- KANNADA MEGA MEDIA NEWS :: News Coverage From Mangalore and Major Cities of India and world wide - http://kannada.megamedianews.com -

ತಂಡದಿಂದ ತಂಡಕ್ಕೆ ಹಾರುವುದು ಕಲಾವಿದರಿಗೆ ಶೋಭೆ ತರುವಂತದ್ದಲ್ಲ: ಸೀತಾರಾಮ ಕುಲಾಲ್

tulu-film [1]ಮಂಗಳೂರು : ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹಾರುವುದು ಕಲಾವಿದರಿಗೆ ಶೋಭೆ ತರುವಂತದ್ದಲ್ಲ. ಕಲಾವಿದನಿಗೆ ತಂಡದಲ್ಲಿ ಸಮಸ್ಯೆಗಳಿದ್ದರೆ ಅದನ್ನು ವ್ಯವಸ್ಥಾಪP, ಸಂಘಟಕರಲ್ಲಿ ತಿಳಿಸಿ ಸರಿ ಮಾಡಿಕೊಳ್ಳಬೇಕು ಎಂದು ಹಿರಿಯ ನಾಟಕಕಾರ, ನಿರ್ದೇಶಕ ಎಂ.ಸೀತಾರಾಮ ಕುಲಾಲ್ ತಿಳಿಸಿದರು.

ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಲಕುಮಿ ಮತ್ತು ಶ್ರೀಲಲಿತೆ ನಾಟಕ ತಂಡದ ನಾಲ್ಕು ನಾಟಕಗಳಿಗೆ ಮುಹೂರ್ತ ನೆರವೇರಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ನಾಟಕಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅದರಲ್ಲೂ ಲಕುಮಿ ಮತ್ತು ಶ್ರೀಲಲಿತೆ ತಂಡದಿಂದ ಬಹಳಷ್ಟು ಸಂದೇಶ ಭರಿತ ನಾಟಕಗಳು ಪ್ರದರ್ಶನಗೊಂಡಿವೆ. ಜಿಲ್ಲೆಯಲ್ಲಿ ಬಹುಬೇಡಿಕೆಯ ನಾಟಕ ತಂಡಗಳಲ್ಲಿ ಲಕುಮಿ ತಂಡ ಕೂಡಾ ಒಂದಾಗಿದೆ. ಅದರ ವ್ಯವಸ್ಥಾಪಕ, ನಿರ್ದೇಶಕ ಕಿಶೋರ್ ಡಿ. ಶೆಟ್ಟಿಯವರ ಪರಿಶ್ರಮ ಮೆಚ್ಚುವಂತದ್ದು. ರಂಗಭೂಮಿಯಲ್ಲಿ ಕಲಾವಿದರಿಗಾಗಿ ಕಲಾಸೇವೆಗೈಯುವ ಸಂಘಟಕನಿದ್ದರೆ ಅದು ಕಿಶೋರ್ ಡಿ. ಶೆಟ್ಟಿ ಮಾತ್ರ ಎಂದವರು ತಿಳಿಸಿದರು.

ಕಿಶೋರ್ ಡಿ ಶೆಟ್ಟಿ ಸಂಚಾಲಕತ್ವದ ಲಕುಮಿ ತಂಡದ ಕಲಾವಿದ ಸುರೇಶ್ ಮಂಜೇಶ್ವರ ರಚನೆಯ ’ಮಂಗೆ ಮಲ್ಪೊಚ್ಚಿ’, ಮಣಿ ಕೋಟೆಬಾಗಿಲು ರಚನೆಯ ’ಗುಟ್ಟು ಗೊತ್ತಾಂಡ್’ ಹಾಗೂ ಶ್ರೀಲಲಿತೆ ತಂಡದ ಹೊಸ ನಾಟಕ ವಸಂತ ವಿ. ಅಮೀನ್ ರಚನೆಯ ಪೌರಾಣಿಕ ’ತಿರುಪತಿ ತಿಮ್ಮಪ್ಪ’ ಹಾಗೂ ಶಶಿರಾಜ್ ಕಾವೂರು ರಚನೆಯ ಸಾಮಾಜಿಕ ಹಾಸ್ಯ ಮಿಶ್ರಿತ ’ಮಿತ್ತ್ ತಿರ್’ ನಾಟಕದ ಮುಹೂರ್ತ ಶರವು ದೇವಸ್ಥಾನದಲ್ಲಿ ಜರಗಿತು.

ಲಕುಮಿ ತಂಡದ ವ್ಯವಸ್ಥಾಪಕ, ನಿರ್ದೇಶಕ ಕಿಶೋರ್ ಡಿ. ಶೆಟ್ಟಿ ಅವರು ತಂಡದಲ್ಲಿ ಪ್ರತಿಭಾನ್ವಿತರಿಗೆ ಹೆಚ್ಚು ಅವಕಾಶ ಕಲ್ಪಿಸಿದ್ದಾರೆ. ಮುಖ್ಯವಾಗಿ ಯುವ ಬರಹಗಾರರನ್ನು ಗುರುತಿಸಿ ನಾಟಕ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪ್ರಾಸ್ತಾವಿಕವಾಗಿ ನವೀನ್ ಶೆಟ್ಟಿ ಅಳಕೆ ಮಾತನಾಡಿದರು.

tulu-film-2 [2]ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಕಲಾವಿದ ಅರವಿಂದ ಬೋಳಾರ್ ಅವರು ಕಲಾವಿದನಿಗೆ ಸಮಯ ಪ್ರಜ್ಞೆ ಮುಖ್ಯ. ತಂಡದ ಕುರಿತು ನಿಷ್ಠೆ, ಗೌರವವನ್ನು ಉಳಿಸಿಕೊಂಡು ಪಾತ್ರಕ್ಕೆ ನ್ಯಾಯ ಸಲ್ಲಿಸುವ ಕೆಲಸವನ್ನು ಮಾಡಬೇಕು. ಕಲಾವಿದನಿಗೆ ಅಹಂಕಾರ, ದರ್ಪ ಬಂದರೆ ಆತನ ಕಲಾ ಬದುಕಿಗೆ ಅದು ಮಾರಕವಾಗಬಹುದು ಎಂದರು.

ಸಮಾರಂಭದಲ್ಲಿ ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಪ್ರಸರಣಾಧಿಕಾರಿ ಕದ್ರಿ ನವನೀತ ಶೆಟ್ಟಿ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ತಾರಾನಾಥ ಶೆಟ್ಟಿ ಬೋಳಾರ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮುದ್ದು ಮೂಡುಬೆಳ್ಳೆ, ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ, ನವೀನ್ ಶೆಟ್ಟಿ ಅಳಕೆ, ಶಶಿರಾಜ್ ಕಾವೂರು, ವಸಂತ ಅಮೀನ್, ನಿಟ್ಟೆ ಶಶಿಧರ್ ಶೆಟ್ಟಿ , ಗೋಕುಲ್ ಕದ್ರಿ, ಸುರೇಶ್ ಮಂಜೇಶ್ವರ್, ಮೋಹನ್ ಕೊಪ್ಪಲ, ಮಣಿ ಕೋಟೆಬಾಗಿಲು, ಹರೀಂದ್ರನಾಥ ಶೆಟಿ, ಮಂಜು ರೈ ಮೂಳೂರು, ರವಿ ಸುರತ್ಕಲ್, ಎಚ್ .ಕೆ ನಯನಾಡು, ಶೋಭಾ ಶಕ್ತಿನಗರ ರಾಜೇಶ್ ಕೆಂಚನಕೆರೆ, ಸುಜೀತ್ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು. ಜೀವನ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.