ಉಡಾಫೆ ಉತ್ತರ ಕೊಟ್ಟರೆ ನಮ್ಮ ಹೋರಾಟ ಮುಂದುವರಿಯುತ್ತದೆ: ಬಿ.ಎಸ್. ಯಡಿಯೂರಪ್ಪ

5:28 PM, Friday, December 7th, 2018
Share
1 Star2 Stars3 Stars4 Stars5 Stars
(No Ratings Yet)
Loading...

yedyurappaಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ನಾವು ಸರ್ಕಾರಕ್ಕೆ ಸಹಕಾರ ಕೊಡುತ್ತೇವೆ. ಆದರೆ ಸರಿಯಾಗಿ ಉತ್ತರ ಕೊಡದೇ ಉಡಾಫೆ ಉತ್ತರ ಕೊಟ್ಟರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ಸಾಲಮನ್ನಾ ವಿಚಾರದಲ್ಲಿ ಸಿಎಂ ಶೋ ಕೊಡುತ್ತಾ ಓಡಾಡುತ್ತಿದ್ದಾರೆ. ಬೆಳಗಾವಿ ಅಧಿವೇಶನದ ಆರಂಭದ ದಿನ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿ ಕೆಲ ಕಾಲ ಮುಂದೂಡಲಾಗುತ್ತದೆ. ನಾವು ಅಂದು ಒಂದು‌ ಲಕ್ಷ ಜನ ರೈತರನ್ನು ಸೇರಿಸಿ ಹೋರಾಟ ಮಾಡಿ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.

ರೈತರ ಧನಿಯಾಗಿ ಕಲಾಪದಲ್ಲಿ ಭಾಗಿಯಾಗಲಿದ್ದೇವೆ. ಬೆಳಗಾವಿಯ ಕಲಾಪದಲ್ಲಿಯಾದರೂ ಸರ್ಕಾರ ರೈತರ ಸಮಸ್ಯೆಗಳ ಕುರಿತು ಸೂಕ್ತ ರೀತಿಯ ಉತ್ತರ ನೀಡಬೇಕು. ಅದನ್ನು ಬಿಟ್ಟು ಉಡಾಫೆ ಉತ್ತರ ಕೊಟ್ಟರೆ ನಮ್ಮ ಹೋರಾಟ ಆರಂಭಗೊಳ್ಳಲಿದೆ ಎಂದು ಬಿಎಸ್ವೈ ಎಚ್ಚರಿಕೆ ರವಾನಿಸಿದ್ರು.

ನೀವು ನಾಟಿ ಮಾಡಿದ ಭತ್ತದ ಕೊಯಿಲು ಮಾಡಲು ಹೋಗಿದ್ದೀರಿ.‌ ನೀವು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಾಕಷ್ಟು ತಾಲೂಕುಗಳು ಬರದಿಂದ ತತ್ತರಿಸಿವೆ. ಜನರಿಗೆ ಕುಡಿಯಲು ನೀರಿಲ್ಲ, ಆದರೆ ನೀವಾಗಲಿ ನಿಮ್ಮ ಸಚಿವರಾಗಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಇಂದು ನೀವು ಭತ್ತ ನಾಟಿ ಮಾಡಿ ಕೊಯಿಲಿಗೆ ಬಂದದ್ದು ನೋಡಿದರೆ, ಉತ್ತರ ಕರ್ನಾಟಕದ ಬಗ್ಗೆ ಇರುವ ನಿಮ್ಮ ಮಲತಾಯಿ ಧೋರಣೆ ಅಸಹನೆ ಹುಟ್ಟಿಸುತ್ತದೆ. ಉತ್ತರ ಕರ್ನಾಟಕದ ಬಗ್ಗೆ ನಿಮಗಿರುವ ಮಲತಾಯಿ ಧೋರಣೆ, ಅಸಡ್ಡೆತನದ ಬಗ್ಗೆ ಚರ್ಚಿಸುವುದು ಅನವಶ್ಯಕ ಎನಿಸುತ್ತದೆ. ಒಬ್ಬ ವ್ಯಕ್ತಿ ಒಂದು ಸಲ ತಮ್ಮ ನಿಲುವು, ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ ಎಂದಾದ ಮೇಲೆ ನಿಮ್ಮ ಉತ್ತರ ಕರ್ನಾಟಕ ವಿರೋಧಿ ನಿಲುವಿನ ಬಗ್ಗೆ ಚರ್ಚಿಸೋದು ವ್ಯರ್ಥದ ಮಾತಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಆದವರು ತಾಯಿ ಸ್ಥಾನದಲ್ಲಿರಬೇಕೇ ಹೊರತು ಮಲತಾಯಿ ಸ್ಥಾನದಲ್ಲಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ರು.

35 ಸಾವಿರ ಕೋಟಿ ರೂಪಾಯಿ ಹಣಕ್ಕೆ ಲೆಕ್ಕ ಪತ್ರ ಇಲ್ಲವೆಂದು ಸಿಎಜಿ ವರದಿ ತೋರಿಸುತ್ತದೆ. ಆದರೆ ನಿಮ್ಮ ಪಕ್ಷದವರ ಮೇಲೆ ಆಪಾದನೆ ಬಂದರೆ ನಮ್ಮ ಮೇಲೆ ಬೊಟ್ಟು ತೋರಿಸೋದು ರಾಜ್ಯ ರಾಜಕೀಯದಲ್ಲಿ ವಾಡಿಕೆ ಆಗಿದೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಅಂತಾ ಹೇಳ್ತಿದ್ದಾರೆ. ಹಣಕಾಸು ಸಚಿವನಾಗಿ , ಸಿಎಂ ಆಗಿದ್ದವರು ವಾಸ್ತವಿಕ ಮಾತಡೋದನ್ನು ಬಿಟ್ಟು ಈ ರೀತಿ ಮಾತಾಡ್ತಾರೆ. ಸಿದ್ದರಾಮಯ್ಯ ಅವರಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ಸಿದ್ದರಾಮ್ಯಯ ವಿರುದ್ಧವೂ ಬಿಎಸ್ವೈ ಗರಂ ಆದರು.

ಇಂದು ಬೆಳಗ್ಗೆ ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದ್ದೆ. ಶ್ರೀಗಳು ಈ ವೇಳೆ ವಚನ ಹೇಳಿ ಅವರ ವಯಸ್ಸನ್ನೂ ಹೇಳಿದ್ದಾರೆ. ನಾಳೆ ಚೆನ್ನೈನಲ್ಲಿ ಆಪರೇಷನ್ ಯಶಸ್ವಿಯಾಗಿ ಇನ್ನೂ ಹತ್ತಾರು ವರ್ಷ ಶ್ರೀಗಳು ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಎರಡು ವರ್ಷಗಳಿಂದ ವಿಶ್ರಾಂತಿಗೆ ಹೋಗಿರಲಿಲ್ಲ. ಹಾಗಾಗಿ ಕೇರಳದ ಕೋಟಕ್ಕಲ್ ನಲ್ಲಿ ಆರು ದಿನ ಚಿಕಿತ್ಸೆ ಪಡೆದು ಬಂದಿದ್ದೇನೆ. ಸತತ ಪ್ರವಾಸ, ಓಡಾಟದಿಂದ ಆಯಾಸ ಹೆಚ್ಚಾಗಿತ್ತು. ಹಾಗಾಗಿ ವಿಶ್ರಾಂತಿ ಪಡೆಯಲು ಹೋಗಿದ್ದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English