- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನವೀಕೃತ ಮಂಗಳಾ ಈಜುಕೊಳ ಉದ್ಘಾಟನೆ

Mangala swimming pool [1]ಮಂಗಳೂರು : ಲೇಡಿಹಿಲ್‌ನಲ್ಲಿರುವ ಮಂಗಳಾ ಈಜುಕೊಳದ ಆಧುನಿಕ ನೀರು ಶುದ್ಧೀಕರಣ ಸ್ಥಾವರ ಹಾಗೂ ನವೀಕೃತ ಈಜುಕೊಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣಕ್ಕೆ ನಿವೇಶನದ ಕೊರತೆ ಎದುರಾಗಿದ್ದು, ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ. ನಿವೇಶನ ಲಭ್ಯವಾದಕ್ಷಣ ಈಜುಕೊಳ ನಿರ್ಮಾಣ ಮಾಡಿ ತರಬೇತಿಯೊಂದಿಗೆ ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ನಡೆಸಲು ಚಿಂತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಮಂಗಳಾ ಈಜುಕೊಳ ಇದೀಗ ಹೈಟೆಕ್ ಆಗಿದ್ದು, ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆ. ವಿದ್ಯಾರ್ಥಿಗಳು ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದು ಈಜು ಕಲಿತು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದವರು ಹಾರೈಸಿದರು.

ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಮಂಗಳಾ ಈಜುಕೊಳವು ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ. ಈ ಈಜುಕೊಳವು ರಾಜ್ಯದಲ್ಲೇ ಅತ್ಯಾಧುನಿಕ ಸೌಲಭ್ಯ ಹೊಂದಿರುವುದು ಹೆಮ್ಮೆಯ ಸಂಗತಿ ಎಂದರು.

ವೇದಿಕೆಯಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್, ಪಾಲಿಕೆ ಮೇಯರ್ ಭಾಸ್ಕರ್ ಕೆ., ಉಪ ಮೇಯರ್ ಕೆ.ಮುಹಮ್ಮದ್, ಆಯುಕ್ತ ಮುಹಮ್ಮದ್ ನಝೀರ್, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯ ಅಧ್ಯಕ್ಷ ಟಿ.ಪ್ರವೀಣ್‌ಚಂದ್ರ ಆಳ್ವ, ತೆರಿಗೆ ನಿರ್ವಹಣೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಕೆ., ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ನವೀನ್ ಆರ್. ಡಿಸೋಜ, ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷೆ ಲತಾ ಸಾಲ್ಯಾನ್, ಪಾಲಿಕೆ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ, ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ಜಯಂತಿ ಆಚಾರ್, ಲ್ಯಾನ್ಸಿ ಲೋಟ್ ಪಿಂಟೊ, ಅಪ್ಪಿ, ವಿನಯ್‌ರಾಜ್, ಪ್ರಕಾಶ್ ಸಾಲ್ಯಾನ್, ಸಬಿತಾ ಮಿಸ್ಕಿತ್, ಕೇಶವ ಮರೋಳಿ, ಅಖಿಲಾ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

32 ವರ್ಷಗಳ ಇತಿಹಾಸ ಹೊಂದಿರುವ ಮಂಗಳ ಈಜುಕೊಳದಲ್ಲಿ ನೀರನ್ನು ಓರೆನ್ ಘಟಕದಲ್ಲಿ ಸಂಸ್ಕರಿಸುವ ನೂತನ ತಂತ್ರಜ್ಞಾನ ಪರಿಚಯಿಸಲಾಗಿದೆ. ಈ ನೂತನ ಘಟಕದಲ್ಲಿ ಸ್ವಯಂಚಾಲಿತಚಿಛಿಜ್ಛಿ ನೀರು ಶುದ್ಧೀಕರಣವಾಗಲಿದೆ. ಈ ಈಜುಕೊಳವು 3 ಅಡಿಯಿಂದ 16 ಅಡಿ ಆಳ ಹೊಂದಿದ್ದು, 25 ಲಕ್ಷ ಲೀಟರ್ ನೀರಿನ ಸಾಮರ್ಥ್ಯದಿಂದ ಕೂಡಿದೆ. ನಾಲ್ಕು ಪಂಪ್ ಮತ್ತು ನಾಲ್ಕು ಡ್ರಮ್ ಅಳವಡಿಸಿ ನೀರು ಶುದ್ಧೀಕರಣ ನಡೆಸಲಾಗುತ್ತದೆ. ಶುದ್ಧೀಕರಣಗೊಂಡ ನೀರು ಪುನಃ ಬರಲು ಈಜುಕೊಳದ ಒಳಗೆ ಎರಡೂ ಬದಿಗಳಲ್ಲಿ ಪೈಪ್ ಅಳವಡಿಸಲಾಗಿದೆ. ನೂತನ ತಂತ್ರಜ್ಞಾನದಿಂದ ಶುದ್ಧೀಕರಣವಾದ ನೀರು ಪ್ರಬಲ ರೋಗ ನಿರೋಧಕ ಶಕ್ತಿ ಹೊಂದಿರಲಿದೆ.