- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರಾವಳಿಯಲ್ಲಿ ರಂಗೇರಿದ ಚುನಾವಣಾ ಕದನ: ಕೈ-ಕಮಲದಿಂದ ಭರ್ಜರಿ ತಯಾರಿ

election [1]ಮಂಗಳೂರು: ಕರಾವಳಿಯಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಒಂದು ಕಡೆ ಪಕ್ಷೇತರ ಅಭ್ಯರ್ಥಿಗಳು ವೈಯಕ್ತಿಕವಾಗಿ ಈಗಾಗಲೇ ಪ್ರಚಾರದಲ್ಲಿ ತೊಡಗಿದರೆ, ಮತ್ತೊಂದಡೆ ಬಿಜೆಪಿ ಮತ್ತು ಕಾಂಗ್ರೆಸ್‌‌ ಪಕ್ಷಗಳು ತಮ್ಮ ರಾಷ್ಟ್ರಮಟ್ಟದ ನಾಯಕರನ್ನು ಇಲ್ಲಿಗೆ ಬರಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ಪರವಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದರೆ, ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌‌‌‌ ಶಾ ಅವರ ಸರದಿಯಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿರುವ ಅಮಿತ್‌‌‌ ಶಾ, ಫೆ. 19ರಿಂದ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ. ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇನ್ನು ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್‌‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಹ ಕರಾವಳಿಯುದ್ಧಕ್ಕೂ ಪ್ರವಾಸ ಮಾಡಲು ಸಿದ್ಧತೆ ನಡೆಸಿದ್ದಾರೆ. ರಾಹುಲ್‌ ಗಾಂಧಿಯವರು ಮಾರ್ಚ್‌ ಮೊದಲ ವಾರದಲ್ಲಿ ಜಿಲ್ಲೆಗೆ ಭೇಟಿ ನೀಡಲಿದ್ದು, ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ. ರಾಹುಲ್ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದಾರೆ. ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ, ಸಾರ್ವಜನಿಕರ ಸಭೆ, ಸಂವಾದಗಳಲ್ಲಿ ಭಾಗವಹಿಸಲಿದ್ದಾರೆ.

ರಾಹುಲ್ ಭೇಟಿ ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತವಾಗಿಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಅಥವಾ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಮಂಗಳಾದೇವಿ, ಕದ್ರಿ ಮಂಜುನಾಥ ದೇವಸ್ಥಾನದ ಭೇಟಿಯ ಜೊತೆಗೆ ಯಾತ್ರೆ ವೇಳೆ ಸಿಗುವ ಪ್ರಮುಖ ಮಸೀದಿ, ಚರ್ಚ್‌ಗಳಿಗೂ ರಾಹುಲ್ ಭೇಟಿ ನೀಡುವ ಸಾಧ್ಯತೆಗಳಿವೆ. ದೇವಾಲಯಗಳಿಗೆ ಭೇಟಿ ನೀಡುತ್ತಿರುವುದರಿಂದ ಶುದ್ಧ ಶಾಖಾಹಾರಿಯಾಗಿರಲು ನಿರ್ಧರಿಸಿದ್ದಾರೆಂಬುದು ಅವರ ವಲಯಗಳಿಂದ ಕೇಳಿಬರುತ್ತಿದೆ. ಒಟ್ಟಾರೆಯಾಗಿ ಮುಂದಿನ ವಾರ ರಾಹುಲ್ ಗಾಂಧಿ ಕರಾವಳಿ ಭೇಟಿಗೆ ವೇಳಾಪಟ್ಟಿ ಸಿದ್ಧಗೊಳ್ಳಲಿದೆ.

ರಾಹುಲ್ ಭೇಟಿಗೂ ಮೊದಲು ಅಮಿತ್ ಶಾ ಕರಾವಳಿಯಲ್ಲಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭೇಟಿಯಿಂದ ಆರಂಭಗೊಂಡು ಜಿಲ್ಲೆಯಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿ ಕಮಲ ಕಾರ್ಯಕರ್ತರನ್ನು ಚುರುಕುಗೊಳಿಸಲಿದ್ದಾರೆ. ಕರಾವಳಿ ಭೇಟಿಯ ವೇಳೆ ಅಮಿತ್ ಶಾ ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟ ಕಾಟಿಪಳ್ಳದ ದೀಪಕ್ ರಾವ್ ಹಾಗೂ ಹೊನ್ನಾವರದ ಪರೇಶ್ ಮೇಸ್ತಾ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

ಇನ್ನು ರಾಹುಲ್ ಜನಾಶೀರ್ವಾದ ಯಾತ್ರೆಗೆ ಪ್ರತಿಯಾಗಿ ಬಿಜೆಪಿಯಿಂದ ಕೇರಳ ಮಾದರಿಯಲ್ಲಿ ಪಾದಯಾತ್ರೆಗೆ ರೂಪುರೇಷೆ ಸಿದ್ಧವಾಗುತ್ತಿದೆ. ಕೇಂದ್ರ ಸಚಿವ ಅನಂತ್‌‌‌ಕುಮಾರ್ ಹೆಗಡೆ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಪ್ರತಾಪಸಿಂಹ ನೇತೃತ್ವದ ಈ ಪಾದಯಾತ್ರೆ ಕರಾವಳಿ ಜಿಲ್ಲೆಗಳಲ್ಲಿ ಮಾ.3ರಂದು ಏಕಕಾಲದಲ್ಲಿ ಆರಂಭಗೊಂಡು ಕೊಡಗು ಸೇರಿದಂತೆ ಕರಾವಳಿ ಜಿಲ್ಲೆಯಾದ್ಯಂತ ಸಂಚರಿಸಲಿದೆ.

ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಕೇರಳ ಬಿಜೆಪಿ ನಡೆಸಿದ ಪಾದಯಾತ್ರೆ ರೀತಿಯಲ್ಲಿ ಈ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯ ಸಮಾರೋಪ ಮಾ. 6ರಂದು ಸುರತ್ಕಲ್‌ನಲ್ಲಿ ನಡೆಯಲಿದೆ. ಅಂದು ನಡೆಯುವ ಬೃಹತ್ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಮಿತ್ ಶಾ ಕರಾವಳಿಯ ಭೇಟಿ ವೇಳೆ ಪಾದಯಾತ್ರೆಗೆ ಅಂತಿಮ ರೂಪ ಸಿಗಲಿದೆ. ಅದಕ್ಕೂ ಮೊದಲು ಬಿಜೆಪಿಯಿಂದ ಬೈಕ್ ಜಾಥಾ ನಡೆಯಲಿದೆ.

ಒಟ್ಟಾರೆ ಚುನಾವಣೆಗೆ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ತನ್ನ ಪಕ್ಷದ ರಾಷ್ಟ್ರೀಯ ನಾಯಕರನ್ನೇ ಕರೆಯಿಸುವ ಮೂಲಕ ಜಿಲ್ಲೆಯ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಗಳಿಸಿದ್ದನ್ನು ಉಳಿಸುವ ಪ್ರಯತ್ನದಲ್ಲಿ ಕಾಂಗ್ರೆಸ್, ಕಳೆದದ್ದನ್ನು ಮರಳಿ ಪಡೆಯುವ ಹೋರಾಟದಲ್ಲಿ ಬಿಜೆಪಿಯ ಶತಃಪ್ರಯತ್ನ ಸಾಗಿದೆ.