ನಂತೂರು ವೃತ್ತ : ಬಸ್‌ ನಿಲ್ದಾಣ ಸ್ಥಳಾಂತರ

12:43 PM, Thursday, December 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

nanthoor-junctionಮಂಗಳೂರು: ನಂತೂರಿನ ಅವೈಜ್ಞಾನಿಕ ಹಾಗೂ ಅಪಾಯಕಾರಿ ವೃತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಜೋರಾಗುತ್ತಿದ್ದಂತೆ, ನಗರ ಪಾಲಿಕೆಯೂ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಪ್ರಯಾಣಿಕರು ಮತ್ತು ಸವಾರರ ಅನುಕೂಲಕ್ಕಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಪಾಲಿಕೆಯು 50 ಲಕ್ಷ ರೂ. ವೆಚ್ಚದಲ್ಲಿ ವೃತ್ತದ ಬಳಿ ಹೊಸ ಬಸ್‌ ಬೇ, ಸುಗಮ ಸಂಚಾರ ವ್ಯವಸ್ಥೆ (ಫ್ರೀ ಲೆಫ್ಟ್‌) ಹಾಗೂ ಫುಟ್‌ಪಾತ್‌ ನಿರ್ಮಿಸಲು ತೀರ್ಮಾನಿಸಿದೆ. ವೃತ್ತದ ಟ್ರಾಫಿಕ್‌ ಸಮಸ್ಯೆ ಹಲವು ವರ್ಷಗಳಿಂದ ಸಾರ್ವಜನಿಕರ ಟೀಕೆ, ಅಸಮಾಧಾನಕ್ಕೆ ಕಾರಣವಾಗಿದೆ.

ಇಲ್ಲಿ ಕಳೆದ ವಾರ ಖಾಸಗಿ ಬಸ್‌ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರುಮೃತಪಟ್ಟ ಘಟನೆ ಆಧರಿಸಿ ‘ಸುದಿನ’ವು ಅಭಿಯಾನವನ್ನು ಕೈಗೊಂಡಿತ್ತು. ಓದುಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೃತ್ತದ ಅವ್ಯವಸ್ಥೆ ಸರಿಪಡಿಸುವಂತೆ ಜನಾಭಿಪ್ರಾಯ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಪಾಲಿಕೆ 50 ಲ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿದೆ.

ಪ್ರಸ್ತುತ ಮಲ್ಲಿಕಟ್ಟೆಯಿಂದ ಕೆಪಿಟಿ ಹಾಗೂ ಕುಲಶೇಖರ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಂತೂರು ಬಸ್‌ ನಿಲ್ದಾಣವಿದೆ. ಇದು ವೃತ್ತಕ್ಕೆ ಸನಿಹದಲ್ಲಿದ್ದು, ಮಲ್ಲಿಕಟ್ಟೆಯಿಂದ ಕೆಪಿಟಿ, ಬಿಕರ್ನಕಟ್ಟೆ ಕಡೆಗೆ ಹೋಗುವ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಲು, ಇಳಿಸಲು ರಸ್ತೆ ಬದಿಯೇ ನಿಲ್ಲಿಸಬೇಕಾಗುತ್ತದೆ.

ಜನನಿಬಿಡ ಪ್ರದೇಶವಾಗಿರುವುದರಿಂದ ಇಲ್ಲಿ ಬಸ್‌ಗಳು ನಿಂತರೆ ಉಳಿದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ, ಪ್ರಯಾಣಿಕರಿಗೂ ಸಾಕಷ್ಟು ಕಿರಿಕಿರಿ ಆಗುತ್ತಿದೆ. ಹೀಗಾಗಿ, ಈ ಸಿಟಿ ಬಸ್‌ ನಿಲ್ದಾಣವನ್ನು ಸೂಕ್ತ ಸ್ಥಳಾವಕಾಶ ನೋಡಿಕೊಂಡು ಸ್ವಲ್ಪ ಮುಂದಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಆದರೆ, ‘ಬಸ್‌ ಬೇ ಜಾಗದ ಕುರಿತು ಇನ್ನೂ ಅಂತಿಮವಾಗಿಲ್ಲ’ ಎಂದು ಪಾಲಿಕೆ ಅಭಿಯಂತರ ಲಿಂಗೇಗೌಡ ‘ಸುದಿನ’ಕ್ಕೆ ತಿಳಿಸಿದ್ದಾರೆ.

