ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೆಲವರು ಸೇರಿಕೊಂಡು 2012 ರಲ್ಲಿ ನಡೆದ ಸೌಜನ್ಯಾ ಕೊಲೆ ಪ್ರಕರಣವನ್ನು ಟಿ.ವಿ. ಮಾಧ್ಯಮದಲ್ಲಿ ಹೇಳಿಕೊಂಡು ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯ ಮತ್ತು ಧರ್ಮಾಧಿಕಾರಿಯಾದ ನಮ್ಮ ಮೇಲೆ ಆರೋಪ ಹೊರಿಸುವ ಪ್ರಯತ್ನ ಮಾಡಿದ್ದಾರೆ. ಸೌಜನ್ಯಾ ಪ್ರಕರಣದಲ್ಲಿ ನಮ್ಮ ಕುಟುಂಬದ ಯಾರದ್ದೂ ಕೈವಾಡವಿಲ್ಲ. ನಾವು ಯಾವುದೇ ಆರೋಪಿಗಳನ್ನು ರಕ್ಷಿಸಿಲ್ಲ. ಯಾರೇ ಆರೋಪಿಗಳಿದ್ದರೂ ಅವರನ್ನು ತತ್‌ಕ್ಷಣ ಬಂಧಿಸಲು ನಮ್ಮ ಅಡ್ಡಿಯಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿವರಣೆ ನೀಡಿದರು.
45 ವರ್ಷಗಳ ಸಾಮಾಜಿಕ ಜೀವನದಲ್ಲಿ ಪೂರ್ಣಕಾಲಿಕ ಧರ್ಮಸ್ಥಳದ ಭಕ್ತ, ಧರ್ಮಾಧಿಕಾರಿಯಾಗಿ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನನಗೆ ಚಾರಿತ್ರ್ಯ ಹನನದಿಂದ ನೋವಾಗಿದೆ. ಸೌಜನ್ಯಾ ಧರ್ಮಸ್ಥಳ ಗ್ರಾಮದ ಮಗು ಎಂದು ನಾವು ಭಾವಿಸಿದ್ದೇವೆ. ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಅಪಹರಣದ ಸುದ್ದಿ ತಿಳಿದ ದಿನ ಹುಡುಕಾಡಿ ಎಂದು ನಾನೇ ಸೂಚಿಸಿದ್ದೆ. ಮಾರನೇ ದಿನ ಸೌಜನ್ಯಾಳ ಮೃತ ದೇಹ ದೊರಕಿತು. ಅಂದು ಗೃಹಮಂತ್ರಿ ಅಶೋಕ್‌ಗೆ ಫೋನ್ ಮೂಲಕ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಕಂಡು ಹಿಡಿದು ಶಿಕ್ಷಿಸಲು ಆಗ್ರಹಿಸಿದ್ದೆ. ಅದೇ ದಿನ ಸಂಜೆ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರನ್ನು ಫೋನ್‌ನಲ್ಲಿ ಸಂಪರ್ಕಿಸಿ ಈ ಪ್ರಕರಣದಲ್ಲಿ ಆರೋಪಿ ಯಾರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದೆ. ಅ. 22ರಂದು ಕ್ಷೇತ್ರಕ್ಕೆ ಬಂದಿದ್ದ ಗೃಹಸಚಿವರನ್ನು ಸಾರ್ವಜನಿಕ ಸಭೆಯಲ್ಲಿ ಈ ಪ್ರಕರಣವನ್ನು ಸಿ.ಒ.ಡಿ.ಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದೆ ಎಂದು ಹೇಳಿದರು.
ನ. 16ರಂದು ಪತ್ರಿಕಾ ಪ್ರಕಟನೆ ನೀಡಿ ಸೌಜನ್ಯಾ ಕೊಲೆ ಪ್ರಕರಣವನ್ನು ಸಾಕ್ಷಿ ನಾಶವಾಗುವ ಮೊದಲೇ ಸಿ.ಬಿ.ಐ ತನಿಖೆಗೆ ಒಪ್ಪಿಸಬೇಕೆಂದು ಸರಕಾರವನ್ನು ಆಗ್ರಹಿಸಿದ್ದೆ. ಇದಕ್ಕೆ ಸರಕಾರ ತನಿಖೆಯನ್ನು ಸಿಒಡಿಗೆ ವರ್ಗಾಯಿಸಿತ್ತು. ಹಾಗಿದ್ದರೂ ಸಮಾಜದ ಸ್ವಸ್ಥ್ಯಾ ಕೆಡಿಸುವ ಯತ್ನ ಮಾಡಲಾಗುತ್ತಿದೆ ಎಂದರು.
