ಮಾಧ್ಯಮಗಳು ಇಂದು ಲಾಭ-ನಷ್ಟದೊಂದಿಗೆ ಟಿಆರ್‌ಪಿ ಲೆಕ್ಕಾಚಾರದಲ್ಲಿ ಮುಳುಗಿವೆ : ಎಂ.ಸಿದ್ಧರಾಜು

6:36 PM, Wednesday, January 16th, 2019
Share
1 Star2 Stars3 Stars4 Stars5 Stars
(No Ratings Yet)
Loading...

Journalistಮಂಗಳೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ)ನ ದ.ಕ.ಜಿಲ್ಲಾ ಸಮಿತಿಯು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಭಾಗಿತ್ವದಲ್ಲಿ ನಗರದ ಹಂಪನಕಟ್ಟೆಯ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಬುಧವಾರ ‘ಸಂವಿಧಾನದತ್ತ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮದ ಪಾತ್ರ’ದ ಬಗ್ಗೆ ಮಾಧ್ಯಮ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷ ಎಂ.ಸಿದ್ಧರಾಜು  ಉದ್ಘಾಟಿಸಿದರು.

ಮಾಧ್ಯಮಗಳು ಇಂದು ಲಾಭ-ನಷ್ಟದೊಂದಿಗೆ ಟಿಆರ್‌ಪಿ ಲೆಕ್ಕಾಚಾರದಲ್ಲಿ ಮುಳುಗಿವೆ. ಉದ್ಯಮಿಗಳ ಕೈಯಲ್ಲಿ ಮಾಧ್ಯಮಗಳು ಸ್ಥಾಪನೆಗೊಳ್ಳುವುದರಿಂದ ವಸ್ತುನಿಷ್ಠ ವರದಿಗಳು, ವೈಚಾರಿಕತೆ, ಸಮಾಜದ ಹಿತ ಕಾಪಾಡುವ ಸಂಗತಿಗಳು ಸುದ್ದಿಯಾಗುತ್ತಿಲ್ಲ.  ಮಾಧ್ಯಮಗಳು  ಸೇವಾ ಮನೋಭಾವವನ್ನು ಹೊಂದಿಲ್ಲ. ವೀಕ್ಷಕರು ಅಥವಾ ಓದುಗರ ಬದಲು ಗ್ರಾಹಕರನ್ನು ಮಾಧ್ಯಮಗಳು ಹುಡುಕಿಕೊಂಡು ಹೋಗುತ್ತಿವೆ ಎಂದು ಸಿದ್ಧರಾಜು ಹೇಳಿದರು

ಪ್ರಮುಖ ಸುದ್ದಿಗಳ ಬದಲು ಜಾಹೀರಾತುಗಳು ಮೇಳೈಸುತ್ತದೆ. ಮೊನ್ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ ಚಿತ್ರ ನಟರ ಮನೆಗಳಿಗೆ ಐಟಿ ದಾಳಿಯಾಯಿತು. ಮಾಧ್ಯಮಗಳು ಐಟಿ ದಾಳಿಯ ಸುದ್ದಿಗೆ ಪ್ರಾಮುಖ್ಯತೆ ನೀಡಿತೇ ವಿನಃ ಸಾಹಿತ್ಯ ಸಮ್ಮೇಳನದ ಬಗ್ಗೆ ಬೆಳಕು ಚೆಲ್ಲಲಿಲ್ಲ. ರೋಚಕ ಸುದ್ದಿಗಳ ಬೆನ್ನ ಹಿಂದೆ ಬೀಳುವುದರಿಂದ ನೈಜ ಸುದ್ದಿಗಳು ಮಸುಕಾಗುತ್ತಿವೆ. ಸಾಮಾಜಿಕ ಜಾಲತಾಣಗಳು ಬಂದ ಬಳಿಕವಂತೂ ಪತ್ರಕರ್ತನ ಬರವಣಿಗೆಯನ್ನೇ ಕೊಂದು ಹಾಕಲಾಗುತ್ತದೆ ಎಂದು ಎಂ.ಸಿದ್ಧರಾಜು ವಿಷಾದಿಸಿದರು.

