ತುಳುನಾಡ ರಕ್ಷಣಾ ವೇದಿಕೆ (ರಿ) ದಶ ಸಂಭ್ರಮ- ಮಾರ್ಚ್ 29,30,31 ತೌಳವ ಉಚ್ಚಯ

9:05 PM, Friday, March 15th, 2019
Share
1 Star2 Stars3 Stars4 Stars5 Stars
(No Ratings Yet)
Loading...

Tulu-Uchayaಮಂಗಳೂರು :  ತುಳುನಾಡ ರಕ್ಷಣಾ ವೇದಿಕೆಯ ದಶಮ ಸಂಭ್ರಮದ ಅಂಗವಾಗಿ ಮಾರ್ಚ್ 29,30,31 ರಂದು ತೌಳವ ಉಚ್ಚಯ (ವಿಶ್ವ ತುಳುವರ ಸಮ್ಮಿಲನ) ನಡೆಯಲಿದೆ.

ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ತುರವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ ಸಿರಾಜ್ ಅಡ್ಕರೆ ತುಳುನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ರಾಜಕಿಯೇತರ ಸಂಘಟನೆ ತುಳುನಾಡ ರಕ್ಷಣಾ ವೇದಿಕೆಯಾಗಿದೆ. ಜನಪರ ಹೋರಾಟಗಾರ ಯೋಗೀಶ ಶೆಟ್ಟಿ ಜಪ್ಪು ಇವರ ಸಮರ್ಥ ಸಾರಥ್ಯದಲ್ಲಿ 2009 ರಲ್ಲಿ ಸ್ಥಾಪನೆಗೊಂಡ ಸಂಘಟನೆ 2019 ಜನವರಿ ತಿಂಗಳಲ್ಲಿ ಯಶಸ್ವೀ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಗೈಯ್ಯುತ್ತಿದೆ. ತುಳುನಾಡ ರಕ್ಷಣಾ ವೇದಿಕೆಯ ದಶ ಸಂಭ್ರಮವನ್ನು ಅವಿಸ್ಮರಣೀಯಗೊಳಿಸಲು ವಿಶ್ವ ತೌಳವ ಉಚ್ಚಯ (ವಿಶ್ವ ತುಳುವರ ಸಮ್ಮಿಲನ) ಎಂಬ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು .

ಮೂರು ದಿನಗಳಲ್ಲಿ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬಹುಭಾಷಾ ಕವಿಗೋಷ್ಟಿ, ತುಳುನಾಡು ನಡೆದು ಬಂದುದರ ಬಗೆಗೆ ವಿಚಾರ ಗೋಷ್ಠಿಗಳು, ಜಾನಪದ ಸಾಂಸ್ಕೃತಿಕ ಪ್ರದರ್ಶನ, ಗುಡಿಕೈಗಾರಿಕೆ, ಕರಕುಶಲ, ಪುಸ್ತಕ ಪ್ರದರ್ಶನಗಳು, ತುಳುನಾಡ ದಿಬ್ಬಣ, ತುಳುನಾಡಿನ ಆಹಾರೋತ್ಸವ, ಜನಮೈತ್ರಿಸಂಗಮ, ದೇಹದಾಡ್ಯ ಪ್ರದರ್ಶನ, ತುಳುಹಾಸ್ಯ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ, ನೃತ್ಯ, ಕೋಸ್ಟಲ್ ವುಡ್ ಸಿನೇಮಾ ಪರ್ಬ(ರಂಗಭೂಮಿಯಿಂದ ಬೆಳ್ಳಿ ಪರದೆಯವರೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಚಿತ್ರ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು ಮತ್ತು ತಂತ್ರಜ್ಞರಿಗೆ ಗೌರವಿಸುವ ಕಾರ್ಯಕ್ರಮ) ಮಹಿಳಾ, ಯುವಜನ, ಮಕ್ಕಳ ಉತ್ಸವ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಹಾಗೂ ಸನ್ಮಾನ, ವಿವಿಧ ತೌಳವ ಪ್ರಶಸ್ತಿಗಳು (ತೌಳವ ರತ್ನ, ತೌಳವ ಶ್ರೀ, ತೌಳವ ಸಿರಿ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಚಾರಿತ್ರಿಕ ಕಾರ್ಯಕ್ರಮ ಯಶಸ್ವಿಗಾಗಿ ಭರದ ಸಿದ್ಧತೆ ನಡೆಯುತ್ತಿದೆ. ತುಳುನಾಡಿನ ಸಾಧಕರಾದ ಪ್ರಸ್ತುತ ವಿದೇಶ ರಾಜ್ಯದ ದುಬ್ಯಾಲ್ಲಿದ್ದು ಈ ಊರಿನ ಸಂಸ್ಕೃತಿ, ಭಾಷೆಗಾಗಿ ಶಕ್ತಿ ಮೀರಿ ದುಡಿಯುತ್ತಿರುವ ಯಶಸ್ವೀ ಉದ್ಯಮಿ ಡಾ. ಡೇವಿಡ್ ಫ್ರಾಂಕ್ ಫರ್ನಾಂಡೀಸ್ ಇವರನ್ನು ವಿಶ್ವ ತೌಳವ ಉಚ್ಚಯದ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಯು.ಎ.ಇ. ಘಟಕದ ಅಧ್ಯಕ್ಷರಾದ ಅಶೋಕ್ ಬೈಲೂರು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕ ಶ್ರೀ ಯಡ್ಯೂರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಶ್ರೀಮತಿ ಜಯಮಾಲಾ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಯು.ಟಿ ಖಾದರ್, ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲು, ಸಣ್ಣ ನೀರಾವರಿ ಸಚಿವರಾದ ಶ್ರೀ ಪುಟ್ಟರಾಜು, ಡಿ.ಕೆ.ಶಿವಕುಮಾರ್, ವೇದವ್ಯಾಸ ಕಾಮತ್ ಡಾ. ಭರತ್ ಶೆಟ್ಟಿ, ಬೊಜೇಗೌಡ, ಬಿ.ಎಮ್.ಫಾರುಕ್ ಹಾಗೂ ಎಲ್ಲಾ ಶಾಸಕರು ಮತ್ತು ಡಾ. ಬಿ.ಆರ್.ಶೆಟ್ಟಿ, ಹರೀಶ್ ಬಂಗೇರ, ಹರೀಶ್ ಶೇರಿಗಾರ್ ಮುಂತಾದ ಖ್ಯಾತ ಉದ್ಯಮಿಗಳು ಹಾಗೂ ತುಳು ವಿಧ್ವಾಂಸರು, ಖ್ಯಾತಕಲಾವಿದರು, ಜಾನಪದ ವಿಧ್ವಾಂಸರು, ಮೊದಲಾದವರನ್ನು ಆಹ್ವಾನಿಸಲು ತೀರ್ಮನಿಸಲಾಗಿದೆ
ಈ ಬಗ್ಗೆ ಸಮಗ್ರ ಚರ್ಚೆ ನಡೆಸಿ ಕಾರ್ಯಕ್ರಮಗಳ ರೂಪುರೇಷೆ ಸಿದ್ಧ ಪಡಿಸಲು ಸಾರ್ವಜನಿಕರ ಸಮಾಲೋಚನಾ ಸಭೆಯನ್ನು ಗಟ್ಟಿ ಸಮಾಜ ಭವನ ಕೊಲ್ಯ, ತೊಕ್ಕೊಟ್ಟುವಿನಲ್ಲಿ ದಿನಾಂಕ 14/03/2019 ರಂದು ಆಯೋಜಿಸಲಿದ್ದೀವೆ, ಆಸಕ್ತ ಪ್ರತಿನಿಧಿಗಳು, ಸಂಘಟನಾ ಪ್ರಮುಖರು, ಸಾರ್ವಜನಿಕರು ಈ ಕಾರ್ಯಕ್ಕೆ ಪ್ರೀತಿ ಪೂರ್ವಕವಾಗಿ ಆಮಂತ್ರಿಸುತ್ತಿದ್ದೇವೆ. ಪತ್ರಿಕಾ, ದೃಶ್ಯ ಮಾಧ್ಯಮದ ನೀವು ವಿಶ್ವ ತೌಳವ ಉಚ್ಚಯ ಕಾರ್ಯಕ್ರಮದ ಯಶಸ್ವಿಗೆ ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ಅಪೇಕ್ಷೆ ಪಡುತ್ತೇವೆ ಎಂದರು.

