ಸೈನ್ಸ್ ಆನ್ಸರ್ ಭೂಮಿಗೆ ಪ್ರಳಯ ಬರೋದೆ ಇಲ್ಲ !

5:21 PM, Monday, December 10th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Doomsdayಮಂಗಳೂರು :ಬಹಳಷ್ಟು ಮಂದಿ ಕಾಲಜ್ಞಾನಿಗಳು, ಕಣಿ ಜ್ಯೋತಿಷಿಗಳು ಹಾಗೂ ಪೊಳ್ಳು ವಿಜ್ಞಾನಿಗಳು ಈ ವರ್ಷದ ಡಿಸೆಂಬರ್ 21ರಂದು ಭೂಮಿ ಪ್ರಳಯಕ್ಕೆ ಆಹುತಿಯಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಮೆಸೊ ಅಮೆರಿಕನ್ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ನ 5125 ವರ್ಷ ಚಕ್ರವು ಡಿಸೆಂಬರ್ 21 ರಂದು ಕೊನೆಯಾಗಲಿರುವುದೇ ಈ ವದಂತಿಗೆ ಕಾರಣ. ಪ್ರಳಯದ ಕುರಿತಾಗಿ ಭವಿಷ್ಯ ನುಡಿಯುವವರು ಕಪ್ಪುರಂಧ್ರ, ಕ್ಷುದ್ರಗ್ರಹ, ಧೂಮಕೇತು ಅಥವಾ ಅರಿವಿಗೆ ಬರದ ವಿಶ್ವದ ಸಾಧ್ಯತೆಗಳೊಂದಿಗೆ ಭೂಮಿಯು ಘರ್ಷಣೆಗೊಳಪಡುವುದರಿಂದಾಗಿ ಈ ವಿನಾಶ ಸಂಭವಿಸಲಿದೆ ಎಂದು ವಾದಿಸುತ್ತಾರೆ.

ಬೃಹತ್ ನಕ್ಷತ್ರಗಳ ಗರ್ಭವು ಸೂರ್ಯನ ದ್ರವ್ಯರಾಶಿಗಿಂತ ಐದು ಪಟ್ಟು ಹೆಚ್ಚುತ್ತಾ ಹೋದಂತೆ ಕೊನೆಯಲ್ಲಿ ಕಪ್ಪುರಂಧ್ರಗಳಾಗಿ ಬದಲಾಗುತ್ತವೆ. ಇವುಗಳ ವ್ಯಾಸದ ಅಳತೆಯು 10 ಕಿ.ಮೀ.ನಷ್ಟಿದ್ದು, ಸಾಂದ್ರತೆಯು ಸುಮಾರು 50 ಬಿಲಿಯನ್ ಟನ್ಸ್/ಕ್ಯುಬಿಕ್ ನಷ್ಟಿರುತ್ತದೆ. ಈ ಕಪ್ಪುರಂಧ್ರಗಳು ಸುತ್ತಲಿನ ನಕ್ಷತ್ರ, ಅನಿಲ, ಧೂಳು ಹಾಗೂ ಅದರ ಗುರುತ್ವಾಕರ್ಷಣಾ ವಲಯದಲ್ಲಿ ಬರುವ ಯಾವುದನ್ನೂ ಬಿಡದೆ ಎಲ್ಲವನ್ನೂ ನುಂಗಿಬಿಡುತ್ತದೆ.

