ಮಂಗಳೂರು : ನವ ಮಂಗಳೂರು ಬಂದರು ಮಂಡಳಿ (ಎನ್ಎಂಪಿಟಿ) 2012-13ನೇ ಸಾಲಿನಲ್ಲಿ ಅತ್ಯಧಿಕ ಸರಕು ನಿರ್ವಹಣೆ ಮಾಡುವ ಮೂಲಕ ಎನ್‌ಎಂಪಿಟಿಯಲ್ಲಿ ಇದುವರೆಗಿನ ಅತಿ ಹೆಚ್ಚು ಸರಕು ನಿರ್ವಹಣೆ ಮಾಡಿದ ದಾಖಲೆ ಸ್ಥಾಪಿಸಿದೆ ಎಂದು ಬಂದರು ಮಂಡಳಿ ಅಧ್ಯಕ್ಷ ತಮಿಳ್‌ವಾನನ್ ತಿಳಿಸಿದರು.
ಬಂದರು ಮಂಡಳಿ ಆಡಳಿತ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ 32.94 ಮಿಲಿಯನ್ ಟನ್ ಸರಕು ನಿರ್ವಹಣೆ ಮಾಡಲಾಗಿದ್ದು, 2008 – 09ನೇ ಸಾಲಿನಲ್ಲಿ 36.69 ಮಿಲಿಯನ್ ಟನ್ ಸರಕು ನಿರ್ವಹಣೆ ಈ ವರೆಗಿನ ಗರಿಷ್ಠ ದಾಖಲೆಯಾಗಿತ್ತು. ಆದರೆ ಈ ಸಾಲಿನಲ್ಲಿ 37.04 ಮಿಲಿಯನ್ ಟನ್ ಸರಕು ನಿರ್ವಹಣೆ ಮಾಡುವ ಮೂಲಕ ಆ ದಾಖಲೆಯನ್ನು ಮೀರಿಸಲಾಗಿದೆ ಎಂದರು. ಕಲ್ಲಿದ್ದಲು, ಕಚ್ಚಾತೈಲ ಮೊದಲಾದವುಗಳ ಸರಕು ನಿರ್ವಹಣೆಯಲ್ಲಿ ಆಗಿರುವ ಹೆಚ್ಚಳದಿಂದ ಈ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.
ಸರಕು ಹಡಗುಗಳ ನಿರ್ವಹಣೆ ಕಳೆದ ಸಾಲಿಗಿಂತ ಶೇ. 7.55 ರಷ್ಟು ಪ್ರಗತಿ ದಾಖಲಿಸಿದ್ದು, ಒಟ್ಟು 48,409 ಟಿಯುಇ ಕಂಟೈನರ್ ನಿರ್ವಹಣೆ ಮಾಡಲಾಗಿದೆ. ರೈಲ್ವೇ ಸರಕಿನಲ್ಲಿ ಶೇ. 55 ಹೆಚ್ಚಳವಾಗಿದ್ದು, ಕಳೆದ ಸಾಲಿನಲ್ಲಿ 3.99 ಮಿಲಿಯನ್ ಟನ್ ಸರಕು ನಿರ್ವಹಿಸಲಾಗಿತ್ತು ಈ ಬಾರಿ 6 ಮಿಲಿಯನ್ ಟನ್ ಸರಕು ನಿರ್ವಹಿಸಲಾಗಿದೆ
ಎಂದು ಅವರು ತಿಳಿಸಿದರು.
ಈ ಬಾರಿ ಎನ್‌ಎಂಪಿಟಿ 138 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿರುವುದಾಗಿ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎನ್‌ಎಂಪಿಟಿ ಉಪಾಧ್ಯಕ್ಷ ಟಿ.ಎಸ್.ಎನ್.ಮೂರ್ತಿ, ಕಾರ್ಯದರ್ಶಿ ಕ್ಯಾತಿವಾರಿ, ಟ್ರಾಫಿಕ್ ಮ್ಯಾನೇಜರ್ ದೊಡ್ಡ ಮಹಾದೇವಪ್ಪ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English