ಮೂಲಸೌಕರ್ಯ ಹೊಂದಿದ ಮಂಗಳೂರಿಗೆ, ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆ

3:12 PM, Wednesday, November 1st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

smart cityಮಂಗಳೂರು: ವಿಶ್ವದಲ್ಲಿ ವಾಸಸ್ಥಾನಕ್ಕೆ ಯೋಗ್ಯ ಸ್ಥಳ, ಉತ್ತಮ ಮೂಲಸೌಕರ್ಯ ಹೊಂದಿದ ಸ್ಥಳ ಎಂಬೆಲ್ಲಾ ಹಿರಿಮೆಯನ್ನು ಪಡೆದುಕೊಂಡ ಮಂಗಳೂರಿಗೆ, ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಒಂದು ಸವಾಲಾಗಿ ಪರಿಣಮಿಸಿದೆ. ಮಂಗಳೂರು ಸ್ಮಾರ್ಟ್‌ ಸಿಟಿ ಆಗಿ ಆಯ್ಕೆಯಾದ ಬೆನ್ನಲ್ಲೇ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಈ ಸಮಸ್ಯೆ ನಿವಾರಿಸಲು ಮಂಗಳೂರು ಮಹಾನಗರ ಪಾಲಿಕೆಯು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಂಗಳೂರು ನಗರದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಾರೆ. ಅದರಲ್ಲಿ ದೂರದ ಊರುಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳು ಹೆಚ್ಚಾಗಿ ಬಸ್ಸುಗಳ ಮೂಲಕವೇ ಬರುವುದರಿಂದ ಸೂಕ್ತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಪರೀಕ್ಷಾ ಸಮಯದಲ್ಲಿ ಇಂತಹ ಸಮಸ್ಯೆಗಳು ಎದುರಾದರೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ಟ್ರಾಫಿಕ್‌ ಜಾಮ್‌ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಜನಸಾಮಾನ್ಯರಿಗೂ ಒಂದು ದೊಡ್ಡ ತಲೆನೋವಾಗಿದ್ದು, ಸ್ಟೇಟ್‌ಬ್ಯಾಂಕ್‌ಗೆ ಬರುವ ಹೆಚ್ಚಿನ ಬಸ್‌ಗಳು ನಗರದ ಮುಖ್ಯರಸ್ತೆಯಾಗಿರುವ ಕಂಕನಾಡಿ– ಜ್ಯೋತಿ ಮೂಲಕವೇ ಹಾದು ಹೋಗಬೇಕಾಗುತ್ತದೆ. ಈ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆದರೆ ಇಡೀ ನಗರವೇ ಟ್ರಾಫಿಕ್‌ ಜಾಮ್‌ನಿಂದ ನರಳುತ್ತದೆ.

ನಗರದಲ್ಲಿ ಶಿಕ್ಷಣ ಸಂಸ್ಥೆಯ ಜೊತೆಗೆ ಅನೇಕ ಕಂಪೆನಿಗಳು, ಆಸ್ಪತ್ರೆಗಳು ಇರುವುದರಿಂದ ಟ್ರಾಫಿಕ್‌ ಜಾಮ್‌ನಿಂದಾಗಿ ಹಲವರಿಗೆ ಸಮಸ್ಯೆಗಳು ಉದ್ಭವಿಸುತ್ತಿವೆ. ಆಂಬುಲೆನ್ಸ್‌ ಮೂಲಕ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ತಲುಪದೆ ರೋಗಿಗಳು ಪರದಾಡುವಂತಾಗಿದೆ. ನಗರಕ್ಕೆ ಪರ್ಯಾಯ ರಸ್ತೆಯೂ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ನಗರದ ಹೃದಯ ಭಾಗವಾದ ಸ್ಟೇಟ್‌ಬ್ಯಾಂಕ್‌ನ್ನು ಸಂಪರ್ಕಿಸಲು ಕಂಕನಾಡಿ– ಜ್ಯೋತಿ ರಸ್ತೆ ಮುಖ್ಯ ರಸ್ತೆಯಾಗಿದೆ. ಆದರೂ ರಸ್ತೆ ಕಿರಿದಾಗಿದ್ದು, ವಾಹನ ದಟ್ಟಣೆ ಹೆಚ್ಚಾದಾಗ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ನಗರದಾದ್ಯಂತ ಇರುವ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಬಲಿಗಾಗಿ ಬಾಯ್ತೆರೆದು ನಿಂತಿದ್ದು, ನರಕ ಯಾತನೆ ಅನುಭವಿಸುವಂತಾಗಿದೆ ಎಂದು ನಾಗರಿಕರು ದೂರುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English