ಮಹಾನದಿ

6:59 PM, Thursday, July 4th, 2013
Share
1 Star2 Stars3 Stars4 Stars5 Stars
(No Ratings Yet)
Loading...

Mahanadi‘ಮಹಾನದಿ’ ಕಲಾತ್ಮಕ ಮತ್ತು ಕಮರ್ಷಿಯಲ್ ಬೆರಕೆಯ ಸಾಲಿಗೆ ಸೇರುವ ಚಿತ್ರ. ಇಂತಹ ಚಿತ್ರಗಳಲ್ಲಿ ಸಾಕಷ್ಟು ವೈರುಧ್ಯಗಳು ಸಹಜ. ಇಲ್ಲಿ ನಿರ್ದೇಶಕರು ಆರಿಸಿಕೊಂಡಿರುವುದು ಹಳೆಯ ಕಥಾವಸ್ತು. ಅದಕ್ಕೆ ಈಗಿನ ಗ್ಲಾಮರ್ ಮೆತ್ತಲಾಗಿದೆ. ಒಂದೆಡೆ ಸದಭಿರುಚಿಯೂ ಬೇಕು, ಇನ್ನೊಂದೆಡೆ ಈಗಿನ ಪ್ರೇಕ್ಷಕರಿಗೂ ಹಿಡಿಸಬೇಕು ಎಂಬ ಗುರಿ ಇಟ್ಟುಕೊಂಡು ನಿರ್ದೇಶಕರು ಬ್ಯಾಲೆನ್ಸ್ ಮಾಡಲು ಯತ್ನಿಸಿದ್ದಾರೆ. ಆದರೆ ಹೆಚ್ಚು ಗ್ಲಾಮರ್ ಎದ್ದು ಕಂಡಿದೆ.

ಕರಾವಳಿ ಮೀನುಗಾರ ಕುಟುಂಬದ ಬದುಕಿನ ಚಿತ್ರಣವನ್ನು ‘ಮಹಾನದಿ’ ಕಟ್ಟಿಕೊಡಬಹುದು ಎಂಬ ನಿರೀಕ್ಷೆ ಅಷ್ಟರ ಮಟ್ಟಿಗೆ ಯಶಸ್ವಿಯಾಗಿಲ್ಲ. ಸಾಕಷ್ಟು ಗೊಂದಲಗಳನ್ನು ಹೇರಿಕೊಂಡು ನಿರ್ದೇಶನಕ್ಕಿಳಿದಿರುವ ಕೃಷ್ಣಪ್ಪ ಉಪ್ಪೂರು ಎತ್ತಲೂ ವಾಲಲು ಸಾಧ್ಯವಾಗದೆ ಮಧ್ಯಮ ಸಿನಿಮಾ ನೀಡಿದ್ದಾರೆ.

ಹಳ್ಳಿಯಲ್ಲಿ ಸಾಕಷ್ಟು ಮಂದಿ ಸಾಲು ನಿಂತಿದ್ದರೂ ನಾಯಕಿಗೆ ಮುಂಬೈ ಮೋಹ. ಅಲ್ಲಿನ ಹುಡುಗನನ್ನೇ ಮದುವೆಯಾಗಬೇಕು, ಬದುಕು ಸುಂದರವಾಗಿರುತ್ತದೆ ಎಂದು ಕನಸು ಕಾಣುವ ಬೆಸ್ತರ ಹುಡುಗಿ ಮೀನಾಕ್ಷಿಯ ಆ ಕನಸು ನಿಜವಾಗುತ್ತದೆ. ಆದರೆ ನಂತರ ಮುಂಬೈ ಕರಾಳ ಲೋಕ ತೆರೆದುಕೊಳ್ಳುತ್ತದೆ. ಮೀನುಗಾರ ಕುಟುಂಬದ ಹೆಣ್ಣುಗಳ ಆಸೆ ಎಷ್ಟರ ಮಟ್ಟಿಗೆ ಈಡೇರುತ್ತದೆ. ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣು ಕೊನೆಗೆ ಯಾವ ಸ್ಥಿತಿಗೆ ಬರುತ್ತಾಳೆ ಎಂಬುದನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ.

ಹೆಣ್ಣನ್ನು ನದಿಗೆ ಹೋಲಿಸಿರುವ ನಿರ್ದೇಶಕರ ‘ಮಹಾನದಿ’ ಹಿಡಿತ ಕಳೆದುಕೊಂಡು ಎಲ್ಲೆಲ್ಲೋ ಹರಿದಿದೆ. ಹೆಚ್ಚಿನ ಕಡೆ ಸಹಜ ಸನ್ನಿವೇಶಗಳ ಕೊರತೆ ಎದ್ದು ಕಾಣುತ್ತದೆ. ಅದನ್ನು ಒಂದಷ್ಟು ಸರಿದೂಗಿಸಲು ಯತ್ನಿಸಿದ್ದಾರೆ ಛಾಯಾಗ್ರಾಹಕ ಸುಂದರನಾಥ ಸುವರ್ಣ. ಹಾಡುಗಳನ್ನು ಶ್ರೀಮಂತಗೊಳಿಸಿದ್ದಾರೆ.

ಹೇಳಿಕೇಳಿ ಇದು ನಾಯಕಿ ಪ್ರಧಾನ ಚಿತ್ರ. ಹಾಗಾಗಿ ಇಡೀ ಚಿತ್ರವನ್ನು ಸಂಜನಾ ತುಂಬಿಕೊಂಡಿದ್ದಾರೆ ಎಂಬುದರಲ್ಲಿ ಅಚ್ಚರಿಯಿಲ್ಲ. ಅದಕ್ಕೆ ತಕ್ಕಂತೆ ಅವರ ನಟನೆ ಲವಲವಿಕೆಯಿಂದ ಇರಬೇಕಿತ್ತು. ಆದರೆ ಪೇಲವವೆನಿಸುತ್ತದೆ. ಬಣ್ಣಗಳ ನಡುವೆ ಅವರದ್ದು ನಾಟಕೀಯತೆ ಎನಿಸುತ್ತದೆ.

ದಿಲೀಪ್ ರಾಜ್ ಸಿಕ್ಕಿದ ಅವಕಾಶದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಲೋಕನಾಥ್, ಸಂಕೇತ್ ಕಾಶಿ, ಶೋಭರಾಜ್‌ಗೆ ಸೀಮಿತ ಚೌಕಟ್ಟು ಇರುವುದರಿಂದ ನಿರೀಕ್ಷೆ ಮುಟ್ಟಿಲ್ಲ. ಎ.ಎಂ. ನೀಲ್ ಸಂಗೀತದ ಎರಡು ಹಾಡುಗಳು ಸಹ್ಯ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English