- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾರಿಗೆ ಇಲಾಖೆಯ ಭ್ರಷ್ಟಾಬಾರದ ವಿರುದ್ಧ ಆರ್.ಟಿ.ಓ. ಕಛೇರಿಗೆ ಮುತ್ತಿಗೆ

ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ ಮುತ್ತಿಗೆ [1]ಮಂಗಳೂರು: ಸಾರಿಗೆ ಇಲಾಖೆಯ ಅವ್ಯವಸ್ಥೆ ಹಾಗೂ ಅವೈಜ್ಞಾನಿಕ ಕ್ರಮಗಳಿಂದಾಗಿ ರಿಕ್ಷಾ ಚಾಲಕ ಸಮುದಾಯವು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು ಇವುಗಳನ್ನು ಈ ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಫೆಡರೇಶನ್ಸ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ (ರಿ) ಮಂಗಳೂರು ನಗರ ಸಮಿತಿಯ ವತಿಯಿಂದ ಇಂದು ಬೆಳಿಗ್ಗೆ ಆರ್.ಟಿ.ಓ. ಕಛೇರಿಗೆ ಮುತ್ತಿಗೆ ಚಳುವಳಿ ನಡೆಯಿತು.

ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ ಮುತ್ತಿಗೆ [2]ಸಾರಿಗೆ ಇಲಾಖೆಯ ಅವೈಜ್ಞಾನಿಕ ನೀತಿಗಳಿಂದ 8ನೇ ತರಗತಿಯವರೆಗೆ ವಿದ್ಯಾರ್ಹತೆ ಕಡ್ಡಾಯ ರಿಕ್ಷಾ ಚಾಲಕರು ಟ್ಯಾಕ್ಸಿ ಚಾಲನಾ ಪರವಾನಗಿ ಹೊಂದಬೇಕೆಂದು ಹಾಗೂ ಪರವಾನಗಿ ನವೀಕರಣಗೊಳಿಸುವಂತಹ ಸಂದರ್ಭದಲ್ಲಿ ಸರಕಾರೀ ವೈದ್ಯರಿಂದಲೇ ಸಟರ್ಿಫಿಕೇಟ್ ಪಡೆಯಬೇಕೆಂದು ಆದೇಶಗಳಿಂದ ಬಡ ರಿಕ್ಷಾಚಾಲಕರು ಕಂಗೆಟ್ಟಿದ್ದಾರೆ. ಆಟೋರಿಕ್ಷಾಗಳಿಗೆ ಸಂಬಂಧಪಟ್ಟಂತೆ ಪರವಾನಗಿ ವಿಭಾಗದಲ್ಲಿ ಕಡತಗಳ ನಿರ್ವಹಣೆಯಲ್ಲಿ ಸಮರ್ಪಕ ರೀತಿಯಲ್ಲಿ ಮಾಡದೆ ತಿಂಗಳುಗಟ್ಟಲೆ ಅರ್ಜಿದಾರರನ್ನು ಸತಾಯಿಸುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಬ್ರೋಕರ್ ಗಳು ಹಣವನ್ನು ಅಮಾಯಕ ರಿಕ್ಷಾ ಚಾಲಕರಿಂದ ಸುಲಿಗೆ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಪ್ರದೇಶಿಕ ಸಾರಿಗೆ ಅಧಿಕಾರಿಗಳು ತೊಂದರೆ ಅನುಭವಿಸುತ್ತಿರುವ ಬಡ ರಿಕ್ಷಾ ಚಾಲಕರ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಸಿಐಟಿಯುನ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪಿ.ಪಿ.ಪಿ (ಖಾಸಗೀ – ಸರಕಾರಿ ಸಹಭಾಗಿತ್ವ) ನೆಪದಲ್ಲಿ ಸಂಪೂರ್ಣವಾಗಿ ಕೆ.ಎಂ.ಸಿ ಆಸ್ಪತ್ರೆಗೆ ಮಾರಾಟ ಮಾಡಲಾಗಿದ್ದು, ಅಲ್ಲಿನ ವೈದ್ಯರಿಂದ ಕನಿಷ್ಟ ಸರ್ಟಿಫಿಕೇಟ್ ಪಡೆಯಲು ಬಡಪಾಯಿ ರಿಕ್ಷಾ ಚಾಲಕರು ಸುಮಾರು 250 -300 ರೂಪಾಯಿಯನ್ನು ತೆರಬೇಕಾಗುತ್ತದೆ. ಒಟ್ಟಿನಲ್ಲಿ ಸರಕಾರದ ಈ ಎಲ್ಲಾ ಕ್ರಮಗಳು ರಿಕ್ಷಾ ಚಾಲಕರ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.
ಆಟೋ ರಿಕ್ಷಾಗಳಿಗೆ ಗ್ಯಾಸ್ ಫಿಲ್ಲಿಂಗ್ ಮಾಡಲು ಮಂಗಳೂರು ನಗರದಲ್ಲಿ ಕೇವಲ 3 ಕಡೆಗಳಲ್ಲಿ (ಲೇಡಿಹಿಲ್, ಕಪಿತಾನಿಯೋ, ಕೂಳೂರು) ಮಾತ್ರ ಅವಕಾಶವಿದೆ. ಸಾವಿರಾರು ಆಟೋ ರಿಕ್ಷಾಗಳು ಓಡಾಡುತ್ತಿರುವ ಮಂಗಳೂರಿನಲ್ಲಿ ಇದು ಸಾಕಾಗದೆ ಗ್ಯಾಸ್ ಸಿಲಿಂಡರ್ ಗಳನ್ನು ಉಪಯೋಗಿಸುತ್ತಿರುವ ರಿಕ್ಷಾ ಚಾಲಕರು ವರ್ಷಕ್ಕೊಮ್ಮೆ ಅರ್ಹತಾ ಪತ್ರ ಪಡೆಯಬೇಕಾದರೆ ಆರ್.ಟಿ.ಒ ಇಲಾಖೆಯು ಇದಕ್ಕೆ ಕೂಡಾ ಕಡಿವಾಣ ಹಾಕಿದೆ. ಗ್ರಾಮಾಂತರ ಪ್ರದೇಶದ ಆಟೋರಿಕ್ಷಾ ಚಾಲಕರ ಸ್ಥಿತಿ ಇದಕ್ಕಿಂತಲೂ ಕಷ್ಟಕರವಾಗಿದೆ ಎಂದು ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ ನ ಅಧ್ಯಕ್ಷ ಕರುಣಾಕರ ಸಾಲಿಯಾನ್ ಹೇಳಿದರು.

ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ ಮುತ್ತಿಗೆ [3]ಮತ್ತೊಂದು ಕಡೆ ಮಿತಿ ಮೀರಿದ ಭ್ರಷ್ಟಾಚಾರದಿಂದ ಕೂಡಿದ ಆರ್.ಟಿ.ಒ ಕಚೇರಿಯು ಅವ್ಯವಸ್ಥೆಗಳ ಅಗರವಾಗಿದೆ. ಆಟೋ ರಿಕ್ಷಾಗಳಿಗೆ ಸಂಬಂಧಪಟ್ಟ ಪರವಾನಿಗೆ ವಿಭಾಗದಲ್ಲಿ ಕಡತಗಳ ನಿರ್ವಹಣೆಯನ್ನು ಸಮರ್ಪಕ ರೀತಿಯಲ್ಲಿ ಮಾಡದೆ ತಿಂಗಳುಗಟ್ಟಲೆ ಅರ್ಜಿದಾರರನ್ನು ಸತಾಯಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಲಂಚ ನೀಡಿದರೆ ಮಾತ್ರ ಕೆಲಸ ಆಗುತ್ತದೆ ಎಂಬ ಪರಿಸ್ಥಿತಿಯನ್ನು ಅಲ್ಲಿಯ ನೌಕರರು ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಪೂರಕವೆಂಬಂತೆ ಅಮಾಯಕ ರಿಕ್ಷಾ ಚಾಲಕರನ್ನು ಮತ್ತೊಂದು ಕಡೆಯಲ್ಲಿ ಬ್ರೋಕರ್ ಗಳು ಹಣವನ್ನು ಸುಲಿಗೆ ಮಾಡುವ ಮೂಲಕ ಆರ್.ಟಿ.ಒ ಕಚೇರಿ ಎಂದರೆ ಭ್ರಷ್ಟಾಚಾರದ ಮರಮಾವಧಿ ಎಂಬ ಭಾವನೆ ಜನತೆಯಲ್ಲಿ ಮೂಡಿದೆ ಎಂದು ಅವರು ಹೇಳಿದರು.

ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ ಮುತ್ತಿಗೆ [4]ಮುತ್ತಿಗೆ ಚಳುವಳಿಯ ಕೊನೆಯಲ್ಲಿ ಫೆಡರೇಶನ್ಸ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ ಸದಸ್ಯರು ಬೇಡಿಕೆಗಳ ಮನವಿಯೊಂದನ್ನು ಪ್ರದೇಶಿಕ ಅಧಿಕಾರಿಗಳಿಗೆ ನೀಡಿದರು.

ಬೇಡಿಕೆಗಳು:

1. 8 ನೇ ತರಗತಿಯವರೆಗೆ ವಿದ್ಯಾರ್ಹತೆ ಕಡ್ಡಾಯದಿಂದ ರಿಕ್ಷಾಚಾಲಕರಿಗೆ ವಿನಾಯಿತಿ ನೀಡಬೇಕು. ಈಗಾಗಲೇ ಪರವಾನಗಿ ಪಡೆದಿರುವ ಅವಿದ್ಯಾವಂತ ಆಟೋರಿಕ್ಷಾ ಚಾಲಕರಿಗೆ ಬ್ಯಾಡ್ಜ್ ನೀಡಬೇಕು.
2. ಬ್ಯಾಡ್ಜ್ ನೀಡುವಲ್ಲಿನ ಕಾನೂನು ಕ್ರಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು.
3. ಖಾಸಗೀ ಎಮ್.ಬಿ.ಬಿ.ಎಸ್ ವೈದ್ಯರಿಂದ ಪಡೆದ ಸರ್ಟಿಫಿಕೇಟ್ಗೂ ಮಾನ್ಯತೆ ನೀಡಬೇಕು
4. ಗ್ಯಾಸ್ ಸಿಲಿಂಡರ್ ಹೊಂದಿರುವ ರಿಕ್ಷಾ ಚಾಲಕರಿಗೂ ಅರ್ಹತಾಪತ್ರ ನೀಡಬೇಕು
5. ಅರ್ಜಿಗಳ ವಿಲೇವಾರಿಗಾಗಿ ಏಕಗವಾಕ್ಷಿ ಪದ್ದತಿಯನ್ನು ಜಾರಿಗೊಳಿಸಬೇಕು
6. ಸಾರಿಗೆ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ಸಂಪೂರ್ಣ ತಡೆಗಟ್ಟಬೇಕು.

ಮುತ್ತಿಗೆ ಚಳುವಳಿಯಲ್ಲಿ ಕರುಣಾಕರ, ಫೆಡರೇಶನ್ಸ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೆವರ್ಸ್ ಯೂನಿಯನ್ಸ್ ಅಧ್ಯಕ್ಷರು, ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ, ಎಲ್. ಟಿ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದದರ್ಶಿ ಮೊದಲಾದವರು ಉಪಸ್ಥಿತರಿದ್ದರು.