- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾಲ ಮನ್ನಾ ವಿಚಾರಕ್ಕೆ ಕಾಂಗ್ರೆಸ್ ಶಾಸಕರಿಂದಲೇ ವಿರೋಧ ವ್ಯಕ್ತ..!

kumarswamy [1]ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಡೆಯಿತು. ಅನ್ನಭಾಗ್ಯದ 2 ಕೆಜಿ ಅಕ್ಕಿ ಕಡಿತ ಮತ್ತು ಸಾಲ ಮನ್ನಾ ವಿಚಾರಕ್ಕೆ ಮೈತ್ರಿ ಪಕ್ಷ ಕಾಂಗ್ರೆಸ್ ಶಾಸಕರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಜೆಡಿಎಸ್ ಶಾಸಕರಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ.

ಅನ್ನಭಾಗ್ಯದ ಅಕ್ಕಿ 7 ಕೆಜಿ ಏರಿಸುವ ಬಗ್ಗೆ ಅಭಿಪ್ರಾಯ ಪಡೆದುಕೊಂಡಿರುವ ಸಿಎಂ, ಅಲ್ಲದೆ ಸಾಲ ಮನ್ನಾ ವ್ಯಾಪ್ತಿ ವಿಸ್ತರಿಸುವ ಬಗ್ಗೆಯೂ ಶಾಸಕರಿಂದ ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗಿದೆ.

ಅನ್ನಭಾಗ್ಯದ ಅಕ್ಕಿ ಹೆಚ್ಚಳ ಮಾಡುವಂತೆ ಕೆಲ ಶಾಸಕರು ಸಲಹೆ ನೀಡಿದ್ದು, ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವ ಸಿಎಂ, ಯಥಾಪ್ರಕಾರ 7 ಕೆಜಿ ಅಕ್ಕಿ ಮುಂದುವರೆಸಲು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಎದುರೇ ಪಕ್ಷದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ನಡುವೆ ಮಾತಿನ ಸಮರ ನಡೆದಿದೆ ಎಂದು ಹೇಳಲಾಗುತ್ತಿದೆ.

ಶಾಸಕಾಂಗದ ಸಭೆಗೆ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಜರಾಗಿದ್ದರು. ಸಂದೇಶ್ ನಾಗರಾಜ್ ಅವರನ್ನು ನೋಡುತ್ತಿದ್ದಂತೆ ಸಚಿವರಾದ ಸಾ.ರಾ.ಮಹೇಶ್ ಮತ್ತು ಪುಟ್ಟರಾಜು ಆಕ್ರೋಶದ ಮಾತುಗಳನ್ನು ಹೊರಹಾಕಲು ಆರಂಭಿಸಿದರು ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಸಂದರ್ಭದಲ್ಲಿ ಸಂದೇಶ್ ನಾಗರಾಜ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಚುನಾವಣೆಯಲ್ಲಿ ನಮ್ಮ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಕೂಡಲೇ ಸಂದೇಶ್ ನಾಗರಾಜ್ ಅವರನ್ನು ಸಭೆಯಿಂದ ಹೊರಗೆ ಕಳುಹಿಸಿ ಎಂದು ಸಚಿವರು ಮತ್ತು ಶಾಸಕರು ಸೇರಿದಂತೆ ಹಲವು ಮುಖಂಡರು ಒತ್ತಾಯಿಸಿದ್ದಾರೆ.

ನಾಯಕರ ಆಕ್ಷೇಪಗಳು ಜೋರಾಗುತ್ತಿದ್ದಂತೆ ಜೆಡಿಎಸ್ ಹಿರಿಯ ಮುಖಂಡ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಎಲ್ಲರನ್ನು ಸಮಾಧಾನ ಪಡಿಸಿದರು ಎಂದು ತಿಳಿದುಬಂದಿದೆ.