ನಮ್ಮ ಸಹೋದರ ಹರ್ಷೇಂದ್ರನ ಪುತ್ರ ಆ. 21, 2012ರಂದು ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡಲು ತೆರಳಿದ್ದು, ಡಿ. 28, 2012ರಂದು ಊರಿಗೆ ಹಿಂದಿರುಗಿದ್ದಾನೆ. ಈ ಘಟನೆ ನಡೆದಾಗ ಅವನು ನಮ್ಮ ದೇಶದಲ್ಲಿಯೇ ಇರಲಿಲ್ಲ. ಇದಕ್ಕೆ ಸಾಕ್ಷಿಯಾಗಿ ಅಮೆರಿಕ ದಾಖಲಾಗಿ ಮತ್ತು ಅಲ್ಲಿಯೇ ಇರುವ ಪಾಸ್‌ಪೋರ್ಟ್ ದಾಖಲೆಗಳಿವೆ. ಕ್ಷೇತ್ರದಲ್ಲಿ ಇರುವವರಿಗೆ, ಅಷ್ಟೇಕೆ ಸೌಜನ್ಯ ಕುಟುಂಬದವರಿಗೂ ಈ ಮಾಹಿತಿ ಗೊತ್ತಿದ್ದರೂ ಅವರು ಟಿ.ವಿ ಮಾದ್ಯಮದಲ್ಲಿ ನನ್ನ ತಮ್ಮನ ಮಗನ ಹೆಸರು ಸೇರಿಸಿರುವುದು ಕ್ಷೇತ್ರದ ವಿರುದ್ಧ ದೀರ್ಘ ಕಾಲದಿಂದ ನಡೆದು ಬಂದಿರುವ ಒಂದು ವ್ಯವಸ್ಥಿತ ಷಡ್ಯಂತ್ರದ ಭಾಗ ಎಂದು ತಿಳಿಯುತ್ತದೆ ಎಂದರು.
ನ. 16 ಪತ್ರಿಕಾ ಪ್ರಕಟನೆ ನೀಡಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದೆ. ಕ್ಷೇತ್ರದ ವತಿಯಿಂದ ಹಾಗೂ ನಾವು ಆರೋಪಿಗಳನ್ನು ರಕ್ಷಿಸುತ್ತಿದ್ದೇವೆ ಮತ್ತು ತನಿಖೆಗೆ ಒತ್ತಾಯಿಸುತ್ತಿಲ್ಲ ಎನ್ನುವ ಆರೋಪಗಳು ಸುಳ್ಳು. ಆದರೆ ಪ್ರತಿ ಬಾರಿಯೂ ನಾನು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಪತ್ರಿಕಾ ಮಾದ್ಯಮಗಳಿಗೆ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸುವ ಪ್ರಯತ್ನ ಮಾಡಿಲ್ಲ. ಏಕೆಂದರೆ ಸೌಜನ್ಯಾಳನ್ನು ಮಗಳಂತೆ ಪರಿಗಣಿಸಿದ್ದು, ಇದನ್ನು ಲಾಭಕ್ಕಾಗಿ ಯಾ ಪ್ರಚಾರಕ್ಕಾಗಿ ಬಳಸುವ ಕೀಳು ಪ್ರಯತ್ನ ಮಾಡುವ ವ್ಯಕ್ತಿತ್ವ ನಮ್ಮದಲ್ಲ. ಈ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ದೊರೆಯಬೇಕು ಎಂಬುದರ ಬಗ್ಗೆ ನಾನು ಬಹಳಷ್ಟು ಪ್ರಯತ್ನ ಪಟ್ಟಿದ್ದೇನೆ, ಕಳಕಳಿ ಹೊಂದಿದ್ದೇನೆ. ಆರೋಪಿಗಳು ಯಾರೇ ಇದ್ದರೂ ತತ್‌ಕ್ಷಣ ಬಂಧಿಸಿ ತನಿಖೆ ನಡೆಸಿ ಎಂದರು.
