- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸ್ತ್ರೀ ವೇಷದ ಶಕಪುರುಷ ಐತ್ತಪ್ಪ ಶೆಟ್ಟಿ ಸಂಸ್ಮರಣೆ

Ithappa shetty [1]

ಉಪ್ಪಳ: ತೆಂಕುತಿಟ್ಟು ಯಕ್ಷಗಾನದಲ್ಲಿ ಹಲವು ಪಾತ್ರಚಿತ್ರಣಗಳನ್ನು ಸೃಜಿಸಿ, ರಂಗಬದ್ಧ ನಾಟ್ಯಗಳಿಂದ ಕಲೆಗೆ ಜೀವತುಂಬಿದ ದಿ| ಸ್ತ್ರೀವೇಷಧಾರಿ ಐತ್ತಪ್ಪ ಶೆಟ್ಟರು ಅಗಲಿ 4ದಶಕ ಸಂದ ಬಳಿಕ ಅವರ ಸಂಸ್ಮರಣೆ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ. ತೆಂಕಣ ಯಕ್ಷಗಾನದ ಸ್ತ್ರೀವೇಷಗಳಿಗೆ ಖಚಿತವಾದ ರಂಗನಡೆಯನ್ನು ರೂಪಿಸಿಕೊಟ್ಟು ಕೀರ್ತಿಶೇಷರಾದ ಐತ್ತಪ್ಪ ಶೆಟ್ಟರ ಕೊಡುಗೆಗಳ ಬಗ್ಗೆ ದಾಖಲಾತಿಯಾಗದೇ ಹೋದುದು ಚಾರಿತ್ರಿಕ ನಷ್ಟ. ಅವರು ಯಕ್ಷಪರಂಪರೆಗೆ ಅಸಾಮಾನ್ಯ ಕೊಡುಗೆಯನ್ನಿತ್ತ ಅನನ್ಯ ಕಲಾವಿದ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಸ್.ನಾರಾಯಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ದಿ|ಸ್ತ್ರೀವೇಷಧಾರಿ ಪೈವಳಿಕೆ ಐತ್ತಪ್ಪ ಶೆಟ್ಟರ ಪ್ರಥಮ ಸಂಸ್ಮರಣಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಐತ್ತಪ್ಪ ಶೆಟ್ಟರನ್ನು ಸಂಸ್ಮರಿಸಿ 60-70 ರ ದಶಕದ ಯಕ್ಷಗಾನದ ದಿನಗಳನ್ನು ಮೆಲುಕು ಹಾಕಿದರು.

ಡಾ| ಪಿ. ರಾಮಕೃಷ್ಣ ಭಟ್ ಪದ್ಯಾಣ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಐತ್ತಪ್ಪ ಶೆಟ್ಟರ ಶಿಷ್ಯ, ಹಿರಿಯ ಕಲಾವಿದ ಪೆರ್ವೋಡಿ ನಾರಾಯಣ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತನ್ನ ಕಲಾಜೀವನಕ್ಕೆ ದಾರಿ ತೋರಿಸಿದ ಗುರುಗಳ ನೆನಪಲ್ಲಿ ಅವರ ಕುಟುಂಬಿಕರು ನೀಡುವ ಈ ಸನ್ಮಾನ ಗುರುಗಳ ಪ್ರಸಾದವೆಂದು ಸ್ವೀಕರಿಸುತ್ತೇನೆಂದು ಅವರು ನುಡಿದರು. ’ಕಣಿಪುರ’ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ’ಫಲಾಪೇಕ್ಷೆಯಿಲ್ಲದೇ ಕಲೆಗೆ ಕೊಡುಗೆಯಿತ್ತ ಪೂರ್ವಸೂರಿಗಳನ್ನು ನೆನಪಿಸಿ ಅವರ ತ್ಯಾಗ, ಕೊಡುಗೆಗಳನ್ನು ಸ್ಮರಿಸುವುದೆಂದರೆ ವರ್ತಮಾನದ ಎಳೆಯರಿಗೆ ಇತಿಹಾಸ ತಿಳಿಸುವುದು ಮತ್ತು ಭವಿಷ್ಯಕ್ಕೆ ಸ್ಪೂರ್ತಿ ತುಂಬಿಸುವ ಚೇತನದಾಯಕ ಕೆಲಸ ಎಂದರು. ನ್ಯಾಯವಾದಿ ಪೆರ್ವೋಡಿ ರಾಮಕೃಷ್ಣ ಭಟ್, ಅರ್ಥದಾರಿ ವಿ,ಬಿ.ಹಿರಣ್ಯ, ಬಾಯಾರು ಪಂಚಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಮೋನಪ್ಪ ಶೆಟ್ಟಿ, ಶ್ರೀ ಪಂಚಲಿಂಗೇಶ್ವರ ಸೇವಾಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಉಳುವಾನ ಉಪಸ್ಥಿತರಿದ್ದರು. ಐತ್ತಪ್ಪ ಶೆಟ್ಟರ ಧರ್ಮಪತ್ನಿ ಕಲ್ಯಾಣಿ ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐತ್ತಪ್ಪ ಶೆಟ್ಟರ ಪುತ್ರ, ಕಟೀಲು ಮೇಳದ ಹಿರಿಯ ಕಲಾವಿದ ಬಾಯಾರು ರಘುನಾಥ ಶೆಟ್ಟಿ ಸ್ವಾಗತಿಸಿ, ಕಲಾವಿದ, ಯಕ್ಷಗಾನ ಗುರು ಬಾಯಾರು ರಮೇಶ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ರೋಹಿತ್ ಸನ್ಮಾನ ಪತ್ರ ವಾಚಿಸಿದರೆ, ಶೇಖರ್ ಶೆಟ್ಟಿ ಕುಲ್ಯಾರು ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು. ಕು.ಸುಶ್ಮಿತಾ ವಂದಿಸಿದರು. ಉಮಾದೇವಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಾಯಾರು ರಮೇಶ ಶೆಟ್ಟಿಯವರ ಶಿಷ್ಯರಿಂದ ’ಕೃಷ್ಣಲೀಲೆ’ ಬಯಲಾಟ ಮತ್ತು ದಿ.ಐತ್ತಪ್ಪ ಶೆಟ್ಟಿಯವರ ಸುಪುತ್ರರು ಮತ್ತು ಕುಟುಂಬದ ಕಲಾವಿದರಿಂದಲೇ “ಶ್ರೀರಾಮದರ್ಶನ’ಎಂಬ ಬಯಲಾಟ ಪ್ರದರ್ಶನಗೊಂಡಿತು.

Ithappa shetty [2]