ಸುಪಾರಿ ಕೇಸ್; ರವಿ ಬೆಳೆಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ

5:56 PM, Monday, December 11th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

ravi-belegereಬೆಂಗಳೂರು: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣದಲ್ಲಿ ಹಾಯ್ ಬೆಂಗಳೂರು ವಾರ ಪತ್ರಿಕೆ ಸಂಪಾದಕ ರವಿ ಬೆಳೆಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಸೋಮವಾರ ಆದೇಶ ನೀಡಿದೆ.

ರವಿ ಬೆಳೆಗೆರೆಯ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು. ಬೆಳೆಗೆರೆ ಪರ ವಕೀಲರಾದ ದಿನಕರ್ ಅವರು ಕೋರ್ಟ್ ಗೆ ಆಗಮಿಸಲು ತಡವಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ ಕೆಲ ಹೊತ್ತಿನಲ್ಲಿಯೇ ನ್ಯಾಯಾಧೀಶರು ಸುಮಾರು ಅರ್ಧ ಗಂಟೆಗಳ ಕಾಲ ಮುಂದೂಡಿದ್ದರು.

ಬಳಿಕ ವಾದ, ಪ್ರತಿವಾದ ಆಲಿಸಿ ರವಿ ಬೆಳೆಗೆರೆಯನ್ನು ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಈ ಹಿನ್ನೆಲೆಯಲ್ಲಿ ರವಿ ಬೆಳೆಗೆರೆಗೆ ಬೇಲಾ, ಜೈಲಾ ಎಂಬ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.

ಪ್ರತಿದಿನ ನಾನು ಮಾತ್ರೆ ಮತ್ತು ಇಂಜಕ್ಷನ್ ತೆಗೆದುಕೊಳ್ಳಬೇಕಾಗಿದೆ. ಅದಕ್ಕಾಗಿಯೇ ನನ್ನ ವೈದ್ಯರಿಗೆ ನನ್ನ ಭೇಟಿ ಮಾಡಲು ಅವಕಾಶ ನೀಡಬೇಕು, ಜೈಲಿನಲ್ಲಿ ನನಗೆ ಯಾವುದೇ ಜೀವಭಯವಾಗದಂತೆ ರಕ್ಷಣೆ ನೀಡಬೇಕು ಎಂದು ಬೆಳೆಗೆರೆ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಜೈಲಿನ ಆಸ್ಪತ್ರೆಯಲ್ಲಿಯೇ ರವಿಬೆಳೆಗೆರೆಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಧೀಶರಾದ ಜಗದೀಶ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

“ರವಿ ಬೆಳೆಗೆರೆಯನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಏತನ್ಮಧ್ಯೆ ರವಿ ಬೆಳೆಗೆರೆ ಅವರ ಪರವಾಗಿ ಶೀಘ್ರವೇ ಜಾಮೀನು ಅರ್ಜಿ ಸಲ್ಲಿಸುವುದಾಗಿ ವಕೀಲರಾದ ದಿನಕರ್ ತಿಳಿಸಿದ್ದಾರೆ”

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English