- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕನ್ನಡ ಮತ್ತು ಸಂಸ್ಕ್ರತಿ ಸಚಿವೆ ಡಾ. ಜಯಮಾಲಾರಿಗೆ ತುಳು ಅಕಾಡೆಮಿ ಅಭಿನಂದನೆ

Tulu Academy [1]ಮಂಗಳೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನೂತನ ಸಚಿವರಾಗಿ ನೇಮಕಗೊಂಡಿರುವ ಡಾ. ಜಯಮಾಲಾರವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಚಿವರ ಗೃಹ ಕಛೇರಿಯಲ್ಲಿ ಭೇಟಿಯಾಗಿ ಅಭಿನಂಧಿಸಲಾಯಿತು.

ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿಯವರು ಮಂಗಳೂರಿನಲ್ಲಿರುವ ಅಕಾಡೆಮಿಯ ಸಾಂಸ್ಕ್ರತಿಕಭವನ ತುಳುಭವನಕ್ಕೆ ಭೇಟಿ ನೀಡಬೇಕೆಂದು ಸಚಿವರನ್ನು ವಿನಂತಿಸಿದರು. ಈಗಾಗಲೇ ತುಳುಭವನಕ್ಕೆ ಕಟ್ಟಡದ ಕಾಮಗಾರಿಗೆ 4.80 ಕೋಟಿ ಸರಕಾರದ ಅನುದಾನ ಬಿಡುಗಡೆಯಾಗಿದ್ದು 5 ಕೋಟಿಗೂ ಹೆಚ್ಚು ಮೊತ್ತ ಖರ್ಚಾಗಿರುತ್ತದೆ. ತುಳುಭವನದ ನೆಲ ಅಂತಸ್ತಿನ ಕಾಮಗಾರಿ ಪೂರ್ತಿ ಆಗಿದ್ದು ಮೊದಲ ಮತ್ತು ಎರಡನೇ ಅಂತಸ್ತಿನ ಕಾಮಗಾರಿ ಬಾಕಿ ಇರುತ್ತದೆ. ಮೊದಲ ಮಹಡಿಯಲ್ಲಿ 1000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಭವನ ಹಾಗೂ ಎರಡನೇ ಮಹಡಿಯಲ್ಲಿ ತುಳು ಬದುಕು ವಸ್ತು ಸಂಗ್ರಹಾಲಯ ಹಾಗೂ ಕಲಾಗ್ಯಾಲರಿ ಮಾಡಲು ಅವಕಾಶವಿದೆ. ಸದ್ರಿ ಕಾಮಗಾರಿ ಪೂರ್ತಿಗೊಳ್ಳಲು ರೂ.3.60ಕೋಟಿ ಅನುದಾನದ ಅವಶ್ಯಕತೆ ಇದ್ದು ಈಗಾಗಲೇ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಸಚಿವರ ಗಮನ ಸೆಳೆದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವೆಯಾಗಿ ಶೀಘ್ರದಲ್ಲಿ ದ.ಕ ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ ಡಾ.ಜಯಮಾಲ ತುಳು ಭಾಷೆ-ಸಂಸ್ಕ್ರತಿಯ ಬಗ್ಗೆ ಅಕಾಡಮಿ ವತಿಯಿಂದ ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿ ಕಾರ‍್ಯಕ್ರಮಗಳನ್ನು ನಡೆಸಬೇಕು.ಈ ಮೂಲಕ ಸಾವಿರಾರು ವರ್ಷಗಳ ಇತಿಹಾಸವಿರುವ , ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿರುವ ತುಳು ಭಾಷೆಯನ್ನು ಬೆಳಗಿಸಬೇಕು ಎಂದು ಸಲಹೆ ನೀಡಿದರು.

ಅಕಾಡಮಿ ಸದಸ್ಯರಾದ ಎ.ಶಿವಾನಂದ ಕರ್ಕೇರ, ತಾರನಥ ಗಟ್ಟಿ ಕಾಫಿಕಾಡ್ ಹಾಗೂ ಮಾಜಿ ಸದಸ್ಯರಾದ ಡಿ.ಎಂ.ಕುಲಾಲ್ ನಿಯೋಗದಲ್ಲಿದ್ದರು.