- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಟಾರ್ಗೆಟ್‌ ಗುಂಪಿನ ಇಲ್ಯಾಸ್‌ ಜತೆಗಿರುವ ಫೋಟೊ ವೈರಲ್‌… ಸಚಿವ ಖಾದರ್‌ ಸ್ಪಷ್ಟನೆ ಏನು?

U-T-Kader [1]ಮಂಗಳೂರು: ಕೆಲವರು ನನ್ನನ್ನು ಜೈಲಿಗೆ ಕಳುಹಿಸಲು ಮುಂದಾಗಿದ್ದರು. ಆದರೆ, ಕ್ಷೇತ್ರದ ಜನತೆ ನನ್ನನ್ನು ವಿಧಾನಸೌಧಕ್ಕೆ ಕಳುಹಿಸಿದರು ಎಂದು ಆಹಾರ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

ಟಾರ್ಗೆಟ್ ಗುಂಪಿನ ಸದಸ್ಯ ಇಲ್ಯಾಸ್ ಜತೆ ತಾನು ಊಟ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕುರಿತು ಮತ್ತು ಸುರತ್ಕಲ್‌ನಲ್ಲಿ ನಡೆದ ದೀಪಕ್ ರಾವ್ ಪ್ರಕರಣ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನನ್ನ ರಾಜಕೀಯ ತೇಜೋವಧೆ ಮಾಡುವ ಕೆಲಸ ಬಹಳ ಹಿಂದಿನಿಂದಲೇ ನಡೆಯುತ್ತಿದೆ. ನಾನು ಶಾಸಕನಾಗುವ ಮೊದಲು ನನ್ನ ತಂದೆ ಶಾಸಕರಾಗಿದ್ದಾಗಲೂ ಇಂತಹದ್ದೇ ಕೆಲಸ ನಡೆದಿತ್ತು. ಆದರೆ ನನ್ನ ಕ್ಷೇತ್ರದ ಜನತೆ ನನ್ನಲ್ಲಿ ವಿಶ್ವಾಸವಿರಿಸಿ ಅವರ ಮಗ, ಸಹೋದರನಂತೆ ಕಂಡಿದ್ದಾರೆ ಎಂದು ಸಚಿವ ಖಾದರ್‌ ತಿಳಿಸಿದರು.

ಇಂದಿಗೂ ನನ್ನ ಬಳಿ ಬರುವ ಯಾರೊಬ್ಬರಲ್ಲೂ ನಾನು ಅವರ ಹೆಸರು, ಜಾತಿ, ಧರ್ಮ, ಪ್ರದೇಶ ಕೇಳುವುದಿಲ್ಲ. ಅವರ ಕೆಲಸ ನನ್ನಿಂದ ಆಗುವುದಾದರೆ ಮಾಡಿ ಕೊಡುತ್ತೇನೆ, ಇಲ್ಲವಾದಲ್ಲಿ ಈ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುತ್ತೇನೆ. ನನ್ನ ಹಾಗೂ ನನ್ನ ಕ್ಷೇತ್ರದ ಜನತೆಯ ನಡುವೆ ಯಾರಾದರೂ ವೈಮನಸ್ಸು ಮೂಡಿಸುವ ಪ್ರಯತ್ನ ಮಾಡಿದರೆ ಅದು ಸಫಲವಾಗುವುದಿಲ್ಲ. ಜಾತಿ, ಧರ್ಮ ಮರೆತು ಸರ್ವರೂ ನನ್ನ ಜತೆಗಿದ್ದಾರೆ ಎಂದರು.

ಟಾರ್ಗೆಟ್ ಗುಂಪಿನ ಸದಸ್ಯ ಇಲ್ಯಾಸ್ ಜತೆ ನನಗೆ ನಂಟು ಇದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದುದು. ನಾನು ಆತನೊಂದಿಗೆ ಊಟ ಮಾಡುವ ಫೋಟೊ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ ನಾವೇನು ಮಾಡುವುದು ಎಂದು ಸಚಿವ ಖಾದರ್‌ ಪ್ರಶ್ನಿಸಿದರು.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಇಲ್ಯಾಸ್ ಸ್ಪರ್ಧಿಸಿದ್ದ ಪಕ್ಕದಲ್ಲಿ ಬಂದು ಊಟಕ್ಕೆ ಕುಳಿತರೆ ನಾನು ಏನು ಮಾಡುವುದು. ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಯಾರೂ ಬೇಕಾದರೂ ಅರ್ಜಿ ಹಾಕಬಹುದು. ಅದು ಆನ್ಲೈನ್ ಮೂಲಕ ನಡೆಯುತ್ತದೆ. ಯುವ ಕಾಂಗ್ರೆಸ್ ಚುನಾವಣೆಗೆ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಇದೆ. ಇಲ್ಯಾಸ್‌ಗೆ ಸದಸ್ಯತ್ವ ನೀಡುವ ಕುರಿತು ಹಿಂದೆಯೇ ಆಕ್ಷೇಪ ಸಲ್ಲಿಸಲಾಗಿದೆ. ಆತ ಚುನಾವಣೆಗೆ ನಿಂತು ಸೋತು ನಿಯಮದಂತೆ ಉಪಾಧ್ಯಕ್ಷನಾಗಿದ್ದಾನೆ. ಆ ಬಳಿಕ ಹಲ್ಲೆ ಘಟನೆಯೊಂದರಲ್ಲಿ ಜೈಲಿಗೆ ಸೇರಿದ್ದಾನೆ, ಆತನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದರು.

ಇಲ್ಯಾಸ್ ವಿರುದ್ಧ ಕೋಮು ಘಟನೆಯ ಪ್ರಕರಣಗಳು ದಾಖಲಾಗಿಲ್ಲ. ಉಳ್ಳಾಲದಲ್ಲಿ ಹಿಂದೆ ಟಾರ್ಗೆಟ್ ಗುಂಪು ಇತ್ತು, ಈ ಗುಂಪು ಕಾನೂನನ್ನು ಕೈಗೆತ್ತಿಕೊಂಡು ಕಾರ್ಯಾಚರಣೆ ಮಾಡುತ್ತಿದ್ದು, ಟಾರ್ಗೆಟ್ ಗುಂಪನ್ನು ಉಳ್ಳಾಲದಿಂದ ಓಡಿಸಿದ್ದೇವೆ. ಈಗ ಉಳ್ಳಾಲದಲ್ಲಿ ಟಾರ್ಗೆಟ್ ಗುಂಪು ಇಲ್ಲವೆಂದು ಅವರು ಸ್ಪಷ್ಟಪಡಿಸಿದರು.