ಇದು ಕರಾವಳಿ “ಪೊಲಿ’ಟಿಕ್ಸ್”!

1:06 PM, Tuesday, November 13th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Karavali Politicsಮಂಗಳೂರು :2013ರಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಮತ್ತು 2014ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈಗಾಗಲೆ ಮಂಗಳೂರಿನಲ್ಲಿ ತನ್ನ ಚುನಾವಣಾ ಕಸರತ್ತು ಆರಂಭಿಸಿದೆ. ಅಕ್ಟೋಬರ್ 18ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳೂರಿಗೆ ಆಗಮಿಸಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವಂತೆ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರಕಾರವನ್ನು ಕಿತ್ತೊಗೆಯುವಂತೆ ಕರೆ ನೀಡಿದ್ದಾರೆ. ಸೋನಿಯಾರ ಮಂಗಳೂರು ಭೇಟಿಯ ಸಂಪೂರ್ಣ ಹೊಣೆ ಹೊತ್ತವರು ಬಿ. ಜನಾರ್ಧನ ಪೂಜಾರಿ. ಹಿಂದೊಮ್ಮೆ ಸೋನಿಯಾ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದಾಗ ಅವರ ಪರವಾಗಿ ಕುದ್ರೋಳಿ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ ಸುದ್ದಿಯಾಗಿದ್ದ ಪೂಜಾರಿ, ಮೊನ್ನೆ ಸೋನಿಯಾ ಮಂಗಳೂರಿಗೆ ಬಂದಾಗ ಕುದ್ರೋಳಿ ದೇವಸ್ಥಾನಕ್ಕೆ ಕರೆದೊಯ್ಯಲು ಮರೆಯಲಿಲ್ಲ. ಆ ಮೂಲಕ ಮುಂದಿನ ಚುನಾವಣೆಯಲ್ಲಿ (ವಿಧಾನ ಸಭೆ ಅಥವಾ ಲೋಕಸಭೆ) ತಮಗೊಂದು ಟಿಕೆಟ್ ಕೊಡಿ ಎಂದು ಆಗ್ರಹಿಸಿದ್ದಾರೆ. ಈ ಚುನಾವಣೆಯಲ್ಲಿ ಪೂಜಾರಿ ಗೆದ್ದರೆ ರಾಜಕೀಯವಾಗಿ ಅವರು ಎತ್ತರಕ್ಕೆ ಏರಲಿದ್ದಾರೆ. ಸೋತರೆ ರಾಜಕೀಯವಾಗಿ ಅವರು ಫಿನಿಶ್ ಆದಂತೆ.

* ಜೆಡಿಎಸ್ ಎಂಟ್ರಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ಗೆ ಬಲವೇನೂ ಇಲ್ಲ. ಇದೀಗ ಮಾಜಿ ಸಚಿವ ನಾಗರಾಜ ಶೆಟ್ಟಿ, ಉದ್ಯಮಿ ಸದಾನಂದ ಶೆಟ್ಟಿ ಮತ್ತಿತರರು ಜೆಡಿಎಸ್ ಸೇರಿದ್ದಾರೆ. ಕಾಂಗ್ರೆಸ್, ಬಿಜೆಪಿಯ ಮತ್ತಷ್ಟು ಅತೃಪ್ತರನ್ನು ಕರೆತರಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತು ಆರಂಭಿಸುತ್ತಿದ್ದಾರೆ. ಅತ್ತ ಶಕುಂತಳಾ ಶೆಟ್ಟಿ ಇತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿಯ ಹಿಂದೆ ಬಿದ್ದಿದ್ದಾರೆ. ಆದರೆ ಈ ಮಾಜಿ ಶಾಸಕರಿಬ್ಬರೂ ಕೂಡ ಏನು ಮಾಡಬೇಕು ಎಂದು ತೋಚದೆ ಕಾದು ನೋಡುತ್ತಿದ್ದಾರೆ.

