ಮಂಗಳೂರು : ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಮುಂದೆ ಸಾಗುವಾಗ ಬಜಿಲಕೇರಿ ಸಿಗುತ್ತದೆ. ಇಲ್ಲಿ ಜೈನಬಸದಿ ಮತ್ತು ಕಾರಣೀಕ ಹನುಮಂತ ದೇವಸ್ಥಾನವಿದೆ. ಸುಮಾರು 85 ವರ್ಷಗಳ ಹಿಂದೆ ಬಿ.ಕೃಷ್ಣಪ್ಪನವರು ಬಜಿಲಕೇರಿ ಹುಲಿವೇಷ ತಂಡವನ್ನು ಕಟ್ಟಿದರು.
ಅವರು 1928 ರಲ್ಲಿ ಬಜಿಲಕೇರಿಯಲ್ಲಿ ಆರಂಭಿಸಿದ ಹುಲಿವೇಷ ಇದುವರೆಗೂ ಮುಂದುವರಿದಿದೆ. ಬಿ. ಕೃಷ್ಣಪ್ಪನವರು ದಿವಂಗತರಾದ ಮೇಲೆ ಅವರ ಮಗ ಕಾರ್ಪೋರೇಟರ್ ಬಜಿಲಕೇರಿ ಕಮಲಾಕ್ಷನವರು ತಂದೆಯವರ ಸ್ಮರಣಾರ್ಥ ಹುಲಿವೇಷ ತಂಡವನ್ನು ಮುಂದುವರಿಸಿಕೊಂಡು ಬಂದಿದ್ದಾರೆ . ಬಜಿಲಕೇರಿಯಲ್ಲಿರುವ ಜೈನ ಬಸದಿಯ ಪಕ್ಕ ಬಸ್ತಿ ಶಾಲೆಯಲ್ಲಿ ಕೇಸರಿ ಪ್ರೆಂಡ್ಸ್ ಸರ್ಕಲ್ ಹೆಸರಿನಲ್ಲಿ ಕಮಲಾಕ್ಷ ಅವರ ಹುಲಿವೇಷ ತಂಡ ಪ್ರತಿ ವರ್ಷ ಸಿದ್ದಗೊಳ್ಳುತ್ತದೆ.
ಕೇಸರಿ ಪ್ರೆಂಡ್ಸ್ ಸರ್ಕಲ್ ಸದಸ್ಯರು ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲ, ದೇಶದಾದ್ಯಂತ ಮತ್ತು ವಿದೇಶದಲ್ಲೂ ಪ್ರದರ್ಶನ ನೀಡಿದ್ದಾರೆ. ಪ್ರತಿ ವರ್ಷ 50 ರಿಂದ 60 ಹುಲಿಗಳು ಬಜಿಲಕೇರಿಯ ಕೇಸರಿ ಪ್ರೆಂಡ್ಸ್ ಸರ್ಕಲ್ ವತಿಯಿಂದ ಸಿದ್ದಗೊಳ್ಳುತ್ತದೆ.
ಮೆಗಾಮಿಡಿಯಾ ನ್ಯೂಸ್ ನೊಂದಿಗೆ ಮಾತನಾಡಿದ ಬಜಿಲಕೇರಿ ಕಮಲಾಕ್ಷ ಹುಲಿವೇಷದ ವೈಶಿಷ್ಯಗಳನ್ನು ವಿವರಿಸಿದರು. ಹುಲಿವೇಷಧಾರಿಗಳು ವೇಷಕ್ಕೆ ನಿಲ್ಲುವ ಮೊದಲು , ಮೈ ಮೇಲಿನ ಕೂದಲನ್ನು ತೆಗೆದು ಬಣ್ಣಕ್ಕೆ ನಿಲ್ಲುತ್ತಾರೆ. ಬಣ್ಣ ಒಣಗಲು ಮೂರರಿಂದ ನಾಲ್ಕು ಗಂಟೆಯ ಅವಧಿ ಬೇಕಾಗುತ್ತದೆ . ಸಾಮಾನ್ಯವಾಗಿ ಹುಲಿವೇಷವನ್ನು ಹರಕೆಯ ಮೇಲೆ ಹಾಕುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಈ ಹುಲಿವೇಷ ಹಾಕುತ್ತಾರೆ. ಹುಲಿವೇಷ ಹಾಕುವುದರಿಂದ ಹರಕೆ ಈಡೇರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ನಮ್ಮ ತಂದೆಯವರ ಕಾಲದಿಂದಲೂ ಹುಲಿವೇಷಕ್ಕೆ ಬಹಳ ಗೌರವ ಸ್ಥಾನ ಮಾನಗಳು ಸಿಕ್ಕಿವೆ. ಅವರು ಹೇಳಿಕೊಟ್ಟ ವಿದ್ಯೆಯನ್ನು ನಾವು ಇಂದಿನ ಪೀಳಿಗೆಗೂ ಹೇಳಿಕೊಡುತ್ತಿದ್ದೇವೆ. ಈ ಜನಪದ ಕಲೆ ಉಳಿ ಬೇಕೆಂದು ನಮ್ಮ ಹಂಬಲ ಎಂದು ಬಜಿಲಕೇರಿ ಕಮಲಾಕ್ಷ ಹೇಳುತ್ತಾರೆ.
