- KANNADA MEGA MEDIA NEWS :: News Coverage From Mangalore and Major Cities of India and world wide - http://kannada.megamedianews.com -

ಎಲ್‌ಪಿಜಿ, ಪೆಟ್ರೋಲ್ ಪಂಪ್ ತೆರೆಯಲು ರಾಜ್ಯ ಸರಕಾರದ ಅನುಮತಿಗೆ ಕಾನೂನು: ಯು.ಟಿ.ಖಾದರ್

u-t-kader [1]ಮಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಪಂಪ್ ಹಾಗೂ ಎಲ್‌ಪಿಜಿ ವಿತರಣಾ ಕೇಂದ್ರವನ್ನು ಆರಂಭಿಸಲು ರಾಜ್ಯ ಸರಕಾರದ ಅನುಮತಿ ಪಡೆಯಬೇಕೆಂಬ ನಿಯಮಾವಳಿಯನ್ನು ರೂಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಂಧ್ರ ಪ್ರದೇಶ ಸರಕಾರ ಈ ಬಗ್ಗೆ ಈಗಾಗಲೇ ನಿಯಮಾವಳಿ ರೂಪಿಸಿದೆ. ಇದುವರೆಗೆ ರಾಜ್ಯದಲ್ಲಿ ಪೆಟ್ರೋಲ್ ಪಂಪ್ ಅಥವಾ ಎಲ್‌ಪಿಜಿ ಬಂಕ್‌ಗಳನ್ನು ತೆರೆಯಲು ಕೇಂದ್ರದ ಅನುಮತಿ ಮಾತ್ರ ಸಾಕಿತ್ತು. ಆದರೆ ಇನ್ನು ಮುಂದೆ ರಾಜ್ಯ ಸರಕಾರದ ಅನುಮತಿಯನ್ನೂ ಪಡೆದುಕೊಳ್ಳಬೇಕಾಗುತ್ತದೆ. ರಾಜ್ಯದ ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಕಾಯ್ದೆಯ ಅಡಿಯಲ್ಲಿ ಈ ನಿಯಮಾವಳಿಯನ್ನು ರೂಪಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.

ಕರಾವಳಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯಕ್ಕೆ ಬೆದರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲೇ ಠಿಕಾಣಿ ಹೂಡಲು ನಿರ್ಧರಿಸಿದ್ದಾರೆ. ಇಲ್ಲಿನ ಬಿಜೆಪಿಗರು ಕಾಂಗ್ರೆಸ್‌ನ ಪ್ರಾಬಲ್ಯವನ್ನು ಅಂದಾಜಿಸುವಲ್ಲಿ ವಿಫಲವಾಗಿರುವ ಕಾರಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಬರುತ್ತಿದ್ದಾರೆ ಎಂದು ಖಾದರ್ ಛೇಡಿಸಿದರು.

ಕರಾವಳಿಯ ಪಕ್ಷ ಚಟುವಟಿಕೆ ಮಾಡಿ. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಯಾವುದೇ ಚಟುವಟಿಕೆಯನ್ನೂ ಇಲ್ಲಿ ಮಾಡಬೇಡಿ ಎಂದು ಅಮಿತ್ ಶಾ ಅವರಲ್ಲಿ ಮನವಿ ಮಾಡುವುದಾಗಿ ಖಾದರ್ ಹೇಳಿದರು.

ಫೆ.10 ಮತ್ತು 11ರಂದು ಮೈಸೂರಿನಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸುಧಾಕರ ಶೆಟ್ಟಿ ನೇತೃತ್ವದಲ್ಲಿ ಎರಡು ದಿನಗಳ ಅಬ್ಬಕ್ಕ ಉತ್ಸವ ನಡೆಯಲಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ಮಠ-ಮಂದಿರಗಳ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡಿಲ್ಲ ಎಲ್ಲರ ಧಾರ್ಮಿಕ ಭಾವನೆಯನ್ನು ನಾವು ಗೌರವಿಸುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯೆ ಮಮತಾ ಗಟ್ಟಿ, ಪದ್ಮನಾಭ ನರಿಂಗಾನ, ದಿನಕರ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.