ಪಂಪುವೆಲ್ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ

12:34 PM, Saturday, October 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

tokattuಮಂಗಳೂರು: ಪಂಪುವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು, ನಂತೂರು ಮೇಲ್ಸೇತುವೆ ನಿರ್ಮಿಸಲು ಹಾಗೂ ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಲು ಒತ್ತಾಯಿಸಿ ಇಂದು (ತಾ. 12-10-2018) ಪಂಪುವೆಲ್ ಮೇಲ್ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ದೇಶದ ಜೀವನಾಡಿಗಳಿದ್ದಂತೆ ಹೆದ್ದಾರಿಗಳಲ್ಲಿ ವಾಹನಗಳು ನಿರಾತಂಕವಾಗಿ ಚಲಿಸುವಂತೆ ಸುಸ್ಥಿತಿಯಲ್ಲಿಡುವುದು ಹೆದ್ದಾರಿ ಪ್ರಾಧಿಕಾರದ ಕರ್ತವ್ಯವಾಗಿರುತ್ತದೆ. ಆದರೆ ಮಂಗಳೂರಿನ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. ಪಂಪುವೆಲ್, ತೊಕ್ಕೊಟ್ಟಿನ ಮೇಲ್ಸೇತುವೆ ಕಾಮಗಾರಿ ಕಳೆದ ೮ ವರುಷಗಳಿಂದ ಪೂರ್ಣಗೊಂಡಿಲ್ಲ. ಹೆದ್ದಾರಿಯುದ್ದಕ್ಕೂ ಸರ್ವಿಸ್ ರಸ್ತೆಗಳಿಲ್ಲ, ಮಾರಣಾಂತಿಕ ಗುಂಡಿಗಳಿಂದ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದೆ. ಅರ್ಧಕ್ಕೆ ನಿಂತಿರುವ ಮೇಲ್ಸೇತುವೆ ಹಾಗೂ ರಸ್ತೆ ಅವ್ಯವಸ್ಥೆಯಿಂದಾಗಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜು ತಲುಪಲಾಗುತ್ತಿಲ್ಲ, ಜನತೆ ಸಮಯಕ್ಕೆ ಸರಿಯಾಗಿ ಉದ್ಯೋಗದ ಸ್ಥಳಗಳಿಗೆ ತೆರಳಲಾಗುತ್ತಿಲ್ಲ.

ಇಷ್ಟೆಲ್ಲಾ ಸಮಸ್ಯೆಗಳಿಗೆ ಮೂಲಕಾರಣ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯ ಗುತ್ತಿಗೆ ಪಡೆದಿರುವ ’ನವಯುಗ ಕಂಪೆನಿ’ಯ ಬೇಜವಾಬ್ದಾರಿ ನಡವಳಿಕೆ, ಜೊತೆಗೆ ಸರ್ವಿಸ್ ರಸ್ತೆಗಳಿಲ್ಲದೆ ವಾಹನಗಳು, ಪ್ರಯಾಣಿಕರು ಪರದಾಡುವಂತಾಗಿದೆ. ಇಂತಹ ಸಮಸ್ಯೆಯಿಂದಾಗಿ ಈಗಾಗಲೇ ಅನೇಕ ಜೀವಹಾನಿಗಳು ಸಂಭವಿಸಿದೆ. ಒಟ್ಟಿನಲ್ಲಿ ತಲಪಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗೇಟ್ ಸಮಸ್ಯೆ, ಅರ್ಧಂಬರ್ಧ ಮೇಲ್ಸೇತುವೆಗಳ ನಿರ್ಮಾಣ ಸರ್ವಿಸ್ ರಸ್ತೆಗಳ ದುರಾವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಜನ ಕಳೆದ ಹಲವು ವರುಷಗಳಿಂದ ನಿರಂತರವಾಗಿ ಅನುಭವಿಸುತ್ತಿದ್ದಾರೆ.

ಈ ಸಮಸ್ಯೆಗಳಿಗೆದುರಾಗಿ ಈಗಾಗಲೇ ಜನತೆ ಅಲ್ಲಲ್ಲಿ ಬೀದಿಗಿಳಿದು ಹೋರಾಟಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಿಸಬೇಕು ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಸಹಿತ ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ಬೇಡಿಕೆಗಳನ್ನಿಟ್ಟು ಮನವಿಯನ್ನು ಅರ್ಪಿಸಲಾಗಿದೆ. ಬಳಿಕ ಹೋರಾಟ ಸಮಿತಿಯ ನಿಯೋಗವು ಜಿಲ್ಲಾಧಿಕಾರಿಗಳಿಗೆ ಸಂಸದರಾದ ನಳಿನ್‌ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್‌ರವರಿಗೆ ಮನವಿಯನ್ನು ಅರ್ಪಿಸಿತು.

ನಿಯೋಗದಲ್ಲಿ ಪಂಪ್‌ವೆಲ್ ಮೇಲ್ಸೇತುವೆ ಹೋರಾಟ ಸಮಿತಿಯ ಸಂಚಾಲಕರಾದ ಸುನೀಲ್‌ಕುಮಾರ್ ಬಜಾಲ್, ಇತರ ಪದಾಧಿಕಾರಿಗಳಾದ ಸಂತೋಷ್ ಕುಮಾರ್ ಬಜಾಲ್, ಡೋಲ್ಫಿ ಡಿ’ಸೋಜ, ಜೆರಾಲ್ಡ್ ಟವರ್, ರಾಮಚಂದ್ರ ಪೂಜಾರಿ, ಸುಜಾತ ಸುವರ್ಣ, ಸ್ಟೀವನ್ ವಾಸ್‌ರವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English