- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯಾದ್ಯಂತ ಮಳೆ ಹಾನಿ… 22 ಕೋಟಿ ಪರಿಹಾರ ಹಣ ಬಿಡುಗಡೆ: ಆರ್.ವಿ. ದೇಶಪಾಂಡೆ

r-v-deshpande [1]ಮಂಗಳೂರು: ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ್ಯಾಂತ ಭಾರಿ ಪ್ರಮಾಣದ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಕ್ಕೆ ಪರಿಹಾರ ನೀಡಲು 22 ಕೋಟಿ ಹಣವನ್ನು ರಾಜ್ಯ ಸರಕಾರ ‌ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಗೆ‌ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಹಾನಿಯಿಂದ ಪರಿಹಾರ ನೀಡಲು ವಿಳಂಬವಾಗಬಾರದೆಂದು‌ ನಿರ್ಧರಿಸಿದ್ದು ಪ್ರತಿ ಜಿಲ್ಲೆಗೂ ಐದು ಕೋಟಿ ಹಣ ಪರಿಹಾರ ನೀಡಲಿದ್ದೇವೆ. ಅದರಂತೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯವರೆಗೆ 3.9 ಕೋಟಿ ಇತ್ತು. ನಿನ್ನೆ ‌3 ಕೋಟಿ ಹಣ ಜಿಲ್ಲಾಡಳಿತಕ್ಕೆ ಸಿಕ್ಕಿದ್ದು ದ.ಕ ಜಿಲ್ಲಾಡಳಿತದಲ್ಲಿ‌ 6.9 ಕೋಟಿ ಹಣ ಇದೆ. ಉಡುಪಿ ಜಿಲ್ಲೆಯಲ್ಲಿ 2.51 ಕೋಟಿ ರೂ. ಇತ್ತು. ಈಗ 3 ಕೋಟಿ ಬಿಡುಗಡೆಯಾಗಿ ಅಲ್ಲಿ 5.51 ಕೋಟಿ ಹಣ ಇದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‌ಮಳೆಗೆ‌ ಈವರೆಗೆ 7 ಜನ ಮೃತಪಟ್ಟಿದ್ದಾರೆ. ಇದರಲ್ಲಿ ಮೂರು ಜನರಿಗೆ ಪರಿಹಾರ ನೀಡಲಾಗಿದೆ. ಮೃತರಿಗೆ‌ ತಲಾ 4 ಲಕ್ಷ ಪರಿಹಾರ ಇತ್ತು, ಆದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ಹೆಚ್ಚುವರಿಯಾಗಿ 5 ಲಕ್ಷ ನೀಡಲಾಗುತ್ತಿದೆ. ಪರಿಹಾರ ಸಿಗದವರಿಗೆ ಶೀಘ್ರ ನೀಡುವಂತೆ ಸೂಚಿಸಿದ್ದೇವೆ. ಬಾಡಿಗೆ ಮನೆಯಲ್ಲಿದ್ದು ಸ್ವತ್ತು ಕಳೆದುಕೊಂಡವರಿಗೆ ಸರಕಾರದಿಂದ‌ ಈಗ ನೀಡಲಾಗುವ ಪರಿಹಾರ ಹಣವನ್ನು ಹೆಚ್ಚಿಸುವ ಚಿಂತನೆ ಇದೆ ಎಂದರು.