ರಾಜಕೀಯದಲ್ಲಿ ನಮ್ಮ ತಾಯಿ ಹೆಸರು ತರಬೇಡಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿ

3:59 PM, Friday, May 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumar-cmಬೆಂಗಳೂರು: ರಾಜಕೀಯ ವಿಚಾರದಲ್ಲಿ ದಯವಿಟ್ಟು ನಮ್ಮ ತಾಯಿಯವರ ಹೆಸರನ್ನು ತರಬೇಡಿ. ಅವರು ಎಂದೂ ಪ್ರಚಾರ ಬಯಸಿದವರಲ್ಲ. ಸಿದ್ದರಾಮಯ್ಯ ಅವರನ್ನು ಕ್ಷಮಿಸಲು ನಾನ್ಯಾರು ಎಂದು ಹೇಳಿರುವುದನ್ನೇ ಕೆಲವು ಮಾಧ್ಯಮದವರು ಅವರನ್ನು ನಾನು ಯಾವತ್ತೂ ಕ್ಷಮಿಸಲ್ಲ ಎಂದು ಬರೆದಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಗೃಹ ಕಚೇರಿಯಲ್ಲಿ ಇಂದು ಜೆಡಿಎಸ್ ಶಾಸಕ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಚೆನ್ನಮ್ಮ ಅವರು ಸಿದ್ದರಾಮಯ್ಯನವರನ್ನು ಯಾವತ್ತೂ ಕ್ಷಮಿಸಲ್ಲ ಎಂದು ಹೇಳಿದ್ದಾರೆ ಅಂತಾ ಕೆಲವು ಮಾಧ್ಯಮದವರು ಬರೆದಿದ್ದಾರೆ. ಅವರು ಆ ರೀತಿ ಹೇಳಿಕೆ ಕೊಟ್ಟಿಲ್ಲ. ಆದರೆ, ಅವರನ್ನು ಕ್ಷಮಿಸಲು ನಾನ್ಯಾರು ಎಂದು ಹೇಳಿದ್ದಾರೆ ಅಷ್ಟೆ. ಮಾಧ್ಯಮಗಳಲ್ಲಿ ಬಂದ ಇಂತಹ ವರದಿಯಿಂದ ನನ್ನ ತಾಯಿ ನೊಂದುಕೊಂಡಿದ್ದಾರೆ. ನನ್ನ ಬಳಿಯೇ ನೋವು ತೋಡಿಕೊಂಡಿದ್ದಾರೆ. ನನ್ನ ತಾಯಿ ನನಗೆ ಜನ್ಮ ಕೊಟ್ಟಿದ್ದಾರೆ. ಅವರಿಗೆ ಗೌರವ ಕೊಡುವುದು ಮಕ್ಕಳ ಕರ್ತವ್ಯ ಎಂದು ಹೇಳಿದರು.

ರೈತರ ಸಾಲ ಮನ್ನಾ ವಿಚಾರವಾಗಿ ಯಡಿಯೂರಪ್ಪ ಅವರಂತೆ ಆತುರದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರೆ ತಕ್ಷಣವೇ ಸಾಲ ಮನ್ನಾ ಪ್ರಕಟಿಸುತ್ತಿದ್ದೆ. ನಮ್ಮದು ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್ ಪಕ್ಷದ ನಾಯಕರ ಜತೆಯೂ ಚರ್ಚಿಸಿ ಘೋಷಣೆ ಮಾಡಬೇಕು ಎಂದರು.

ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಹಣಕಾಸಿನ ಕುರಿತಾಗಿ ಸಾಧಕ-ಬಾಧಕಗಳನ್ನು ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ. ರೈತರ ವಿಚಾರದಲ್ಲಿ ನಾನು ಯಾರಿಂದಲೂ ಹೇಳಿಸಿಕೊಳ್ಳಲು ಸಿದ್ಧನಿಲ್ಲ. ಅವರ ಕಷ್ಟ ಏನೆಂಬುದು ನನಗೆ ಗೊತ್ತಿದೆ. ಯಡಿಯೂರಪ್ಪನವರು ಸಿಎಂ ಆಗಿ 58 ಗಂಟೆ ಅಧಿಕಾರ ವಹಿಸಿಕೊಂಡು ಏನು ಮಾಡಿದರು. ಅಧಿಕಾರಿಗಳ ವರ್ಗಾವಣೆ ಮಾಡಿದರು. ಎಲ್ಲವನ್ನೂ ನೋಡಿದ್ದೀರಿ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರಾಜರಾಜೇಶ್ವರಿ ನಗರ ಮತ್ತು ಜಯನಗರ ಕ್ಷೇತ್ರಗಳ ಚುನಾವಣೆ ಅತ್ಯಂತ ಮಹತ್ವವಾದದ್ದು. ಇಲ್ಲಿ ಅಭ್ಯರ್ಥಿ ಮುಖ್ಯ ಅಲ್ಲ, ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು. ಎರಡೂ ಕ್ಷೇತ್ರಗಳಲ್ಲಿ ಜನತೆ ಕೈ ಹಿಡಿಯಿರಿ. ನಾವು ನಿಮ್ಮ ಜತೆ ಇರುತ್ತೇವೆ ಎಂದು ಹೇಳಿದರು.

ಎಲ್ಲ ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ. ಸಮಾಜದ ಕಟ್ಟ ಕಡೆಯ ಮನುಷ್ಯನನ್ನೂ ನಾನು ಗೌರವಿಸುತ್ತೇನೆ. ರಾಜಕಾರಣ ಮಾಡಬೇಡಿ ಎಂದು ಕೆಲ ಸ್ವಾಮೀಜಿಗಳಿಗೆ ಹೇಳಿದ್ದೇನೆ. ಸ್ವಾಮೀಜಿಗಳು ಧರ್ಮದ ರಕ್ಷಕರು. ಅವರ ಮೇಲೆ ನನಗೆ ಅಪಾರ ಗೌರವವಿದೆ. ಯಾವುದೇ ಸ್ವಾಮೀಜಿಗಳ ಪತ್ರ ನನಗೆ ಬಂದಿಲ್ಲ. ನಾನು ಯಾರನ್ನೂ ಲಘುವಾಗಿ ಪರಿಗಣಿಸಿಲ್ಲ. ನಮ್ಮ ಸರ್ಕಾರವನ್ನು ಯಾರೂ ಲಘುವಾಗಿ ಪರಿಗಣಿಸಬೇಡಿ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ. ನನ್ನ ತಪ್ಪಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದು ಕುಮಾರಸ್ವಾಮಿ ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English