- KANNADA MEGA MEDIA NEWS :: News Coverage From Mangalore and Major Cities of India and world wide - http://kannada.megamedianews.com -

ಕೋವಿಡ್ -19 ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದ ಮುಸ್ಲಿಮರು

eid [1]ಮಂಗಳೂರು : ಕೋವಿಡ್ -19 ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲು ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ಅಂತರ ಕಾಪಾಡುವುದರೊಂದಿಗೆ ಜುಲೈ 31 ರಂದು ಮಸೀದಿಗಳಲ್ಲಿ ಸಾಮೂಹಿಕವಾಗಿ ಮುಸ್ಲಿಮರು ನಮಾಝ್ ನಿರ್ವಹಿಸಿದರು.

ಈದ್ಗಾದಲ್ಲಿ ಸಾಮೂಹಿಕ ನಮಾಝ್ ಮತ್ತು ಈದ್ ಖುತ್ಬಾಕ್ಕೆ ನಿರ್ಬಂಧ ವಿಧಿಸಲಾದ ಕಾರಣ ಇದೇ ಮೊದಲ ಬಾರಿಗೆ ಮಂಗಳೂರು ಸಹಿತ ಜಿಲ್ಲೆಯ ಯಾವುದೇ ಈದ್ಗಾಗಳಲ್ಲಿ ನಮಾಝ್, ಈದ್ ಖುತ್ಬಾ ನಡೆಯಲಿಲ್ಲ. ಬಹುತೇಕ ಮಸೀದಿಗಳಲ್ಲಿ ತಲಾ 50 ಮಂದಿಯಂತೆ ಸರದಿ ಸಾಲಿನಲ್ಲಿ ನಮಾಝ್ ನಿರ್ವಹಿಸಿದರು. 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಮಸೀದಿಗೆ ಪ್ರವೇಶಿಸಲು ಅವಕಾಶ ಇರಲಿಲ್ಲ.

ಮಸೀದಿ ಹೊರತುಪಡಿಸಿ ಇತರ ಯಾವುದೇ ಸ್ಥಳಗಳಲ್ಲಿ ಅಂದರೆ ಸಭಾಂಗಣ, ಸಮುದಾಯ ಭವನ, ಶಾದಿಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಕೂಡ ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ವಿಧಿಸಲಾದ ನಿರ್ಬಂಧವನ್ನು ಪಾಲಿಸಲಾಯಿತು.

ಪ್ರತಿಯೊಬ್ಬರೂ ಮಾಸ್ಕ್ ಧರಿಸಿದ್ದರು. ಕೆಲವು ಮಸೀದಿಗಳಲ್ಲಿ ಪ್ರವೇಶಿಸುವ ಮುನ್ನ ದೇಹದ ತಾಪಮಾನ ತಪಾಸಣೆ ಮಾಡಲಾಯಿತು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿದರು. ನಮಾಝ್ ನಿರ್ವಹಿಸಲು ಮನೆಯಿಂದಲೇ ಮುಸಲ್ಲಾವನ್ನು ಕೊಂಡೊಯ್ದಿದ್ದರು. ಹಸ್ತಲಾಘವ ಅಥವಾ ಆಲಿಂಗನಕ್ಕೂ ಅವಕಾಶವಿರಲಿಲ್ಲ.

ಮಂಗಳೂರಿನ ಬಾವುಟ ಗುಡ್ಡೆ ಈದ್ಗಾ ಮಸೀದಿ ಯಲ್ಲಿ ಈ ಬಾರಿ ಸಾರ್ವಜನಿಕ ಪ್ರಾರ್ಥನೆಗೆ ಸರಕಾರದ ನಿರ್ಬಂಧದ ಮೇರೆಗೆ ನಮಾಝ್ ಇರಲಿಲ್ಲ.  ಕುದ್ರೋಳಿಯ ನಡುಪಳ್ಳಿಯಲ್ಲಿ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಮುಸ್ಲಿಂ ಬಾಂಧವರು ನಮಾಝ್ ನಿರ್ವಹಿಸಿದರು.