ಸಾರಿಗೆ ಸಂಚಾರ ಸ್ಥಗಿತ, ಶಾಲಾ-ಕಾಲೇಜು ಬಂದ್

9:22 AM, Monday, September 10th, 2018
Share
1 Star2 Stars3 Stars4 Stars5 Stars
(No Ratings Yet)
Loading...

bhandh ಬೆಂಗಳೂರು : ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಸೋಮವಾರ ಕರೆ ನೀಡಿರುವ ಬಂದ್ ನಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಕೆಲ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ಕೂಡ ಮುಚ್ಚಿವೆ.

ಬಂದ್ ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆ್ಯಪ್ ಆಧಾರಿತ ಟ್ಯಾಕ್ಸಿ , ಏರ್ ಪೋರ್ಟ್ ಟ್ಯಾಕ್ಸಿ, ಆಟೋ ಸೇವೆ ಸೇರಿದಂತೆ ಕೆಲವು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಜನರಿಗೆ ಅಗತ್ಯ ಸೇವೆಗಳಾದ ಹಣ್ಣು, ತರಕಾರಿ, ಹಾಲು, ಔಷಧಿ, ಆಸ್ಪತ್ರೆ ಸೇವೆಗಳು ಎಂದಿನಂತೆ ತೆರೆದಿವೆ. ಇನ್ನು ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ.

ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಆಟೋ, ಮೊಬೈಲ್ ಆಧಾರಿತ ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರು ಪ್ರಯಾಣಿಕರಿಂದ ಮನಸೋ ಇಚ್ಛೆ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇಂದಿನ ಬಂದ್ ಗೆ ರಾಜ್ಯ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ಬೆಂಬಲ ಸೂಚಿಸಿರುವುದರಿಂದ ಬಂದ್ ತೀವ್ರವಾಗುವ ಸಾಧ್ಯತೆ ಇದೆ. ಉಭಯ ಪಕ್ಷಗಳ ಕಾರ್ಯಕರ್ತರು ರಾಜ್ಯಾದ್ಯಂತ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ, ಮೆರವಣಿಗೆ ನಡೆಸಲಿದ್ದಾರೆ.

ಬಂದ್ ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾರತ್ ಬಂದ್’ ಸಂದರ್ಭದಲ್ಲಿ ಗುಂಪು ಘರ್ಷಣೆ, ಗಲಭೆ, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಯಿರುವುದರಿಂದ ರಾಜ್ಯವ್ಯಾಪಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 15 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಕಮಲ್ ಪಂತ್ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English