ಕಪ್ಪುರಂಧ್ರವು ಸೂರ್ಯನೊಂದಿಗೆ ಘರ್ಷಣೆಗೊಳಪಟ್ಟರೆ ಅಥವಾ ಅದು ಸೂರ್ಯನ ಸಮೀಪ ಹಾದು ಹೋದರೂ ಸಾಕು ಅದು ಭೂಮಿಯನ್ನೂ ಒಳಗೊಂಡಂತೆ ಇಡೀ ಸೌರಮಂಡಲವನ್ನೇ ನುಂಗಿಹಾಕುವುದಂತೂ ಖಂಡಿತ. ಸೂರ್ಯನು ನಮ್ಮ ಗ್ಯಾಲಕ್ಸಿ ಕ್ಷೀರಪಥದಲ್ಲಿ ನೆಲೆಗೊಂಡಿದ್ದಾನೆ. ಸೂರ್ಯನಿಗೆ ಅತೀ ಹತ್ತಿರದಲ್ಲಿರುವ ಕಪ್ಪುರಂಧ್ರ ಕ್ಷೀರಪಥ ಗ್ಯಾಲಕ್ಸಿಯ ಕೇಂದ್ರದಲ್ಲಿದೆ. ಸೂರ್ಯನಿಗೂ ಮತ್ತು ಈ ಕಪ್ಪು ರಂಧ್ರಕ್ಕೂ ಇರುವ ದೂರ ಸುಮಾರು 28,000 ಜ್ಯೋತಿರ್ ವರ್ಷಗಳು! (ಒಂದು ಜ್ಯೋತಿರ್ವರ್ಷವೆಂದರೆ ಸುಮಾರು 9500 ಬಿಲಿಯನ್ ಕಿ.ಮೀ.) ಹೀಗಾಗಿ ಕಪ್ಪುರಂಧ್ರ ಸೂರ್ಯನಿಗೆ ಡಿಕ್ಕಿಹೊಡೆಯುವ ಸಾಧ್ಯತೆಗಳಂತೂ ಇಲ್ಲವೇ ಇಲ್ಲ.

ಕ್ಷುದ್ರಗ್ರಹಗಳು, ಧೂಮಕೇತುಗಳು ಅಥವಾ ಇತರ ಯಾವುದೇ ಆಕಾಶಕಾಯಗಳು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಕೂಡ ಕಡಿಮೆ ಇದೆ. ಅಂತರರಾಷ್ಟ್ರೀಯ ವ್ಯೋಮಯಾನಶಾಸ್ತ್ರದ ಅಧ್ಯಯನ ಕೇಂದ್ರ ಹಾಗೂ ಇತರ ವೈಜ್ಞಾನಿಕ ಸಂಘಟನೆಗಳ ಬೆಂಬಲದೊಂದಿಗೆ ವಿಜ್ಞಾನಿಗಳು ವಿಶ್ವದಾದ್ಯಂತ ನಡೆಸಿದ ಅಧ್ಯಯನದ ಪ್ರಕಾರ ಭೂಗ್ರಹಕ್ಕೆ ಸನಿಹವಿರುವ ಆಕಾಶಕಾಯಗಳು ತೀರಾ ಸಣ್ಣದಾಗಿದ್ದು ಅವೇನೂ ಭೂಮಿಗೆ ಅಪಾಯಕಾರಿಯಾಗಿಲ್ಲ.