ಪ್ರಜಾಪ್ರಭುತ್ವದ ಪ್ರಮುಖ ಮೂರು ಅಂಗಗಳ ಹೊರತಾಗಿಯೂ ಮಾಧ್ಯಮ ರಂಗಕ್ಕೆ ಸಂವಿಧಾನದತ್ತ ಹಕ್ಕುಗಳ ರಕ್ಷಣೆಯು ಸಾಧ್ಯವಿದೆ. ಪ್ರಜಾಪ್ರಭುತ್ವವು ಪ್ರಬಲಗೊಳ್ಳಲು ಮಾಧ್ಯಮಗಳು ಸಮಾಜದ ಜ್ವಲಂತ ಸಮಸ್ಯೆಗೆ ಸದಾ ಸ್ಪಂದಿಸಬೇಕು. ಆದರೆ ಮಾಧ್ಯಮಗಳು ತನ್ನ ಕರ್ತವ್ಯ ಮರೆತು ‘ಸಮಾಜ’ವನ್ನು ಕೈ ಬಿಟ್ಟರೆ ಪ್ರಜಾಪ್ರಭುತ್ವಕ್ಕೆ ಅಪಾಯದ ಭೀತಿಯಾಗಲಿದೆ ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ ಹೇಳಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ)ನ ದ.ಕ.ಜಿಲ್ಲಾ ಸಮಿತಿಯು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಭಾಗಿತ್ವದಲ್ಲಿ ನಗರದ ಹಂಪನಕಟ್ಟೆಯ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಬುಧವಾರ ಏರ್ಪಡಿಸಿದ ಮಾಧ್ಯಮ ಕಾರ್ಯಾಗಾರದಲ್ಲಿ ‘ಸಂವಿಧಾನದತ್ತ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮದ ಪಾತ್ರ’ದ ಬಗ್ಗೆ ಅವರು ವಿಚಾರ ಮಂಡಿಸಿ ಮಾತನಾಡಿದರು.

ಸಂವಿಧಾನ ನಿಂತ ನೀರಲ್ಲ. ಅದರ ಬದಲಾವಣೆಗೆ ಅವಕಾಶವೂ ಇದೆ. ಸಮಾಜದ ಒಳಿತಿಗಾಗಿ ಮತ್ತು ಸಂವಿಧಾನದ ಉದ್ದೇಶದ ಈಡೇರಿಕೆಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬಹುದಾಗಿದೆ. ಆದರೆ, ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟ ಮೂಲಭೂತ ಹಕ್ಕುಗಳನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಅದು ಸಂವಿಧಾನದ ಭದ್ರ ಬುನಾದಿಯಾಗಿದೆ. ಅದನ್ನು ರದ್ದುಗೊಳಿಸಿದರೆ ಬದುಕಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ ಲಭಿಸಿ 70 ವರ್ಷವಾದರೂ ಕೂಡ ದೇಶದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಿವೆ, ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ವಾಸಿಸುವವರ ಸಂಖ್ಯೆ ಹೆಚ್ಚಾಗುತ್ತಿವೆ, ಸಾಮಾಜಿಕ ನ್ಯಾಯ ಪಾಲನೆಯಾಗುತ್ತಿಲ್ಲ, ಮೀಸಲಾತಿ ಜಾರಿಗೊಳ್ಳುತ್ತಿಲ್ಲ. ಇದರ ಬಗ್ಗೆ ಮಾಧ್ಯಮಗಳು ತನ್ನ ಜವಾಬ್ದಾರಿ ಅರಿತು ಬೆಳಕು ಚೆಲ್ಲಬೇಕಿತ್ತು. ಮಾಧ್ಯಮದಲ್ಲಿ ತೊಡಗಿಸಿಕೊಂಡವರು ಕರ್ತವ್ಯನಿಷ್ಠೆಯೊಂದಿಗೆ ಸಮಾಜಕ್ಕೆ ಧ್ವನಿಯಾಗಬೇಕಿದೆ ಎಂದು ಎಚ್.ಕಾಂತರಾಜ್ ನುಡಿದರು.

