- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ 100 ವೆಂಟಿಲೇಟರ್

modi-trump [1]ವಾಷಿಂಗ್ಟನ್ :  ಮುಂದಿನ ವಾರ ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳನ್ನು ರವಾನಿಸಲಾಗುವುದು, ಕಾನ್ಫೆರೆನ್ಸ್ ಕಾಲ್ ನಲ್ಲಿ ಡೊನಾಲ್ಡ್ ಟ್ರಂಪ್ ಮೋದಿಗೆ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಶ್ವೇತ ಭವನ ಹೇಳಿದೆ.

ಮಂಗಳವಾರ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಜಿ-7 ಶೃಂಗಸಭೆ, ಕೋವಿಡ್-19 ನಿರ್ವಹಣೆ, ಪ್ರಾದೇಶಿಕ ಭದ್ರತೆ ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ವಾರ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳ ಕೊಡುಗೆಯನ್ನು ಡೊನಾಲ್ಡ್ ಟ್ರಂಪ್ ಸಂತೋಷದಿಂದ ಘೋಷಿಸಿದ್ದಾರೆ ಎಂದು ವೈಟ್ ಹೌಸ್ ತಿಳಿಸಿದೆ.

ಕೋವಿಡ್-19 ಪೀಡಿತ ರಾಷ್ಟ್ರಗಳ ಪೈಕಿಯಲ್ಲಿ ಅಮೆರಿಕಾ, ಬ್ರೆಜಿಲ್, ರಷ್ಯಾ, ಇಂಗ್ಲೆಡ್ , ಸ್ಪೇನ್ ಮತ್ತು ಇಟಲಿ ನಂತರ ಇದೀಗ ಭಾರತ ಏಳನೇ ಸ್ಥಾನದಲ್ಲಿದೆ. ದೇಶದಲ್ಲಿ ಕೋವಿಡ್-19 ಸೋಂಕಿನಿಂದ 5,815 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ ಎರಡು ಲಕ್ಷಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ವೆಂಟಿಲೇಟರ್ ಪ್ರಮುಖ ವೈದ್ಯಕೀಯ ಸಲಕರಣೆಯಾಗಿದೆ. ಕೋವಿಡ್ 19ನಿಂದಾಗಿ ತೀವ್ರ ರೀತಿಯ ಅನಾರೋಗ್ಯಕ್ಕೊಳಾಗಾದ ಪ್ರತಿ 5 ಜನರ ಪೈಕಿ ಒಬ್ಬರಿಗೆ ಉಸಿರಾಟದ ಸಮಸ್ಯೆ ಕಂಡಬರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕಾಯಿಲೆಯಿಂದ ಶ್ವಾಸಕೋಶಕ್ಕೆ ತೊಂದರೆಯಾದಾಗ ಉಸಿರಾಟ ಪ್ರಕ್ರಿಯೆಗೆ ವೆಂಟಿಲೇಟರ್ ನೆರವು ನೀಡಲಿವೆ.

ಟ್ರಂಪ್ ಜೊತೆಗಿನ ಮಾತುಕತೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ, ಮತ್ತಿತರ ವಿಚಾರಗಳ ಬಗ್ಗೆ ಮಾತುಕತೆ ನಡೆಸಿರುವುದಾಗಿ ಮಂಗಳವಾರ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿದ್ದರು.

ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದದ್ದು ಹಾಗೂ ಭಾರತ ಹಾಗೂ ಅಮೆರಿಕಾ ನಡುವಣ ಒಪ್ಪಂದಗಳನ್ನು ಕೂಡಾ ಟ್ರಂಪ್ ನೆನಪು ಮಾಡಿಕೊಂಡಿರುವುದಾಗಿ ಪ್ರಧಾನಮಂತ್ರಿ ಕಾರ್ಯಾಲಯದ ಟ್ವೀಟರ್ ನಲ್ಲಿ ಹಾಕಲಾಗಿದೆ.