ಇದೇ ಸಂಧರ್ಭದಲ್ಲಿ ಉಳ್ಳಾಲ ತಾಲೂಕು ವಿಚಾರದಲ್ಲಿ ಮಾತನಾಡಿದ ಅವರು, ಉಳ್ಳಾಲ ತಾಲೂಕು ರಚನೆ ಈ ಕ್ಷೇತ್ರದ ಜನರಿಗೆ ಸಂತಸ ತಂದಿದೆ, ಇದೊಂದು ಮಹತ್ವಪೂರ್ಣ ಕಾರ್ಯ, ಮಂಗಳೂರಿನ ವಾಹನ ದಟ್ಟಣೆಗೂ ಇದು ಪರಿಹಾರವಾಗಿಲಿದೆ , ಯಾವುದೇ ಹೋರಾಟಕ್ಕೆ ಆಸ್ಪದ ಕೊಡದೆ ತಾಲೂಕು ಘೋಷಿಸಿದ ಕರ್ನಾಟಕ ಸರಕಾರಕ್ಕೆ ಹಾಗೂ ಇದಕ್ಕಾಗಿ ನೇರ ಕಾರಣರಾದ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಈ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಯು.ಟಿ. ಖಾದರ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ, ಅದೇ ಇಲ್ಲಿನ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಮತ್ತು ತುಳು ಭಾಷೆಯಲ್ಲೇ ಕಛೇರಿಯ ವ್ಯವಹಾರ ನಡೆಯಬೇಕೆಂದು ಆಗ್ರಹಿಸಿದರು.

ಇದೇ ಸಂಧರ್ಬದಲ್ಲಿ ಮಾತನಾಡಿದ ಅವರು ಪಂಚ ದ್ರಾವಿಡ ಭಾಷಡಗಳಲ್ಲಿ ಒಂದಾದ ತುಳು ಭಾಷೆನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯೆಂದು ಘೋಷಿಸಬೇಕು ಹಾಗೂ ಸಂವಿಧಾನದ ಎಂಟನೇ ಪರಿಛ್ಛೇದನಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕೆಂದು ಹಾಗೂ ಉಳ್ಳಾಲ ತಾಲೂಕಿಗೊಂದು ಮಾದ್ಯಮ ಭವನ ನಿರ್ಮಾಣ ಮಾಡಲು ಅನುದಾನ ಬಿಡುಗಡೆಗೊಳಿಸಬೇಕೆಂದು ರಾಜ್ಯ ಸರಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗ್ರಹಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ತುರವೇ ಜಿಲ್ಲಾಧ್ಯಕ್ಷರಾದ ಹಮೀದ್ ಹಸನ್ ಮಾಡೂರು, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್ ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English