ಸರಕಾರಗಳು ಸಾಮಾಜಿಕ ನ್ಯಾಯ ಕಲ್ಪಿಸಲು ‘ವೇಗ’ ನೀಡಬೇಕಿದೆ. ಸಮಾನತೆಗಾಗಿ ಸಂಸತ್ತಿನಲ್ಲಿ ಶೇ.50ರಷ್ಟು ಮಹಿಳೆಯರಿರಬೇಕಿತ್ತು. ಆದರೆ, ಇಂದು ಕೇವಲ ಶೇ.19ರಷ್ಟು ಮಹಿಳೆಯರು ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನವೂ ಸಿಗುತ್ತಿಲ್ಲ. ಶೇ.60ರಷ್ಟು ಮಹಿಳೆಯರು ಇಂದಿಗೂ ವೇತನವಿಲ್ಲದೆ ಶ್ರಮಜೀವಿಗಳಾಗಿದ್ದಾರೆ. ಸ್ವಾತಂತ್ರ ಸಿಕ್ಕಿದಾಗಲೇ ಸಾರ್ವತ್ರಿಕ ಶಿಕ್ಷಣ ನೀಡಿದ್ದರೆ ಇಂದು ಶೇ.50ರಷ್ಟು ಮಹಿಳೆಯರು ಭಾರತೀಯ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವಿತ್ತು. ಆಳುವ ವರ್ಗ ಅದಕ್ಕೆ ತಡೆಯಾಗಿ ನಿಂತಿದೆ. ಹೀಗಿರುವಾಗ ಮಾಧ್ಯಮ ಗಳು ಇಂತಹ ಅನ್ಯಾಯ, ಅಸಮಾನತೆಯ ವಿರುದ್ಧ ಚಾಟಿ ಬೀಸಬೇಕು ಎಂದು ಎಚ್.ಕಾಂತರಾಜ್ ತಿಳಿಸಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಅಧ್ಯಕ್ಷ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಯೂನಿಯನ್ ವತಿಯಿಂದ ಸ್ಥಾಪಿಸಲಾಗುವ ಪತ್ರಕರ್ತರ ಕ್ಷೇಮನಿಧಿಗೆ ಚಾಲನೆ ನೀಡಿ ಮಾತನಾಡಿದರು. ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್, ಸಂಸದ ನಳಿನ್ ಕುಮಾರ್ ಕಟೀಲ್, ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು, ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ನವೀನಚಂದ್ರ ಡಿ.ಸುವರ್ಣ ಅತಿಥಿಯಾಗಿ ಭಾಗವಹಿಸಿದ್ದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ದ.ಕ.ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಪೆರ್ಲ, ಜ್ಯೋತಿಪ್ರಕಾಶ್ ಪುಣಚ, ತಾರನಾಥ ಗಟ್ಟಿ ಕಾಪಿಕಾಡ್, ಲಕ್ಷ್ಮಣ ಕುಂದರ್, ಈಶ್ವರ ವಾರಣಾಶಿ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿದರು. ಮಂಗಳೂರು ವಿವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಗಣಪತಿ ಗೌಡ ವಂದಿಸಿದರು. ಜೊತೆ ಕಾರ್ಯದರ್ಶಿ ಗೋಪಾಲ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

 

‘ಅಭಿವೃದ್ಧಿ ಪತ್ರಿಕೋದ್ಯಮ ಎದುರಿಸುತ್ತಿರುವ ಸವಾಲುಗಳು’ ಎಂಬ ಬಗ್ಗೆ ಮಾಧ್ಯಮ ಅಕಾಡಮಿಯ ಸದಸ್ಯ ಗಂಗಾಧರ ಹಿರೇಗುತ್ತಿ, ‘ಮಾಧ್ಯಮ ರಂಗ-ಆಕರ್ಷಣೆ, ಭ್ರಮೆ ಮತ್ತು ಉದ್ಯೋಗವಕಾಶ’ ವಿಚಾರದ ಬಗ್ಗೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ರಾಂ ವಿಚಾರ ಮಂಡಿಸಿದರು. ಸುದ್ದಿಬಿಡುಗಡೆ ಪತ್ರಿಕಾ ಸಮೂಹದ ಸಂಪಾದಕ ಡಾ.ಯು.ಪಿ.ಶಿವಾನಂದ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು, ಪತ್ರಕರ್ತ ಪಿ.ಬಿ.ಹರೀಶ್ ರೈ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English