ಮಂಗಳೂರು : ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೋಮವಾರ ವಿಜಯ ದಶಮಿಯಂದು ವೈಭವದ ರಥೋತ್ಸವ ನಡೆಯಿತು.
ವಿದ್ಯೆಯನ್ನು ಆರಂಭಿಸುವ ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ.ಗಣೇಶ್ ನೇರವೇರಿಸಿದರು.
ಮಧ್ಯಾಹ್ನ ರಥಾರೋಹಣಗೊಂಡು ರಥವನ್ನು ಅಲಂಕರಿಸಿ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಇಡಲಾಯಿತು. ರಥವನ್ನು ಹೂ, ಸಿಯಾಳ ಫಲವಸ್ತು ಮತ್ತು ವಿದ್ಯುದ್ದೀಪಗಳಿಂದ ಆಲಂಕರಿಸಿ ರಥವನ್ನು ಎಳೆಯಲಾಯಿತು. ಬಳಿಕ ಮಹಾಪೂಜೆ ನಡೆಯಿತು.
ಸಂಜೆ ಅಂತರ್ ರಾಷ್ಟ್ರೀಯ ಖ್ಯಾತಿಯ ಪ್ರಶಸ್ತಿ ವಿಜೇತ ಮಚ್ಚೆಂದ್ರನಾಥ್ ಮತ್ತು ಬಳಗದವರಿಂದ ಸ್ಯಾಕ್ಸೋಫೊನ್ ವಾದನ ನಡೆಯಿತು. ರಾತ್ರಿ 8ಕ್ಕೆ ಮಂಗಳಾದೇವಿಯ ಬೀದಿಗಳಲ್ಲಿ ದೊಡ್ಡ ರಥೋತ್ಸವ ನಡೆಯಿತು. ರಥೋತ್ಸವ ಸಂದರ್ಭದಲ್ಲಿ 18 ಕ್ಕಿಂತಲೂ ಹೆಚ್ಚು ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಭಾಗವಹಿಸಿದವು.
ಮಂಗಳಾದೇವಿಯಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹರಕೆ ಸಲ್ಲಿಸಿದರು.
ಮಂಗಳವಾರ ಅಕ್ಟೋಬರ್ 15ರಂದು ಅವಭೃತ ಸ್ನಾನ, ಸಂಜೆ ಸಮಾರೋಪ ಸಭಾ ಕಾರ್ಯಕ್ರಮ, ಬುಧವಾರ ಅಕ್ಟೋಬರ್ 16ರಂದು ಸಂಜೆ 6.30 ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.
Click this button or press Ctrl+G to toggle between Kannada and English