ದೊಡ್ಡ ಗಾತ್ರದ ಆಕಾಶಕಾಯಗಳು ಭೂಮಿಗೆ ಢಿಕ್ಕಿ ಹೊಡೆಯುವ ಸಾಧ್ಯತೆ ವಿರಳವೆನಿಸಿದ್ದರೂ, ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ. 6 ಕಿ.ಮೀ.ಗಿಂತ ಅಧಿಕ ವ್ಯಾಸವನ್ನು ಹೊಂದಿರುವ ಆಕಾಶಕಾಯಗಳೇನಾದರೂ ಭೂಮಿಗೆ ಢಿಕ್ಕಿ ಹೊಡೆದರೆ, ಅದು ಮಹಾ ದುರಂತದಲ್ಲಿ ಕೊನೆಗೊಳ್ಳಬಹುದು. ಆದರೆ ಅದು 100 ಮಿಲಿಯನ್ ವರ್ಷಗಳಿಗೊಮ್ಮೆ ಘಟಿಸಬಹುದಷ್ಟೆ. 1 ರಿಂದ 6 ಕಿ.ಮೀ. ವ್ಯಾಸವನ್ನು ಹೊಂದಿರುವ ಆಕಾಶಕಾಯಗಳು ಸಾಮಾನ್ಯವಾಗಿ 100 ಮಿಲಿಯನ್ ವರ್ಷಕ್ಕೊಮ್ಮೆ ಭೂಮಿಗೆ ಢಿಕ್ಕಿ ಹೊಡೆಯುತ್ತವೆ. ಅದರಿಂದಲೂ ಭೂಮಿಗೆ ತೀವ್ರ ಹಾನಿಯುಂಟಾಗಬಹುದು. ಸುಮಾರು 300 ಮೀಟರ್ ವ್ಯಾಸವನ್ನು ಹೊಂದಿರುವ ಆಕಾಶಕಾಯಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆ 10,000 ವರ್ಷಗಳಿಗೊಮ್ಮೆ. 50 ಮೀಟರ್ ಗಳಷ್ಟು ಅಥವಾ ಅದಕ್ಕಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಆಕಾಶಕಾಯಗಳು ಭೂವಲಯವನ್ನು ಪ್ರವೇಶಿಸುವುದಿಲ್ಲ. ಆ ಸಾಧ್ಯತೆ ಕೂಡ 100 ವರ್ಷಕ್ಕೊಮ್ಮೆ ಎನ್ನಬಹುದು.

ದೊಡ್ಡ ಗಾತ್ರದ ಆಕಾಶಕಾಯಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳು ತೀರಾ ಕಡಿಮೆಯಿದ್ದರೂ, ಅದರಿಂದ ಎದುರಾಗಲಿರುವ ಹಾನಿಯನ್ನು ಮನಗಂಡು ಇಂತಹ 1 ಕಿ.ಮೀ.ಗಿಂತ ಅಧಿಕ ವ್ಯಾಸವನ್ನು ಹೊಂದಿರುವ ಭೂಮಿಗೆ ಸನಿಹವಿರುವ ಕಾಯಗಳ ಹುಟ್ಟು, ಗಾತ್ರ ಹಾಗೂ ಚಲನಾಪಥದ ಜಾಡು ಹಿಡಿಯುವ ಸಲುವಾಗಿ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಒಟ್ಟು 1100ರಷ್ಟಿರುವ ಇಂತಹ ಆಕಾಶಕಾಯಗಳಲ್ಲಿ ಶೇಕಡ 80ರಷ್ಟರ ವಿಸ್ತೃತ ಸ್ವರೂಪವನ್ನು ಈಗಾಗಲೇ ಸಂಪೂರ್ಣವಾಗಿ ಗ್ರಹಿಸಲಾಗಿದೆ. ಇನ್ನುಳಿದ ಶೇ. 20ರಷ್ಟರ ಚರ್ಯೆಯನ್ನು ಇನ್ನೆರಡು ವರ್ಷಗಳಲ್ಲಿ ಅರಿತುಕೊಳ್ಳಬಹುದು. 140 ಮೀ.ನಿಂದ 1 ಕಿ.ಮೀ. ವ್ಯಾಸವನ್ನು ಹೊಂದಿರುವ ಆಕಾಶಕಾಯಗಳು ಭೂಮಿಗೆ ಢಿಕ್ಕಿ ಹೊಡೆಯುವುದರಿಂದ ಭೂಮಿಗೆ ಸ್ವಲ್ಪ ಮಟ್ಟಿನ ಹಾನಿಯುಂಟಾಗುತ್ತದೆ. ಆದ್ದರಿಂದ ಇವುಗಳ ಸ್ವರೂಪದ ಅಧ್ಯಯನವೂ ನಡೆಯುತ್ತಿದ್ದು 2020ರ ಒಳಗಾಗಿ ಇದು ಸಂಪೂರ್ಣಗೊಳ್ಳುವ ಸಾಧ್ಯತೆಯಿದೆ.

