25 ಅರ್ಹ ಅನಾರೋಗ್ಯ ಪೀಡಿತರಿಗೆ 15 ಲಕ್ಷದವರೆಗೆ ನಗದು ಹಸ್ತಾಂತರಿಸಲಿದ್ದೇವೆ: ದಿನೇಶ್ ಸುವರ್ಣ ರಾಯಿ

11:04 AM, Thursday, October 18th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kudlaಮಂಗಳೂರು: ಮಂಗಳೂರು ದಸರಾದ ವೈಭವದ ಶೋಭಾಯಾತ್ರೆಯು ಅ.19ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಬಳ್ಳಾಲ್ಬಾಗ್ ವೃತ್ತದ ಬಳಿ ಹಾಕಿರುವ ವೇದಿಕೆಯಲ್ಲಿ ಫ್ರೆಂಡ್ಸ್ ಬಳ್ಳಾಲ್ ಬಾಗ್, ಬಿರುವೆರ್ ಕುಡ್ಲ ಸಂಸ್ಥೆ ಹುಲಿವೇಷ ಕುಣಿತವನ್ನು ಆಯೋಜಿಸಿದೆ.

ಈ ಸಂದರ್ಭದಲ್ಲಿ 25 ಅರ್ಹ ಅನಾರೋಗ್ಯ ಪೀಡಿತರಿಗೆ 15 ಲಕ್ಷದವರೆಗೆ ನಗದು ಹಸ್ತಾಂತರಿಸಲಿದ್ದೇವೆ ಎಂದು ಫ್ರೆಂಡ್ಸ್ ಬಳ್ಳಾಲ್ ಬಾಗ್, ಬಿರುವೆರ್ ಕುಡ್ಲದ ವಕ್ತಾರ ದಿನೇಶ್ ಸುವರ್ಣ ರಾಯಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಅಲ್ಲದೆ ಫ್ರೆಂಡ್ಸ್ ಬಳ್ಳಾಲ್ಬಾಗ್, ಬಿರುವೆರ್ ಕುಡ್ಲದ 4ನೇ ವರ್ಷದ ಅಂಗವಾಗಿ ಮಂಗಳೂರು ದಸರಾದ ವೈಭವದ ಶೋಭಾಯಾತ್ರೆಯಲ್ಲಿ 6 ವರ್ಣರಂಜಿತ ಟ್ಯಾಬ್ಲೋಗಳು ಇರಲಿವೆ ಎಂದು ಅವರು ಹೇಳಿದರು.

ಫ್ರೆಂಡ್ಸ್ ಬಳ್ಳಾಲ್ ಬಾಗ್, ಬಿರುವೆರ್ ಕುಡ್ಲ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಕ್ರೀಡಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಮುಂಬೈ, ದುಬೈ ಮುಂತಾದ ಕಡೆಯೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.

ಈ ಸಂಸ್ಥೆಯು ಅರ್ಹ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 50 ಸಾವಿರದಿಂದ 1 ಲಕ್ಷದವರೆಗೆ ಧನಸಹಾಯ ಮಾಡುತ್ತಿದ್ದು, ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೂಡಾ ನೀಡುತ್ತಾ ಬಂದಿದೆ.

ಕಳೆದ ವರ್ಷದ ದಸರಾ ಮಹೋತ್ಸವದ ಅಂಗವಾಗಿ ನಡೆಸಿದ ಹುಲಿವೇಷ ಕುಣಿತದಲ್ಲಿ ಸಂಗ್ರಹವಾಗಿದ್ದ 4 ಲಕ್ಷ ರೂ. ಹಣವನ್ನು ಅದೇ ವೇದಿಕೆಯಲ್ಲಿ ಅರ್ಹ ಅನಾರೋಗ್ಯ ಪೀಡಿತರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಫ್ರೆಂಡ್ಸ್ ಬಳ್ಳಾಲ್ಬಾಗ್, ಬಿರುವೆರ್ ಕುಡ್ಲ ಮಹಿಳಾ ಘಟಕದಿಂದ ಡಿಸೆಂಬರ್ 2ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಹಿಂದೂ ಧರ್ಮಕ್ಕೆ ಸೇರಿದ 10 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ. ಈ ಉಚಿತ ಸಾಮೂಹಿಕ ವಿವಾಹದ ನೋಂದಣಿಯು ನವೆಂಬರ್ 10 ರವರೆಗೆ ಚಾಲ್ತಿಯಲ್ಲಿರಲಿದೆ ಎಂದು ದಿನೇಶ್ ಸುವರ್ಣ ರಾಯಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ರಾಕೇಶ್ ಪೂಜಾರಿ, ವಿದ್ಯಾ ರಾಕೇಶ್, ಕಿಶೋರ್ ಬಾಬು, ದೀಪು ಶೆಟ್ಟಿಗಾರ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English