- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಣಿಪಾಲದಲ್ಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಖಂಡಿಸಿ ಅಭಾವಿಪದಿಂದ ಬೃಹತ್ ಪ್ರತಿಭಟನೆ

abvp students protest [1]ಮಂಗಳೂರು : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಮಂಗಳೂರು ಅಭಾವಿಪವು ಬೆಸೆಂಟ್ ಕಾಲೇಜು ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಸಭೆಯನ್ನು ನಡೆಸಿತು. ನೂರಾರು ವಿದ್ಯಾರ್ಥಿ/ ವಿದ್ಯಾರ್ಥಿನಿಯರು  ಪ್ರತಿಭಟನೆಯಲ್ಲಿ ಭಾಗವಹಿಸಿ ಅತ್ಯಾಚಾರ ಪ್ರಕರಣದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ, ಅಭಾವಿಪದ ಮಾಜಿ ರಾಜ್ಯ ಕಾರ್ಯದರ್ಶಿ ರವಿಚಂದ್ರ ಪಿ.ಎಂ. ಇದೊಂದು ಹೇಯ ಕೃತ್ಯವಾಗಿದ್ದು, ಸರಕಾರ 24 ತಾಸೊಳಗೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸೋಮವಾರ (24 ಜೂನ್) ದಂದು ವಿದ್ಯಾರ್ಥಿಗಳ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಸೋಮವಾರ ಉಡುಪಿ ಜಿಲ್ಲೆಯಾದ್ಯಂತ ಕಾಲೇಜು ಬಂದ್ಗೆ ಅಭಾವಿಪ ಕರೆ ನೀಡಿದೆ. ಆರೋಪಿಗಳು ಸಾಕ್ಷ್ಯ ನಾಶ ಮಾಡುವ ಮೊದಲೇ ಬಂಧಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡರಾದ ದೇವಿಚರಣ್, ಆದರ್ಶ ವಿದ್ಯಾರ್ಥಿಗಳು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದ್ದು ಪೋಲೀಸ್ ಇಲಾಖೆ ತಕ್ಷಣ ಆರೋಪಿಗಳನ್ನು ಬಂಧಿಸಬೇಕು,ವಿದ್ಯಾರ್ಥಿನಿಯ ಸಂಪೂರ್ಣ ಆರೋಗ್ಯದ ವೆಚ್ಚ ಸರಕಾರ ಭರಿಸಬೇಕು ಎಂದು ಒತ್ತಾಯಿಸಿದರು. ಅಭಾವಿಪ ವಿದ್ಯಾರ್ಥಿನಿ ಸಹ ಪ್ರಮುಖ್ ವಿಶಾಲಾಕ್ಷಿ ಮಾತನಾಡಿ ದ.ಕ. ಉಡುಪಿ ಜಿಲ್ಲೆಯ ಹಲವು ಅತ್ಯಾಚಾರ, ಕೊಲೆ ಪ್ರಕರಣ ಮುಚ್ಚಿ ಹಾಕಲ್ಪಟ್ಟಿದ್ದು, ಅದೇ ರೀತಿ ಈ ಪ್ರಕರಣವು ಮುಚ್ಚಿ ಹಾಕದಂತೆ, ಅಥವಾ ಸೂಕ್ತ ತನಿಖೆ ನಡೆಯದೆ ಇದ್ದು, ಈ ಪ್ರಕರಣದಲ್ಲಿ ವಿದ್ಯಾರ್ಥಿನಿಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ಸಿಗುವ ತನಕ ಅಭಾವಿಪ ಹೋರಾಟ ನಡೆಸಲಿದೆ ಎಂದರು.

ಪ್ರತಿಭಟನೆಯ ನೇತೃತ್ವವನ್ನು ಅಭಾವಿಪ ನಗರ ಕಾರ್ಯದರ್ಶಿ ಯತೀಶ್ ಕುಮಾರ್ ಪಿ., ಸಂತೋಷ್, ಆದಿತ್ಯ, ಚೇತನ್, ಸಿಂಧು, ಕು| ಅಮೃತಮಯ, ರಾಕೇಶ್, ಹರೀಶ್, ಜಯಪ್ರಕಾಶ್, ಜ್ಯೋತಿ, ಶ್ಯಾಮಿಲಿ, ವಿಜೇತಾ, ರಮ್ಯ ಮುಂತಾದವರು ವಹಿಸಿದ್ದರು.