ಜೊತೆಗೆ, ಭೂಮಿಗೆ ಹತ್ತಿರವಿರುವ ಆಕಾಶಕಾಯಗಳ ಅಪ್ಪಳಿಸುವಿಕೆಯಿಂದ ಭೂಗ್ರಹವನ್ನು ರಕ್ಷಿಸಲು ಸರಿಯಾದ ವೈಜ್ಞಾನಿಕ ವಿಧಾನವನ್ನು ಕಂಡುಕೊಳ್ಳುವ ಸಲುವಾಗಿ ಖಗೋಳ ವಿಜ್ಞಾನಿಗಳು ಸಮಗ್ರ ಅಧ್ಯಯನವನ್ನೂ ಕೈಗೊಂಡಿದ್ದಾರೆ. ಒಂದೋ ಇಂತಹ ಆಕಾಶಕಾಯಗಳ ಚಲನಾಪಥವನ್ನು ಸ್ವಲ್ಪ ವ್ಯತ್ಯಯಗೊಳಿಸುವುದರಿಂದ ಅಥವಾ ಅವು ಭೂಮಿಗೆ ತೀರಾ ಹತ್ತಿರ ಸಮೀಪಿಸುತ್ತಿದ್ದಂತೆ ಪರಮಾಣು, ಚಲನಾಶಾಸ್ತ್ರ ಅಥವಾ ಇನ್ನಾವುದಾದರೂ ವಿಧಾನಗಳ ಮೂಲಕ ಅವುಗಳನ್ನು ಧ್ವಂಸಗೊಳಿಸುವ ಮೂಲಕ ಅಪಾಯವನ್ನು ತಪ್ಪಿಸುವ ಪ್ರಯತ್ನಗಳು ನಡೆದಿವೆ.

ಮನುಷ್ಯನಿಂದ ತಡೆಯಲು ಸಾಧ್ಯವೇ ಇಲ್ಲದಂತಹ ದುರಂತವೆಂದರೆ ಅದು ಸೂರ್ಯನ ಮರಣ. ಸೂರ್ಯ ತನ್ನಲ್ಲಿರುವ ಇಂಧನವೆಲ್ಲ ಉರಿಸಿದ ನಂತರ ನಶಿಸುತ್ತಾನೆ. ಗಹನವಾದ ವೀಕ್ಷಣೆಯನ್ನು ಆಧರಿಸಿ ನಡೆಸಿದ ಲೆಕ್ಕಾಚಾರದನ್ವಯ ಸೂರ್ಯನು ಮುಂದಿನ 5000 ಮಿಲಿಯನ್ ವರ್ಷಗಳವರೆಗಾದರೂ ತನ್ನ ಪ್ರಖರತೆಯನ್ನು ಉಳಿಸಿಕೊಳ್ಳುತ್ತಾನೆ. ಅಂದರೆ ಮುಂದಿನ ಅತೀ ದೀರ್ಘ ಕಾಲದವರೆಗೆ ನಮ್ಮ ಸೌರ ವ್ಯವಸ್ಥೆ ಅಥವಾ ಭೂಮಿಗೆ ಪ್ರಳಯದಂತಹ ಘೋರ ವಿಪತ್ತು ಎದುರಾಗುವ ಸಾಧ್ಯತೆ ಹೆಚ್ಚೂ ಕಡಿಮೆ ಇಲ್ಲವೇ ಇಲ್ಲ ಎನ್ನಬಹುದು. ಸರಿಯಾದ ವೈಜ್ಞಾನಿಕ ಸಮರ್ಥನೆಗಳಿಲ್ಲದ ಇಂತಹ ಅಸಂಬದ್ಧ ಕಲ್ಪನೆಗಳನ್ನು ಹಾಗೂ ಬೇಜವಾಬ್ದಾರಿಯುತ ವಿವರಣೆಗಳನ್ನು ಬಹಳಷ್ಟು ಜನ ನಂಬುತ್ತಿರುವುದು ನಿಜಕ್ಕೂ ದುರಂತವೇ ಸರಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English