮ್ಮರವಾಗುತ್ತದೆ, ಮಕ್ಕಳ ಮನಸ್ಸನ್ನು ಅರಳುವ ಸಮಯದಲ್ಲೇ ತಿದ್ದಬೇಕು, ಈ ಹಿನ್ನೆಲೆಯಲ್ಲಿ ಮಾತೃಪೂಜನ-ಮಾತೃಭೋಜನ ಕಾರ್ಯಕ್ರಮವು ಪೂರಕವಾಗಿದೆ ಎಂದು ಕರ್ನಾಟಕ ಬಾಲಭವನ ಸೊಸೈಟಿಯ ಮಾಜಿ ಅಧ್ಯಕ್ಷೆ ಹಾಗೂ ಕರ್ನಾಟಕ ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷೆ ಸುಲೋಚನಾ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಇತ್ತೀಚೆಗೆ ನಡೆದ ಮಾತೃಪೂಜನ-ಮಾತೃಭೋಜನ ಕಾರ್ಯಕ್ರಮ ಹಾಗೂ ವಿವೇಕಾನಂದ ಜಯಂತೀ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ತುಳಸೀದಾಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಸದಸ್ಯೆ ಜಯಲಕ್ಷ್ಮೀ ಕಾರಂತ್, ಶಾಲಾ ಮಾತೃ ಸಮಿತಿಯ ಅಧ್ಯಕ್ಷೆ ರೇಖಾ ಪ್ರದೀಪ್, ಶಿಶುವಾಟಿಕಾ ಮಾತೃ ಸಮಿತಿಯ ಅಧ್ಯಕ್ಷೆ ದಿವಿಜಾ, ಗಾಯತ್ರೀ ಮಾತೃ ಸಮಿತಿಯ ಅಧ್ಯಕ್ಷೆ ವಾಣಿಶ್ರೀ, ಶಾಲಾ ಆಡಳಿತಾಧಿಕಾರಿ ಕಮಲಾಕ್ಷ ಮಾಸ್ತರ್, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರತಿಭಾ ಶ್ರೀಧರ್ ಹಾಗೂ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾತೃಶ್ರೀ ಪದ್ಮಾವತೀ ಅಮ್ಮನವರು ಉಪಸ್ಥಿತರಿದ್ದರು.

ಬಳಿಕ ವಿದ್ಯಾಲಯದ ವಿದ್ಯಾರ್ಥಿಗಳಾದ ಶ್ರೀಹರಿ, ರಾಹುಲ್ ಕೃಷ್ಣ ಹಾಗೂ ಪ್ರದ್ಯೋತ್ ಇವರು ಸ್ವಾಮೀ ವಿವೇಕಾನಂದರ ವೇಷಭೂಷಣಗಳನ್ನು ಧರಿಸಿ ಸಭಾಸದರ ಗಮನವನ್ನು ಸೆಳೆದರು. ಶಾಲಾ ಶಿಕ್ಷಕ ಸುಬ್ರಹ್ಮಣ್ಯ ಭಟ್ ಸ್ವಾಮೀ ವಿವೇಕಾನಂದರ ಕುರಿತು ಮಾಹಿತಿಯನ್ನು ನೀಡಿ ಎಲ್ಲರಿಗೂ ವಿವೇಕಾನಂದ ಜಯಂತಿಯ ಶುಭಾಶಯಗಳನ್ನು ಕೋರಿದರು.

ಶಾಲಾ ಆಡಳಿತ ಸಮಿತಿಯ ಸದಸ್ಯೆ ಜಯಲಕ್ಷ್ಮೀ ಕಾರಂತ್ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸೇವಾನಿಧಿಯ ಅತಿ ಹೆಚ್ಚು ಹಣ ಸಂಗ್ರಹಿಸಿದ 22ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪದ್ಮಾವತೀ ಅಮ್ಮನವರು ಕಾರ್ಯಕ್ರಮದ ಮುಖ್ಯ ಅತಿಥಿ ಸುಲೋಚನಾ ಭಟ್ ರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಶಾಲಾ ವಿದ್ಯಾರ್ಥಿಗಳಾದ ೧೦ನೇ ತರಗತಿಯ ಸುಧಾಮ ಹಾಗೂ 9ನೇ ತ್ರಗತಿಯ ಸಂಪ್ರೀತಾ ಮಯ್ಯ ಹಾಡಿನ ಮೂಲಕ ಸಭಿಕರನ್ನು ರಂಜಿಸಿದರು. ಕು. ಜಯಲಕ್ಷ್ಮೀ ಮಾತಾಶ್ರೀ ಸ್ವಾಗತಿಸಿ ಪ್ರಭಾವತೀ ಮಾತಾಶ್ರೀ ವಂದನಾರ್ಪಣೆಗೈದರು. ಕು. ಸ್ಮಿತಾ ಮಾತಾಶ್ರೀ ಕಾರ್ಯಕ್ರಮ ನಿರೂಪಿಸಿದರು.

mathru devobhava
ಮುದ್ರಿಸಿ ಮುದ್ರಿಸಿ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English