ವಿಮಾ ಸೌಲಭ್ಯವನ್ನು ಒದಗಿಸಲು ಅನುಕೂಲವಾಗುವಂತೆ ಮರಣೋತ್ತರ ಪರೀಕ್ಷಾ ವರದಿಯನ್ನು ಕೊಡಿ ಎಂದು ಕುಟುಂಬದ ಜಗದೀಶ್ ಗೌಡರಿಗೆ ಎರಡು ಬಾರಿ ಕಾಲೇಜು ವತಿಯಿಂದ ಕೇಳಿದ್ದರೂ ಇದುವರೆಗೆ ಅವರು ಇದಕ್ಕೆ ಸ್ಪಂದಿಸಿರುವುದಿಲ್ಲ. ಆದರೆ ಈಗ ಇದಕ್ಕೆ ಕಾಲೇಜಿನ ಸಹಕಾರ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕಾಲೇಜಿನ ಸ್ಪಂದನವೇ ಇಲ್ಲ ಎಂದು ಸುಳ್ಳು ಬಿಂಬಿಸಲಾಗಿದೆ ಎಂದರು.
ಈ ಪ್ರಕರಣ ಮುಂದಿಟ್ಟುಕೊಂಡು ಕಳೆದ ಒಂದು ವರ್ಷದಲ್ಲಿ ಕೆಲವು ಜನರಿಂದ ನಮ್ಮ ಮೇಲೆ ನಿರಂತರ ಮಾನಸಿಕ ಹಿಂಸೆ ನಡೆದಿದೆ. ಇದರ ಪರಾಕಾಷ್ಠೆ ಎಂಬಂತೆ ಈಗ ದುಃಖೀತರಾಗಿರುವ ಸೌಜನ್ಯಾ ಕುಟುಂಬದವರನ್ನು ಸೇರಿಸಿಕೊಂಡು ಮಾತನಾಡಿದವರು ಬಳಸಿದ ಭಾಷೆ, ನಿರೂಪಣೆ ಪ್ರಕರಣದ ಉದ್ದೇಶ ಸಾಧನೆಗಿಂತ, ಕ್ಷೇತ್ರವನ್ನು ಅವಮಾನಿಸುವುದೇ ಮೂಲ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಸೌಜನ್ಯಾ ಮತ್ತು ಅವರ ಕುಟುಂಬದ ಎಲ್ಲ ಬಂಧುಗಳು ಶ್ರೀ ಕ್ಷೇತ್ರದಲ್ಲಿ ನಮ್ಮೆಲ್ಲರ ಆತ್ಮೀಯರು ಎಂಬ ಭಾವನೆ ನಮಗೆ ಇತ್ತು. ಆದರೆ ಪ್ರಕರಣದ ಮೂಲ ಉದ್ದೇಶವನ್ನೇ ಬಿಟ್ಟು ಕ್ಷೇತ್ರದ ಮೇಲೆ ಲಂಗು ಲಗಾಮಿಲ್ಲದೆ ಮಾಡಿದ ಟೀಕೆಗಳು, ಸುಳ್ಳು ಆರೋಪಗಳು, ಅಪಪ್ರಚಾರಗಳು, ನಮ್ಮನ್ನು ಕ್ಷೇತ್ರದ ಸಿಬ್ಬಂದಿಗಳನ್ನು, ಕ್ಷೇತ್ರದೊಡನೆ ಒಡನಾಟವಿರುವ ಸಂಘ ಸಂಸ್ಥೆಗಳವರಿಗೂ ಮತ್ತು ಎಲ್ಲ ಭಕ್ತಾದಿಗಳಿಗೂ ಅತೀವ ನೋವುಂಟು ಮಾಡಿದೆ. ಸತ್ಯದ ಪರ ಹೋರಾಟವಾದರೆ ವಿಜಯೋತ್ಸವದ ಅಗತ್ಯ ಇಲ್ಲ. ಚಾರಿತ್ರ್ಯ ಹನನನೇ ಉದ್ದೇಶವಾದ ಕಾರಣ ವಿಜಯೋತ್ಸವ ಮಾಡಲಾಗಿದೆ ಎಂದರು.
