- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

2011ರ ವಿಶ್ವಕಪ್‌ ಸಂಭ್ರಮಕ್ಕೆ 7 ವರ್ಷ.. 28 ವರ್ಷದ ಕನಸು ನನಸಾಗಿಸಿದ ಧೋನಿ ಪಡೆ

world-cup [1]ಮುಂಬೈ: ಭಾರತೀಯರ ಮೂರು ದಶಕಗಳ ಕನಸು, ಸಚಿನ್‌ರ ಎರಡು ದಶಕಗಳ ಕನವರಿಕೆ, ಗಂಭೀರ್‌ ಅವರ ಕೆಚ್ಚದೆಯ ಬ್ಯಾಟಿಂಗ್‌, ಯುವರಾಜ್‌ ಸಿಂಗ್‌ರರ ನೋವಿನ ಆಲ್‌ರೌಂಡ್‌ ಆಟ ಹಾಗೂ ಧೋನಿಯ ಚತುರ ನಾಯಕತ್ವದಿಂದ ಭಾರತ ತಂಡ 2011ರ ಏಕದಿನ ವಿಶ್ವಕಪ್‌ನಲ್ಲಿ ಇತಿಹಾಸ ಬರೆಯಿತು. ಏಕದಿನ ವಿಶ್ವಕಪ್‌ ಗೆದ್ದು ಇಂದಿಗೆ 7 ವರ್ಷ ತುಂಬಿದೆ.

1983 ರಲ್ಲಿ ಬಲಿಷ್ಟ ತಂಡಗಳನ್ನು ಮಣಿಸಿ ಕಪಿಲ್‌ ದೇವ್‌ ಪಡೆ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಶ್ವಕಪ್‌ ಗೆದ್ದು ಬೀಗಿತ್ತು. ಬಲಿಷ್ಠ ವೆಸ್ಟ್‌ ಇಂಡೀಸ್‌ ತಂಡ ಹ್ಯಾಟ್ರಿಕ್‌ ವಿಶ್ವಕಪ್‌ ಗೆಲ್ಲುವ ಕನಸಿಗೆ ಬ್ರೇಕ್‌ ಹಾಕಿತ್ತು. ಆದರೆ ನಂತರ ದಿನಗಳಲ್ಲಿ ತಂಡ ಬಲಿಷ್ಟವಾಗಿತ್ತಾದರೂ ಮುಂದಿನ 28 ವರ್ಷಗಳ ಕಾಲ ಭಾರತ ತಂಡಕ್ಕೆ ವಿಶ್ವಕಪ್‌ ಮರೀಚಿಕೆಯಾಗಿಯೇ ಉಳಿದಿತ್ತು.

world-cup-2 [2]ನಂತರ 1987 ಹಾಗೂ 1996ರಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಭಾರತ ತಂಡ 2003 ರಲ್ಲಿ ಫೈನಲ್‌ ತಲುಪಿ ರನ್ನರ್‌ ಆಫ್‌ಗೆ ತೃಪ್ತಿಪಟ್ಟಿತ್ತು. ನಂತರ 2007ರಲ್ಲಿ ಲೀಗ್‌ ಹಂತದಲ್ಲೇ ಹೊರಬಿದ್ದು ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಗಿತ್ತು.

2007ರ ಕಹಿ ನೆನೆಪಿನೊಂದಿಗೆ 2011 ರ ವಿಶ್ವಕಪ್‌ ಅಭಿಯಾನ ಆರಂಭಿಸಿದ ಧೋನಿ ಪಡೆ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್‌ ಎತ್ತಿ ಹಿಡಿದಿತ್ತು . ಬ್ಯಾಟಿಂಗ್‌ ದಿಗ್ಗಜ ಸಚಿನ್‌ರ 20 ವರ್ಷಗಳ ಕನಸಾಗಿದ್ದ ವಿಶ್ವಕಪ್‌ ಕೊನೆಗೂ 2011ರಲ್ಲಿ ಅವರ ಕೈಸೇರಿ ಯುವಪಡೆಯೊಂದಿಗೆ ಸಂಭ್ರಮಿಸಿದ್ದರು.

world-cup-3 [3]ವಿಶ್ವಕಪ್‌ ಕನಸಿನೊಂದಿಗೆ ಅಖಾಡಕ್ಕಿಳಿದಿದ್ದ ಟೀಮ್‌ ಇಂಡಿಯಾದ ಯುವಪಡೆಗೆ ಅದ್ಭುತ ಪ್ರದರ್ಶನ ನೀಡಿತ್ತು. ಅದರಲ್ಲೂ ಕ್ಯಾನ್ಸರ್‌ ಮಾರಕ ಕಾಯಿಲೆಯ ನೋವು ದೇಹದಲ್ಲಿ ಕಾಣುತ್ತಿದ್ದರೂ ಸಹಿಸಿಕೊಂಡು ಸರಣಿಯಲ್ಲಿ ಆಲ್‌ರೌಂಡರ್‌ ಪ್ರದರ್ಶನ ನೀಡಿದ್ದ ಯುವರಾಜ್‌ರ ಪಾತ್ರ ಮಹತ್ವವಾಗಿತ್ತು.

ಫೈನಲ್‌ನಲ್ಲಿ ಪಂದ್ಯ ಸೋಲುವ ಭೀತಿಯಲ್ಲಿ ತಂಡಕ್ಕೆ ಆಸರೆಯಾಗಿದ್ದು ಗಂಭೀರ್‌ ಅವರ ತಾಳ್ಮೆಯ ಆಟ ಹಾಗೂ ಧೋನಿಯ ಭರ್ಜರಿ ಆಟ . ಇವರಿಬ್ಬರ ನೆರವಿನಿಂದ 120 ಕೋಟಿ ಭಾರತೀಯರ ವಿಶ್ವಕಪ್‌ ಕನಸು ಅಂದು ನನಸಾಗಿತ್ತು. ಫೈನಲ್‌ ಪಂದ್ಯದಲ್ಲಿ ಧೋನಿಪಡೆ 6 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ ವಿಶ್ವಕಪ್‌ ಎತ್ತಿ ಹಿಡಿದಿತ್ತು.