- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ವರ್ಧಂತ್ಯುತ್ಸವ

hegde [1]ಧರ್ಮಸ್ಥಳ : ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ 46ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭ ಗುರುವಾರ ನೆರವೇರಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು  ಮಾತನಾಡಿ ಅಧುನಿಕ ಜಗತ್ತಿನಲ್ಲಿ ಎಷ್ಟೇ ಪರಿವರ್ತನೆಗಳಾದರೂ ನಮ್ಮ ಮೂಲ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಮಾಡಬೇಕು. ಈಗ ಜನರಲ್ಲಿ ಧಾರ್ಮಿಕತೆ, ಭಕ್ತಿ ಮತ್ತು ಶ್ರದ್ಧೆ ಹೆಚ್ಚಾಗಿದ್ದು, ಅನೇಕ ದೇವಾಲಯಗಳ ಹಾಗೂ ಶ್ರದ್ಧಾ ಕೇಂದ್ರಗಳ ಜೀರ್ಣೋದ್ಧಾರವಾಗಿ ಸಾನಿಧ್ಯ ವೃದ್ಧಿಯಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ಮೂಲಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯೇ ದೇವರ ಸೇವೆಯಾಗಿದೆ ಎಂದು  ಹೇಳಿದರು.

ಅಕ್ಟೋಬರ್ 24, 1968ರಂದು ಶ್ರೀಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಡಾ. ವೀರೇಂದ್ರ ಹೆಗ್ಗಡೆ ಅವರು ಅಧಿಕಾರವಹಿಸಿಕೊಂಡಿದ್ದರು. ಧರ್ಮಸ್ಥಳದ ಯಕ್ಷಗಾನ ಮೇಳದಲ್ಲಿ ಈ ವರ್ಷದಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಅವರು ಪ್ರಕಟಿಸಿದರು.

ಧರ್ಮಸ್ಥಳದಲ್ಲಿ ಈ ವರ್ಷದಲ್ಲಿ ಕ್ಯೂ ಕಾಂಪ್ಲೆಕ್ಸ್ ರಚನೆ, ಉಜಿರೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ನೂತನ ಕಟ್ಟಡ, ಎರಡು ಹೊಸ ವಿದ್ಯಾರ್ಥಿ ನಿಲಯಗಳು ಹಾಗೂ ಹಾಸನದಲ್ಲಿ ಆಯುರ್ವೇದ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು. ಧರ್ಮಸ್ಥಳವು ಧಾರ್ಮಿಕ ಹಿನ್ನೆಲೆ ಇರುವ ಕ್ಷೇತ್ರವಾಗಿದ್ದು, ಭಕ್ತರು ಇಲ್ಲಿ ಭಗವಂತನನ್ನು ಹತ್ತಿರದಿಂದ ಸ್ಪರ್ಶಿಸಿ ಅನುಗ್ರಹ ಪಡೆದುಕೊಳ್ಳಬಹುದು ಎಂದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಹೆಗ್ಗಡೆಯವರು ಪ್ರಚಾರಕ್ಕಾಗಿ ಸೇವೆ ಮಾಡುವ ವರಲ್ಲ. ಸಮಾಜಮುಖಿಯಾಗಿ ಮಾತೃ ಹೃದಯದಿಂದ ಅವರು ಮಾಡಿದ ಬಹುಮುಖಿ ಸಮಾಜಸೇವೆಯಿಂದ ಪ್ರಚಾರ ಪಡೆದವರು. ಅವರ ವಿಶಾಲ ಮನೋಭಾವ, ಸೇವಾ ಕಳಕಳಿ, ವಿಶಿಷ್ಟ ಕಾರ್ಯವೈಖರಿ ರಾಷ್ಟ್ರಕ್ಕೇ ಮಾದರಿ ಎಂದರು.

ಈ ಸಂದರ್ಭ ಧರ್ಮಸ್ಥಳದ ಹಿರಿಯ ನೌಕರರನ್ನು ಹೆಗ್ಗಡೆಯವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆ, ಪ್ರೊ.ಎಸ್. ಪ್ರಭಾಕರ್, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಡಾ.ಬಿ. ಯಶೋವರ್ಮ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.