ಪಂಪ್‌ವೆಲ್‌ನಲ್ಲಿ ಹೊಸ ಬಸ್‌ ನಿಲ್ದಾಣ

9:49 PM, Thursday, November 30th, 2017
Share
1 Star2 Stars3 Stars4 Stars5 Stars
(No Ratings Yet)
Loading...

pumpwel-roadಮಂಗಳೂರು: ಸ್ಮಾರ್ಟ್‌ ಸಿಟಿ ಮಂಗಳೂರು ಯೋಜನೆಯಡಿ ಪಂಪ್‌ವೆಲ್‌ನಲ್ಲಿ 7.23 ಎಕರೆಯಲ್ಲಿ ಹೊಸ ಖಾಸಗಿ ಬಸ್‌ ನಿಲ್ದಾಣ ಸ್ಥಾಪನೆಗೆ ಹಸುರು ನಿಶಾನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಸ್ಮಾರ್ಟ್‌ಸಿಟಿ ಎಸ್‌ಪಿವಿ (ವಿಶೇಷ ಉದ್ದೇಶ ವಾಹಕ) ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.

ಉದ್ದೇಶಿತ ಬಸ್‌ ನಿಲ್ದಾಣವನ್ನು ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳುವಂತೆ ಮಂಗಳವಾರ ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ಬೆಂಗಳೂರಿನಲ್ಲಿ ಬುಧವಾರ ನಡೆದ ಎಸ್‌ಪಿವಿ ಸಭೆಯಲ್ಲಿ ಅನುಮೋದನೆ ದೊರಕುವ ಮೂಲಕ ಬಸ್‌ನಿಲ್ದಾಣ ಯೋಜನೆಗೆ ಶೀಘ್ರದಲ್ಲಿ ಟೆಂಡರ್‌ ಆಗುವ ಸಾಧ್ಯತೆ ಇದೆ.

ಸಭೆಯಲ್ಲಿ ಲೇಡಿಗೋಶನ್‌ ಹಾಗೂ ವೆನಾಕ್‌ ಆಸ್ಪತ್ರೆಯ ಒಳಪ್ರದೇಶವನ್ನು ಹೊರತುಪಡಿಸಿ, ಹೊರ ಭಾಗವನ್ನು ಮೇಲ್ದರ್ಜೆಗೇರಿಸಲೂ ಒಪ್ಪಿಗೆ ನೀಡ ಲಾಗಿದೆ. ಈ ಕುರಿತ ಒಟ್ಟು ಯೋಜನಾ ಮಾಹಿತಿ ಯನ್ನು ಮಂಡಿಸಿ ಶೀಘ್ರದಲ್ಲಿ ಅನುಮೋದನೆ ಪಡೆದು ಎರಡೂ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.

ಮಂಗಳೂರು ಪಾಲಿಕೆಯ ಸಮಗ್ರ ಆಸ್ತಿ ದಾಖಲೆ ಗಳನ್ನು ಲೆಕ್ಕ ಹಾಕಲು ಮತ್ತು ಆಸ್ತಿ ತೆರಿಗೆ ಸಮರ್ಪಕ ವಸೂಲಾತಿಗೆ ಅವಕಾಶವಾಗುವ ಇರಾದೆಯಿಂದ ಸಮಗ್ರ ಸರ್ವೆಗೆ ಎಸ್‌ಪಿವಿ ಸಭೆಯಲ್ಲಿ ನಿರ್ಧರಿಸ ಲಾಗಿದೆ. ಮಂಗಳೂರಿನ ಆರ್‌ಟಿಓ ಕಚೇರಿಯಿಂದ ಕ್ಲಾಕ್‌ಟವರ್‌ವರೆಗಿನ ರಸ್ತೆಯನ್ನು ಸ್ಮಾರ್ಟ್‌ ರೋಡ್‌ ಆಗಿ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸ ಲಾಗಿದ್ದು, ಇಲ್ಲಿ ಜನವರಿ ವೇಳೆಗೆ ಕಾಮಗಾರಿ ಆರಂಭಿಸಲು ನಿರ್ಧರಿಸಲಾಯಿತು. ಪ್ರತಿ ತಿಂಗಳು ಸ್ಮಾರ್ಟ್‌ ಸಿಟಿಯ ಸಭೆಯನ್ನು ನಡೆಸುವುದು ಹಾಗೂ ಮುಂದಿನ ಸಭೆಯು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಕ್ಕಾಗಿ ತಾಂತ್ರಿಕ ಸಿಬಂದಿಗಳ ನೇಮಕಕ್ಕೆ ಒಪ್ಪಿಗೆ ಸೂಚಿಸಲಾಯಿತು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಮಲತಾ, ನಗರಾಭಿವೃದ್ಧಿ ಇಲಾಖೆಯ ಡಾ| ವಿಶಾಲ್‌, ಕುಡ್ಸೆಂಪ್‌ ಆಡಳಿತ ನಿರ್ದೇಶಕ ಎ.ಬಿ. ಇಬ್ರಾಹಿಂ, ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌, ಮೇಯರ್‌ ಕವಿತಾ ಸನಿಲ್‌, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸದಸ್ಯರಾದ ಲ್ಯಾನ್ಸ್‌ಲಾಟ್‌ ಪಿಂಟೋ, ಪ್ರೇಮಾನಂದ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English