ಮಲ್ಲಿಕಟ್ಟೆ-ಬೆಂದೂರಿನಿಂದ ಕೆಪಿಟಿ ಕಡೆಗೆ ಹೋಗುವ ವಾಹನಗಳಿಗೆ ನಂತೂರಿನಲ್ಲಿ ಫ್ರೀ ಲೆಫ್ಟ್‌ ವ್ಯವಸ್ಥೆ ಮಾಡಲಾಗುತ್ತಿದೆ. ರಸ್ತೆಯ ಎಡಬದಿಯಲ್ಲಿ 175 ಮೀ. ಉದ್ದದ ಫುಟ್‌ಪಾತ್‌ ನಿರ್ಮಿಸಲಾಗುವುದು. ಹೆದ್ದಾರಿ ಪ್ರಾಧಿಕಾರದ ಸಲಹೆ ಪಡೆದೇ ಕಾಮಗಾರಿ ನಡೆಸಲಾಗುವುದು ಎಂದು ಲಿಂಗೇಗೌಡ ತಿಳಿಸಿದ್ದಾರೆ.

ಪಾಲಿಕೆಯ ‘ಮುಖ್ಯಮಂತ್ರಿಗಳ 100 ಕೋಟಿ ರೂ.ಗಳ ವಿಶೇಷ ಅನುದಾನ’ದ 2ನೇ ಹಂತದ ಉಳಿಕೆ ಮೊತ್ತದಲ್ಲಿ ಈ ಕಾಮಗಾರಿ ನಡೆಯಲಿದ್ದು, ಟೆಂಡರ್‌ ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ಅನುಮೋದನೆ ಸಿಗಬೇಕಿದೆ. ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ತಿಂಗಳು ಬೇಕಿದ್ದು, ಜನವರಿ ಬಳಿಕವೇ ಕಾಮಗಾರಿ ಆರಂಭಗೊಳ್ಳಲಿದೆ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ನಂತೂರು ವೃತ್ತ ಆಸುಪಾಸಿನಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಓವರ್‌ಪಾಸ್‌ ನಿರ್ಮಾಣದ ಪ್ರಸ್ತಾವನೆಯೂ ಇದೆ. ಓವರ್‌ಪಾಸ್‌ಗಾಗಿ 2013-14ನೇ ಸಾಲಿನಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರೂ ಅನುಮೋದನೆ ಸಿಕ್ಕಿಲ್ಲ.

ಪ್ರಸ್ತುತ ಸಾಗರಮಾಲಾ ಯೋಜನೆಯಡಿ ಪುನಃ ಪ್ರಸ್ತಾವನೆ ಸಲ್ಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಓವರ್‌ ಪಾಸ್‌ ಅಂದರೆ ಬಿಕರ್ನಕಟ್ಟೆ-ಶಿವಬಾಗ್‌ ಸಂಪರ್ಕಕ್ಕೆ ಮೇಲ್ಸೇತುವೆ ನಿರ್ಮಾಣ, ನಾಲ್ಕು ಸರ್ವಿಸ್‌ ರೋಡ್‌ಗಳು, ಕೆಪಿಟಿ-ಪಂಪ್‌ವೆಲ್‌ ಹೆದ್ದಾರಿಯನ್ನು ತಗ್ಗಿಸಿ ಸಂಪರ್ಕ ಕಲ್ಪಿಸಲಾಗುತ್ತದೆ. ಹೀಗಾದಾಗ ಪ್ರತಿ ಭಾಗದ ವಾಹನಗಳಿಗೆ ಪ್ರತ್ಯೇಕ ರಸ್ತೆ ಸಿಗಲಿವೆ. ಜತೆಗೆ ವಾಹನಗಳು ಯಾವುದೇ ಗೊಂದಲವಿಲ್ಲದೆ ಸಾಗಲು ಅನುಕೂಲವಾಗಲಿದೆ.

ನಂತೂರಿನಲ್ಲಿ ಬಸ್‌ ಬೇ ಮತ್ತು ಫುಟ್‌ ಪಾತ್‌ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪಾಲಿಕೆ ಆರಂಭಿಸಲಿದೆ. ವೃತ್ತದ ಸ್ವರೂಪದ ಬಗ್ಗೆಯೂ ಗೊಂದಲಗಳಿವೆ. ಆದರೆ, ವೃತ್ತದ ಸಮಸ್ಯೆ ಸರಿಪಡಿಸುವುದು ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ನಂತೂರು ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಹೆದ್ದಾರಿ ಪ್ರಾಧಿಕಾರವೇ ವೃತ್ತದಲ್ಲಿನ ತೊಡಕುಗಳನ್ನು ನಿವಾರಿಸಬೇಕಾಗುತ್ತದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English