- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತಲಪಾಡಿಯ ತಚ್ಚಣಿಯಲ್ಲಿ ಮಹಿಳೆಗೆ ಪಿಸ್ತೂಲು ತೋರಿಸಿ ಹಲ್ಲೆ

Talapady shotout [1]

ಮಂಗಳೂರು: ಕೇರಳ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಕೇಶವ್.ಬಿ ಅವರ ಮನೆಯೊಳಗೆ ಮಂಗಳವಾರ ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಗೆ ಪಿಸ್ತೂಲು ತೋರಿಸಿ ಬೆದರಿಸಿ ಅವರಿಗೆ ಹಲ್ಲೆ ನಡೆಸಿದ ಘಟನೆ ತಲಪಾಡಿಯ ತಚ್ಚಣಿ ಸಮೀಪದ ಮಂಡಿ ಕಟ್ಟೆಯಲ್ಲಿ ನಡೆದಿದೆ.

ದುಷ್ಕರ್ಮಿಗಳಿಬ್ಬರ ಪೈಕಿ ಓರ್ವ ಏಕಾಏಕಿ ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿದ್ದ  ಸಾಧನಾ ಕೇಶವ್ ಅವರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದನು. ಮನೆಯೊಳಗೆ `ಯಾರಿದ್ದಾರೆಂದು’ ಪ್ರಶ್ನಿಸಿದ ಬಳಿಕ ಅವರ ಮೊಬೈಲಿನಿಂದ ತಾನು ಹೇಳುವ ಮೊಬೈಲ್ ನಂಬರಿಗೆ ಕರೆ ಮಾಡಲು ಹೇಳಿದ್ದನು. ಗಾಬರಿಗೊಂಡ ಸಾಧನಾ ಕೋಣೆಯೊಳಗಿದ್ದ ಮೊಬೈಲನ್ನು ತರಲು ಹೋದಂತೆ ಮಾಡಿ ಮನೆ ಅಂಗಳಕ್ಕೆ ಓಡಲು ಯತ್ನಿಸಿದಾಗ ಬೆನ್ನಿಗೆ ಪಿಸ್ತೂಲು ಹಿಡಿದು ಅವರ ಜಡೆಯನ್ನು ಹಿಡಿದೆಳೆದು ಕೆನ್ನೆಗೆ ಹೊಡೆದಿದ್ದನು. ಈ ವೇಳೆ ಪತ್ನಿಯ ಬೊಬ್ಬೆ ಕೇಳಿ ಸಮೀಪದಲ್ಲೇ ಇರುವ ಪಂಪ್‍ಹೌಸ್‍ನಿಂದ ಮನೆಯತ್ತ ಧಾವಿಸಿದ ಪತಿ ಕೇಶವ್, ದುಷ್ಕರ್ಮಿಯನ್ನು ಕಟ್ಟಿಗೆ ಹಿಡಿದು ಬಡಿಯಲು ಯತ್ನಿಸಿದರು. ಅಷ್ಟರಲ್ಲಿ ದುಷ್ಕರ್ಮಿ ಬೈಕಿನಲ್ಲಿ ಕಾದು ಕುಳಿತಿದ್ದ ಇನ್ನೋರ್ವ ದುಷ್ಕರ್ಮಿಯತ್ತ ಓಡುತ್ತಾ ಕೈಯಲ್ಲಿದ್ದ ಪಿಸ್ತೂಲಿನಿಂದ ಕೇಶವ ಅವರಿಗೆ ಗುಂಡು ಹಾರಿಸಿದ್ದಾನೆ. ಆದರೆ ಪವಾಡ ಸದೃಶವಾಗಿ ಗುಂಡು ತಪ್ಪಿ ಬೇರೆಡೆ ಸಿಡಿದಿದೆ. ದುಷ್ಕರ್ಮಿಯ ಹಲ್ಲೆಯಿಂದ ಮಹಿಳೆ ಕೆನ್ನೆ ಭಾಗಕ್ಕೆ ಗಾಯವಾಗಿದೆ.