ಕ್ಷೇತ್ರದ ಭೂಮಿ, ಹಣಕಾಸಿನ ವ್ಯವಹಾರಗಳು ಪಾರದರ್ಶಕವಾಗಿವೆ. ಗ್ರಾಮಾಭಿವೃದ್ಧಿ ಯೋಜನೆಯ ಸಾಲ ಕೂಡ ನಿಯಮ ಬದ್ಧವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕ್ಷೇತ್ರದಿಂದ ನಡೆಸಲ್ಪಡುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಮಾಡಿರುವ ಎಲ್ಲ ಆರೋಪಗಳು ಕ್ಷೇತ್ರದ ಕಾರ್ಯಕ್ರಮಗಳು ಹಿನ್ನಡೆ ಕಾಣಲಿ ಎಂಬ ಉದ್ದೇಶದಿಂದಲೇ ಮಾಡಲಾಗಿದೆ ಎಂಬುದು ಸ್ಪಷ್ಟ.
ಕ್ಷೇತ್ರದಲ್ಲಿ ಎಲ್ಲ ವ್ಯವಹಾರಗಳಲ್ಲಿಯೂ ಪಾರದರ್ಶಕತೆ ಇದೆ. ಇಲ್ಲಿ ಯಾವುದೇ ರೀತಿಯ ಭಯ, ಭೀತಿ, ಒತ್ತಡದ ವಾತಾವರಣ ಇಲ್ಲ. ಕ್ಷೇತ್ರದಲ್ಲಿರುವ ಶಿಸ್ತು ಕೀರ್ತಿ ತಂದಿದೆ ಮತ್ತು ಮಾದರಿಯಾಗಿದೆ. ಕಳೆದ ಎರಡು ದಶಕಗಳಿಂದ ಕ್ಷೇತ್ರದ ಎಲ್ಲ ಕಾರ್ಯಕ್ರಮಗಳ ಕುರಿತು ಟೀಕೆ ಮಾಡುತ್ತಿದ್ದ ಕೆಲ ವ್ಯಕ್ತಿಗಳು ಸೇರಿಕೊಂಡು, ಈ ಪ್ರಕರಣವನ್ನು ಬಳಸಿ ಪ್ರಸ್ತುತ ಮಾಡಿರುವ ಮಾನ ಹಾನಿಯ ಪ್ರಯತ್ನಗಳು ಕಳೆದ ಐದು ದಶಕದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನಾನು ಮಾಡಿರುವ ದೀರ್ಘ ಕಾಲದ ಸೇವೆಯನ್ನು ಅವಮಾನಿಸಿದಂತಾಗಿದೆ. ಆದರೆ ಧೈರ್ಯ ಕುಂದಿಲ್ಲ, ನಮಗೆ ಹಿನ್ನಡೆಯಾಗಿಲ್ಲ. ನಮ್ಮ ಶಕ್ತಿಗಳು ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದ ಸಾಧನೆಯ ಪರಿವರ್ತನೆಗೆ ಬಳಕೆಯಾಗಿದೆ ಎಂದರು.
ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತನಿಖೆ ನಡೆಸಬಹುದು, ಧರ್ಮಸ್ಥಳ ಉಜಿರೆ ಪರಿಸರದಲ್ಲಿ ಕಳೆದ 10 ವರ್ಷಗಳಲ್ಲಿ ನಡೆದ 430 ಅಸಹಜ ಸಾವಿನ ಪ್ರಕರಣಗಳ ತನಿಖೆಯನ್ನು ಬೇಕಾದರೂ ನಡೆಸಬಹುದು ಎಂದು ಅವರು ಹೇಳಿದರು.
ವೀಡಿಯೊ
Click this button or press Ctrl+G to toggle between Kannada and English