- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೂಡಲೇ ಉಪನ್ಯಾಸಕರ ನೇಮಕಾತಿ ಮಾಡುವಂತೆ ಆಗ್ರಹಿಸಿ ಎಬಿವಿಪಿಯಿಂದ ನಗರ ಜ್ಯೋತಿವೃತ್ತದಲ್ಲಿ ಮಾನವ ಸರಪಳಿ

abvp protest [1]ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಶಾಖೆಯ ವತಿಯಿಂದ ಸರ್ಕಾರಿ ಪದವಿ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ನಗರದ ಜ್ಯೋತಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ಪ್ರತಿಭಟಿಸಲಾಯಿತು. ನಂತರ ಜ್ಯೋತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಲ್ಮಠ ಸರ್ಕಾರಿ ಕಾಲೇಜಿನ ಅಧ್ಯಕ್ಷೆ ಕು. ರಕ್ಷಿತಾ, ಕು. ದಿವ್ಯಾ, ಕು. ವಿನುತಾ ಮಾತನಾಡಿ ಮಂಗಳೂರು ವಿಶ್ವವಿದ್ಯಾಲಯವು ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶ ಕೊಟ್ಟು ತರಗತಿಯನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯವಾಗಿದೆ. ಆದರೆ ರಾಜ್ಯದಲ್ಲಿ ಮಂಗಳೂರು ವಿವಿ ವ್ಯಾಪ್ತಿಯ ತರಗತಿಗಳು ಪ್ರಾರಂಭವಾಗಿ 12 ದಿನಗಳಾದರೂ, ಇಲ್ಲಿಯ ಸರ್ಕಾರಿ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರು ಇಲ್ಲ. ಈ ಹಿಂದಿನಿಂದಲೂ ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡಲಾಗುತ್ತಿತ್ತು. ಆದರೆ ಈ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ರಾಜ್ಯದಲ್ಲಿ ಆನ್ಲೈನ್ ಅರ್ಜಿ ಮೂಲಕ ಕರೆದಿದ್ದು. ಅದರ ನೇಮಕಾತಿಯು ಇವತ್ತಿನವರೆಗೆ ಆಗಿರುವುದಿಲ್ಲ. ಈ ಹಿಂದೆ ಈ ನೇಮಕಾತಿಯನ್ನು ಆಯಾ ಸರ್ಕಾರಿ ಕಾಲೇಜಿನ ಪ್ರಾಚಾರ್ಯರೇ ಮಾಡುತ್ತಿದ್ದರು. ಆದರೆ ಈ ವರ್ಷದ ಪ್ರಾರಂಭದಲ್ಲಿಯೇ ರಾಜ್ಯಸರ್ಕಾರ ಅತಿಥಿ ಉಪನ್ಯಾಸಕರುಗಳನ್ನು ನೇಮಕ ಮಾಡದೇ ಇರುವುದರಿಂದ ದೂರದ ಊರಿನಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪಾಠ ಪ್ರವಚನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರೆ. ಈ ಕಾರಣಗಳಿಂದ ಕಳೆದ 12 ದಿನಗಳಿಂದ ವಿದ್ಯಾರ್ಥಿಗಳು ತರಗತಿಗೆ ಬಂದರೂ ಪ್ರಯೋಜನವಿಲ್ಲವಾಗಿದೆ. ಒಂದು ಸೆಮಿಸ್ಟರ್ 16 ವಾರಗಳು ಮಾತ್ರ ನಡೆಯುವುದರಿಂದ ಈಸರ್ಕಾರಿ ಕಾಲೇಜುಗಳನ್ನು ನಂಬಿರುವ ಈ ಬಡ ಪ್ರತಿಭಾನ್ವಿತರಿಗೆ ಸರ್ಕಾರ ಈ ಕೂಡಲೇ ಅತಿಥಿ ಉಪನ್ಯಾಸಕರು ಅಥವಾ ಖಾಯಂ ಉಪನ್ಯಾಸಕರ ನೇಮಕಾತಿಯನ್ನು ಮಾಡಿ ವಿದ್ಯಾರ್ಜನೆಗೆ ಅವಕಾಶ ಒದಗಿಸಬೇಕೆಂದು ರಾಜ್ಯ ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತೇವೆ ಎಂದರು.

abvp protest [2]ರಾಜ್ಯ ಕಾರ್ಯದರ್ಶಿ ರಮೇಶ್ ಕೆ.ರವರು ಮಾತನಾಡಿ ಸರ್ಕಾರವು ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದು, ಈಗಾಗಲೇ ಪಪೂ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸದೆ ಆ ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿ ನಿರ್ಮಿಸಿದ್ದಾರೆ. ಜೊತೆಗೆ ಈ ವಿದ್ಯಾರ್ಥಿಗಳಿಗೆ ಉಪನ್ಯಾಸಕರನ್ನು ನೇಮಕ ಮಾಡದೇ ಕಾಲೇಜಿನಲ್ಲಿ ತರಗತಿ ಇಲ್ಲದ ಸ್ಥಿತಿಯೂ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು. ಜೊತೆಗೆ ರಾಜ್ಯದ ಎಲ್ಲಾ ವಿವಿಗಳಿಗೂ ಅನ್ವಯವಾಗುವಂತೆ ಏಕರೂಪ ವೇಳಾಪಟ್ಟಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ನಗರ ಕಾರ್ಯದರ್ಶಿ ಯತೀಶ್ ಕುಮಾರ್ ಪಿ., ನಗರ ಸಹ-ಕಾರ್ಯದರ್ಶಿ ಆದಿತ್ಯ ಶೆಟ್ಟಿ, ಸಚಿನ್, ಚೇತನ್, ಅಶ್ವಥ್, ಹಿತೇಶ್, ರಕ್ಷಿತಾ, ಯೋಗಿತಾ, ವಿನುತಾ, ಶುಭಾ, ದಿವ್ಯ, ಭವ್ಯ, ಜ್ಯೋತಿ, ಕಾವ್ಯ, ದಿವ್ಯ, ವಿನಯ, ಸರ್ವೋತ್ತಮ, ಅಮೃತಾ, ಸಾಹಿರಾಜ್, ಮನೋಜ್, ಮುಂತಾದವರು ವಹಿಸಿದ್ದರು.

abvp protest [3]

Abvp protest [4]