ತಲಪಾಡಿಯಿಂದ ದೇವಿನಗರ ರಸ್ತೆಯಾಗಿ ಬೈಕಿನಲ್ಲಿ ಬಂದಿದ್ದ ದುಷ್ಕ ರ್ಮಿಗಳಿಬ್ಬರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ತೆರಳಿದ್ದರು. ಅಲ್ಲಿ ದೇವಸ್ಥಾನದ ಸಿಬ್ಬಂದಿ ವೇಣುಗೋಪಾಲ್ ಎಂಬವರಲ್ಲಿ ಬಸ್ಸು ಮಾಲೀಕ ಜಯಪ್ರಕಾಶ್ ಎಂಬವರ ಮನೆಗೆ ಹೋಗುವ ದಾರಿ ಕೇಳಿದ್ದರು. ಮತ್ತೆ ದೇವಿನಗರ ರಸ್ತೆಯಿಂದ ತಲಪಾಡಿವರೆಗೆ ಬಂದವರು ರಸ್ತೆಯಲ್ಲಿನ ಹೊಂಡಕ್ಕೆ ಕಲ್ಲು ಹಾಕುತ್ತಿದ್ದ ಶ್ರೀಧರ್ ಎಂಬವರಲ್ಲೂ ಜಯಪ್ರಕಾಶ್ ಮನೆ ದಾರಿ ಕೇಳಿದ್ದರು. ಅಲ್ಲಿಂದ ನೇರ ಕೇಶವ್ ಮನೆಗೆ ಬಂದು ಕೃತ್ಯವೆಸಗಿದ್ದಾರೆ. ದುಷ್ಕರ್ಮಿಗಳು ಜಯಪ್ರಕಾಶ್ ಎಂಬವರ ಮನೆಯೆಂದು ತಪ್ಪಿ ಕೇಶವ ಅವರ ಮನೆಗೆ ಬಂದು ದಾಳಿ ನಡೆಸಿದರೇ ಎಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮನೆಯೊಡತಿ ಸಾಧನಾ ಅವರಲ್ಲಿ ಮೊಬೈಲ್ ಕರೆ ಮಾಡುವಂತೆ ಹೇಳಿ ಅವರಲ್ಲಿರುವ ಆಭರಣ ಮತ್ತು ಮನೆಯೊಳಗಿನ ಸೊತ್ತುಗಳನ್ನು ಕಳವು ನಡೆಸುವ ಹಿನ್ನೆಲೆಯಲ್ಲಿ ಬಂದಿರಬಹುದು ಎನ್ನಲಾಗುತ್ತಿದೆ. ಎರಡು ದಿನಗಳಿಂದ ಮನೆ ಹೊರಗೆ ನಿಲ್ಲಿಸುತ್ತಿದ್ದ ಕಾರನ್ನು ಅಳಿಯ ತೆಗೆದುಕೊಂಡು ಹೋಗಿದ್ದು, ಬೈಕ್ ಕೂಡಾ ಮಂಗಳೂರಿಗೆ ಕೆಲಸಕ್ಕೆ ಹೋಗುವ ಮಗ ಕೊಂಡೊಯ್ದಿದ್ದಾನೆ. ಇದನ್ನು ಗಮನಿಸಿದ ಕಳ್ಳರು ಮನೆಯಲ್ಲಿ ಗಂಡಸರು ಯಾರೂ ಇಲ್ಲವೆಂಬುದನ್ನು ಅರಿತು ದರೋಡೆಗೈಯ್ಯಲು ಹೊಂಚು ಹಾಕಿದ್ದರೆಂದು ಮನೆ ಮಾಲೀಕ ಕೇಶವ. ಬಿ ತಿಳಿಸಿದ್ದಾರೆ.

ಕುಂಜತ್ತೂರು ಸಮೀಪ ವಾಸಿಸುತ್ತಿರುವ ಪ್ರಕಾಶ್ ನಾಮಾಂಕಿತ ಬಸ್ಸಿನ ಮಾಲೀಕರಾದ ಜಯಪ್ರಕಾಶ್ ಎಂಬವರ ಪತ್ನಿ ಮೊಬೈಲಿಗೆ 10 ಲಕ್ಷ ರೂ. ಬೇಡಿಕೆಯಿಟ್ಟು ದೂರವಾಣಿ ಕರೆ ಬಂದಿತ್ತು. ಆದರೆ ಅವರು ಅದನ್ನು ಕೊಡಲು ನಿರಾಕರಿಸಿದ್ದರೆನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ತಪ್ಪಿ ಬೇರೆ ಮನೆಗೆ ನುಗ್ಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.