ಅಶಕ್ತರ ಕಣ್ಣೀರಿಗೆ ಎ.ಸಿ.ವಿನಯರಾಜ್ ಉತ್ತರ ಕೊಡಲಿ- ಡಿ ವೇದವ್ಯಾಸ ಕಾಮತ್

8:29 PM, Monday, December 11th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

vedavyasಮಂಗಳೂರು : ಮನೆಯಲ್ಲಿ ಹಾಸಿಗೆಯಿಂದ ಏಳಲಾಗದಷ್ಟು ಅಶಕ್ತರಾದವರಿಗೆ, ವಯೋವೃದ್ಧರಿಗೆ ಅವರಿದ್ದಲ್ಲಿಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದರೆ ಅದರಲ್ಲಿಯೂ ರಾಜಕೀಯವನ್ನು ಹುಡುಕಲು ಎ.ಸಿ ವಿನಯ್ ರಾಜ್ ರಂತಹ ಕಾಂಗ್ರೆಸ್ಸಿಗರಿಗೆ ಮಾತ್ರ ಸಾಧ್ಯ ಎಂದು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದರು.

ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಸೆಂಟರ್ ಕಡೆ ಬರುವಷ್ಟು ಆರೋಗ್ಯ ಅಥವಾ ವಯಸ್ಸು ಇರುವುದಿಲ್ಲ. ಎಂಭತ್ತು ವರ್ಷ ದಾಟಿದವರ ದೈಹಿಕ ಸ್ಥಿತಿ, ಆರೋಗ್ಯದ ಸಮಸ್ಯೆ ಬಿಡಿಸಿ ಹೇಳಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಅವರಿರುವಲ್ಲಿಯೇ ಹೋಗಿ ಯಾರೇ ಆಧಾರ್ ಕಾರ್ಡ್ ಮಾಡಿಸಿದರೂ ಅವರೆಡೆಗೆ ಒಂದು ಧನ್ಯತಾಭಾವ ಹೊಂದುತ್ತಾರೆ.

ನಾವು ಹೋಗಿ ಆಧಾರ್ ಕಾರ್ಡ್ ಮಾಡಿಸಿದ ದಿನವೂ ವಯೋವೃದ್ಧರಲ್ಲಿ ಆ ಭಾವ ಮೂಡಿತ್ತು. ಕಾಂಗ್ರೆಸ್ ನಾಯಕರ ಈ ರೀತಿಯ ರಾಜಕಾರಣದಿಂದ ನಾವು ಆಧಾರ್ ಸೇವೆ ನೀಡುವುದನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಿದರ ಪರಿಣಾಮ ಆಧಾರ್ ಕಾರ್ಡ್ ಮಾಡಿಸಲು ಕಾಯುತ್ತಿದ್ದ ಇನ್ನೂ ಒಂದಷ್ಟು ಹಿರಿಯ ಜೀವಗಳು ನಿರಾಸೆ ಅನುಭವಿಸಿವೆ.

ಕೆಲವು ಸಮಾಜ ಸೇವೆಗಳಿಗೆ ಬೆಲೆ ಕಟ್ಟಲು ಆಗುವುದಿಲ್ಲ. ರಾಜಕೀಯದ ಲಾಭ ಇಟ್ಟುಕೊಂಡೇ ಇಂತಹ ಸೇವೆ ಮಾಡುವುದಾದರೆ ಇಷ್ಟು ದಿನ ವಿನಯರಾಜ್ ಅವರಂತಹ ಕಾಂಗ್ರೆಸ್ ನಾಯಕರು ಮಾಡಬಹುದಿತ್ತು. ಅದರಲ್ಲಿ ರಾಜಕೀಯ ಮೈಲೇಜ್ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಅವರು ಹೋಗಿರಲಿಲ್ಲ ಅನ್ನಿಸುತ್ತದೆ. ಈಗ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅದನ್ನು ಮಾಡಿದರೆ ಸಹಕಾರ ನೀಡುವುದು ಬಿಟ್ಟು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿರುವುದು ಬೇಸರದ ಸಂಗತಿ ಎಂದು ವೇದವ್ಯಾಸ್ ಕಾಮತ್ ಬೇಸರ ವ್ಯಕ್ತಪಡಿಸಿದರು.

ಹಿರಿಯರಿಗೆ ಆಧಾರ್ ಮಾಡಿಸುವಲ್ಲಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಹೇಳುವ ಕಾಂಗ್ರೆಸ್ ನಾಯಕ ವಿನಯ್ ರಾಜ್ ಅವರು ಈ ಹಿಂದೆ ಡಿಕೆಶಿ ಮನೆ ಮೇಲೆ ಐಟಿ ದಾಳಿ ಆದಾಗ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಮುಂದೆ ದಾಂಧಲೆ ನಡೆಸಿದ್ದು ಇನ್ನೂ ಮಂಗಳೂರಿಗರು ಮರೆತಿಲ್ಲ. ಹಾಗಿರುವಾಗ ವಕೀಲರಾಗಿರುವ ತಾವು ಇತರರಿಗೆ ಕಾನೂನು ಪಾಠ ಹೇಳುವ ಮುನ್ನ ತಾವೇ ಸ್ವತಃ ಅರಿತರೆ ಒಳ್ಳೆಯದು.

ಒಂದೂವರೆ ದಶಕಗಳಿಗೂ ಹೆಚ್ಚಿನ ಸಮಯದಿಂದ ಸೇವಾಕ್ಷೇತ್ರದಲ್ಲಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇಲ್ಲಿಯ ತನಕ ಮಾಡಿದ ಅಸಂಖ್ಯಾತ ಕಾರ್ಯಕ್ರಮಗಳ ಬಗ್ಗೆ ಜನ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಆಧಾರ್ ಕಾರ್ಡ್ ಮೇಳಕ್ಕೂ ದೊಡ್ಡ ಸಂಖ್ಯೆಯಲ್ಲಿ ಜಾತಿ ಮತ ಭೇದ ಭಾವ ಇಲ್ಲದೇ ಸಾವಿರಾರು ಜನರು ಬಂದಿದ್ದಾರೆ. ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಮಾಡಬೇಕಾದ ಕಾರ್ಯವನ್ನು ಇಚ್ಚಾಶಕ್ತಿಯ ಕೊರತೆಯಿಂದ ಮಾಡದೇ ಇದ್ದಾಗ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮಾಡಿದರೆ ಅದರಲ್ಲಿ ತಪ್ಪೇನು? ಹಿಂದೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಗಣೇಶ್ ಕಾರ್ಣಿಕ್ ಈ ರೀತಿ ಆಧಾರ್ ಮೇಳ ಮಾಡಿದಾಗಲೂ ನಿಲ್ಲಿಸುವ ಪ್ರಯತ್ನ ಮಾಡಿದ್ದು ನಿಮ್ಮವರೇ ತಾನೇ? ಪ್ರತಿಯೊಂದರಲ್ಲಿ ರಾಜಕೀಯ ಹುಡುಕಿದರೆ ಜನ ಕ್ಷಮಿಸಲಾರರು ಎಂದು ವೇದವ್ಯಾಸ್ ಕಾಮತ್ ಹೇಳಿದರು .

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English