- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

1964 ರ ಗೋ ಹತ್ಯೆ ಕಾಯ್ದೆಯನ್ನು ಜಾರಿಗೆ ತಂದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು: ಬಿ.ಮಂಜುನಾಥ ಮಂಡ್ಯ

Manjunath Mandya [1]ಮಂಗಳೂರು : ಹೊಸದಾಗಿ ಅಧಿಕಾರಕ್ಕೆ ಬಂದ  ಕಾಂಗ್ರೆಸ್ ಸರ್ಕಾರವು ಗೋ ಹತ್ಯೆ ನಿಷೇದ ಕಾಯ್ದೆಯನ್ನು ಹಿಂದೆ ಪಡೆಯುವ ಉದ್ದೇಶ ಹೊಂದಿದ್ದು ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆಯುಂಟುಮಾಡಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಬಿ.ಮಂಜುನಾಥ್ ಮಂಡ್ಯ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ಸರ್ಕಾರವು ಗೋ ಹತ್ಯೆ ಕಾಯ್ದೆಯನ್ನು ಹಿಂದೆ ಪಡೆದಿದೆ ಮತ್ತು ಮಠಗಳಿಗೆ ನೀಡಿದ್ದ ದೇಣಿಗೆಯನ್ನು ಹಿಂಪಡೆದಿದೆ. ಇದು ಬಹುಸಂಖ್ಯಾತರಾದ ಹಿಂದೂಗಳ ಭಾವನೆಗೆ ದಕ್ಕೆಯುಂಟು ಮಾಡುವ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುವ ಹುನ್ನಾರವಾಗಿದ್ದು ಇದನ್ನು ಈ ಕೂಡಲೆ ಕೈಬಿಟ್ಟು ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಅವರು ಹೇಳಿದರು.

ರಾಜ್ಯದಲ್ಲಿ ಅಕ್ರಮ ಕಸಾಯಿಖಾನೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಮಂಗಳೂರಿನಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ ನಗರದ ಕುದ್ರೋಳಿಯಲ್ಲಿ ಅಧಿಕೃತ ಕಸಾಯಿಖಾನೆಯೊಂದಿದ್ದು ಇಲ್ಲಿ ದಿನಕ್ಕೆ 10 ರಿಂದ 12 ಗೋವುಗಳ ವಧೆಮಾಡಲು ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಸುಮಾರು 250 ಗೋ ಮಾಂಸದಂಗಡಿಗಳಿದ್ದು ಅವುಗಳಿಗೆ ೧೨ ಗೋವುಗಳನ್ನು ವಧೆ ಮಾಡುವುದರಿಂದ ಸಿಗುವ ಮಾಂಸವು ಸಾಕಾಗುವುದಿಲ್ಲ ಇದರಿಂದ ಅಕ್ರಮ ಕಸಾಯಿಖಾನೆಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿವೆ. ಒಂದು ವೇಳೆ 1964 ರ ಗೋ ಹತ್ಯೆ ಕಾಯ್ದೆಯನ್ನು ಸರಿಯಾಗಿ ಜಾರಿಗೆ ತಂದದ್ದೇ ಆದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಗಿ ತಡೆಗಟ್ಟಬಹುದಾಗಿದೆ ಎಂದ ಹೇಳಿದ ಅವರು ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಹಾಗು ರಾಜ್ಯದಲ್ಲಿನ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚುವ ಕಾರ್ಯವನ್ನು  ಬಜರಂಗದಳ ಮಾಡುವುದಾಗಿ ಅವರು ತಿಳಿಸಿದರು.

ಬಜರಂಗದಳ ಮಂಗಳೂರಿನ ವಿಭಾಗ ಸಂಚಾಲಕ ಶರಣ್ ಪಂಪ್ ವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ಭುಂಜಂಗ ಕುಲಾಲ್, ವಿಶ್ವಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷ ಜಗದೀಶ್ ಶೇಣವ, ಜಿಲ್ಲಾ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪ್ ವೆಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.