ನಮ್ಮ ತಂದೆಯವರ ಕಾಲದಲ್ಲಿ ಹುಲಿಗಳನ್ನು ಲಟ್ಟೆ ಅಥವ ಮರದ ಹಲಗೆಯ ಮೇಲೆ ನಿಲ್ಲಿಸಿ ಮೆರವಣಿಗೆ ನಡೆಸಲಾಗುತ್ತಿತ್ತು. ಅದರ ನಂತರ ಟ್ರಕ್ಕ್ ಗಳು ಬಂದವು. ಮಂಗಳೂರಿನಲ್ಲಿ ಮೊದಲ ಬಾರಿ ಟ್ರಕ್ಕ್ ಮೇಲೆ ಹುಲಿವೇಷವನ್ನು ಪರಿಚಯಿಸಿದವರು ಬಜಿಲಕೇರಿ ತಂಡ ಎಂದು ಕಮಲಾಕ್ಷ ಹೇಳುತ್ತಾರೆ.
ತಂಡದ ಹುಲಿವೇಷಕ್ಕೆ ಬೇಕಾಗುವ ತಲೆಗಳನ್ನು ಬಜಿಲಕೇರಿ ಮನೆತನದವರೇ ನಿರ್ಮಿಸುತ್ತಾರೆ. ಹುಲಿಗಳಿಗೆ ಬಣ್ಣ ಹಚ್ಚಲು ಪ್ರವೀಣ, ರಮೇಶ, ಅನ್ನು ಮೊದಲಾದ ಕಲಾವಿದರು ಸಹಕರಿಸುತ್ತಾರೆ. ಹುಲಿಗೆ ಹಾಕುವ ಬಣ್ಣದಿಂದ ಯಾವುದೇ ಅಲರ್ಜಿಗಳು ಬರುವುದಿಲ್ಲ. ಯಾಕೆಂದರೆ ಬಣ್ಣ ಹಾಕುವ ಮೊದಲು ವೇಷಧಾರಿಯ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ| ಮುರಳೀದರ್ ಪೈ ಯವರ ತಂಡ ಇಲ್ಲಿಗೆ ಬಂದು ರಕ್ತ ಪರೀಕ್ಷೆಯನ್ನು ಮಾಡಿ 24 ಗಂಟೆಗಳ ನಂತರ ರಕ್ತ ಪರೀಕ್ಷೆಯ ವರದಿ ನೀಡುತ್ತಾರೆ. ನಾವು ಹಚ್ಚುವ ಬಣ್ಣ ಉತ್ತಮ ಗುಣಮಟ್ಟದಾಗಿರುತ್ತದೆ ಎಂದು ಕಮಲಾಕ್ಷ ಹೇಳಿದ್ದಾರೆ.
ಗಣಪತಿ ಹಬ್ಬ, ವೆಂಕಟರಮಣ ದೇವರ ಶಾರದಾ ವಿಸರ್ಜನೆ ಮೊದಲಾದ ಸಂದರ್ಭದಲ್ಲಿ ವಿಶೇಷವಾಗಿ ಹುಲಿವೇಷ ಹಾಕಲಾಗುತ್ತದೆ. ಬೇಡಿಕೆಯ ಮೇರೆಗೆ ಹರಿದ್ವಾರ ಮತ್ತು ಬಹರೈನ್ ನ ತುಳು ಕೂಟದವರಿಗಾಗಿ ಹುಲಿವೇಷ ತಂಡ ಹೋಗಿತ್ತು.
ನವರಾತ್ರಿಯ ಸಂದರ್ಭದಲ್ಲಿ ವಿಜಯ ದಶಮಿಯಂದು ಬಣ್ಣ ಹಚ್ಚಿ ಮಾರನೆ ದಿನ ವೆಂಕಟರಮಣ ಶಾರದಾ ವಿಸರ್ಜನೆಯ ಸಂದರ್ಭದಲ್ಲಿ ಜಳಕ ಮಾಡಲಾಗುತ್ತದೆ.
ಹುಲಿವೇಷ ನಮ್ಮ ಕಸುಬಲ್ಲ. ನಮ್ಮ ಹಿರಿಯರು ಹಾಕಿದ ಅಡಿಪಾಯವನ್ನು ನಾವು ಮುಂದುವರಿಸುತ್ತಿದ್ದೇವೆ. ಹುಲಿವೇಷ ಜನಪದ ಕಲೆ , ಇದು ಉಳಿಯ ಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿ ತುಂಬಾ ಮುತುವರ್ಜಿಯಿಂದ ಈ ತಂಡವನ್ನು ಬೆಳೆಸಿದ್ದೇನೆ ಎಂದು ಹೇಳುತ್ತಾರೆ.
ವಿಜಯ ದಶಮಿಯ ದಿನ ಬಸ್ತಿ ಶಾಲೆಯಲ್ಲಿ ಸುಮಾರು 50 ಹುಲಿವೇಷಧಾರಿಗಳು ಬಣ್ಣ ಹಚ್ಚಿ ಬಜಿಲಕೇರಿಯ ಕಾರಣೀಕ ಹನುಮಂತ ದೇವಸ್ಥಾನದಲ್ಲಿ ಪೂಜೆ ಕೈಗೊಂಡು ಹೊರಡುತ್ತಾರೆ. ನಂತರ ನಗರದ ಕೆಲವು ಆಯ್ದ ಪ್ರದೇಶಗಳಲ್ಲಿ ಪ್ರದರ್ಶನ ನೀಡುತ್ತಾರೆ.
ವಿಡಿಯೋ ನೋಡಿ
Click this button or press Ctrl+G to toggle between Kannada and English