* ಬಿಜೆಪಿ ಮೌನ : ಇವೆಲ್ಲದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮೌನ ವಹಿಸಿದೆ. ಅದರ ಆರ್ಭಟ ಏನೇನೂ ಕಾಣುತ್ತಿಲ್ಲ. ದಕ್ಷಿಣ ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದ ಮೊತ್ತ ಮೊದಲ ಬಿಜೆಪಿ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಧನಂಜಯ ಕುಮಾರ್ರನ್ನು ಬಿಜೆಪಿ ಉಚ್ಛಾಟಿಸಿದೆ. ಧನಂಜಯ ಕುಮಾರ್ಗೆ ಜಿಲ್ಲೆಯಲ್ಲಿ ವೈಯಕ್ತಿಕ ವರ್ಛಸ್ಸಿಲ್ಲ. ಜಾತಿ ಬಲವೂ ಇಲ್ಲ. ಸಂಘಟನಾ (ಸಂಘ ಪರಿವಾರ) ಬಲದಿಂದಲೇ ಮೇಲೆ ಬಂದವರು. ಇದೀಗ ಆ ಸಂಘಟನೆಯ ಮುಖಂಡರನ್ನೇ ಧನಂಜಯ ಕುಮಾರ್ ದೂರುತ್ತಿದ್ದಾರೆ. ಹಾಗೇ ಬಿಜೆಪಿಯಿಂದ ದೂರವಾಗಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ಗೆ ಬಲ ತುಂಬಲು ನಿರ್ಧರಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪಕ್ಷದ ಮೂಲಕ ರಾಜಕೀಯ ಮಾಡಲು ಧನಂಜಯ ಕುಮಾರ್ ನಿರ್ಧರಿಸಿದಂತಿದೆ.

ಅತ್ತ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಯಿಂದ ದೂರವಾಗಿದೆ. ಇತ್ತ ಶಕುಂತಳಾ ಶೆಟ್ಟಿ ಕೂಡ ಒಮ್ಮೆ ಕಾಂಗ್ರೆಸ್, ಇನ್ನೊಮ್ಮೆ ಜೆಡಿಎಸ್, ಮತ್ತೊಮ್ಮೆ ಬಿಜೆಪಿಯ ಬಾಗಿಲು ಬಡಿಯುತ್ತಿದ್ದಾರೆ.

ಮಾಜಿ ಶಾಸಕ ರಾಮಭಟ್ರು ತನ್ನ ಶಿಷ್ಯ ಸದಾನಂದ ಗೌಡ ಪುತ್ತೂರಿನಿಂದ ಸ್ಪರ್ಧಿಸುವುದಾದರೆ ಸಪೋರ್ಟ್ ಮಾಡುವೆ ಎನ್ನುತ್ತಾರೆ. ಇತ್ತ ಅದೇ ಸದಾನಂದ ಗೌಡರು ಶಕುಂತಳಾ ಶೆಟ್ಟಿಗೆ ಬಿಜೆಪಿ ಬಾಗಿಲು ಬಂದ್ ಎನ್ನುತ್ತಾರೆ. ಅಂದರೆ, ಈ ಮಾತನ್ನು ಸದಾನಂದ ಗೌಡ ಹೇಳಿದ್ದಾರೆ ಎನ್ನುವುದಕ್ಕಿಂತಲೂ ರಾಮಭಟ್ ಹಾಗೇ ಹೇಳಿಸಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸದು.

ಒಟ್ಟಿನಲ್ಲಿ ಶಕುಂತಳಾ ಶೆಟ್ಟಿ ಯಾವ ರಾಜಕೀಯ ಪಕ್ಷ ಸೇರಬೇಕು ಎಂದು ತಿಳಿಯಲಾಗದೆ ಗೊಂದಲದಲ್ಲಿದ್ದಾರೆ. ಅಂತಿಮವಾಗಿ ಅವರು ಯಡಿಯೂರಪ್ಪರ ಕೆಜೆಪಿ ಸೇರಿದರೂ ಅಚ್ಚರಿಯಿಲ್ಲ.

ಅಂದಹಾಗೆ, ಯಡಿಯೂರಪ್ಪರಿಗೆ ನೆರಳಾಗಿ ನಿಂತಿರುವ ಪುತ್ತೂರಿನವರೇ ಆದ ಶೋಭಾ ಕರಂದ್ಲಾಜೆ ಅವರು ಶಕುಂತಳಾ ಶೆಟ್ಟಿಗೆ ಎಷ್ಟರ ಮಟ್ಟಿಗೆ ಬೆಲೆ ನೀಡಿಯಾರು ಎಂದು ಕಾದು ನೋಡಬೇಕಾಗಿದೆ.

ಈ ಎಲ್ಲ ರಾಜಕೀಯ ದೊಂಬರಾಟದಿಂದ ಬಿಜೆಪಿ ದ.ಕ.ಜಿಲ್ಲೆಯಲ್ಲಿ ಸಮಾವೇಶ ನಡೆಸಲು ಹಿಂದೇಟು ಹಾಕುತ್ತಿದೆ. ಡಿಸೆಂಬರ್ ಅಥವಾ ಜನವರಿ ವೇಳೆ ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ಚುನಾವಣಾ ತಾಲೀಮು ನಡೆಸಿದರೆ ಅಚ್ಚರಿಯಿಲ್ಲ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English