- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕುದ್ರೋಳಿ ದೇವಸ್ಥಾನದಲ್ಲಿದ್ದ ಮಹಿಳಾ ಅರ್ಚಕಿಯರು ನಾಪತ್ತೆ

Mahila Archakiyaru [1]ಮಂಗಳೂರು : ಕುದ್ರೋಳಿ ದೇಗುಲದಲ್ಲಿ ಮಹಿಳಾ ಅರ್ಚಕಿಯರಾಗಿ ನೇಮಕಗೊಂಡಿದ್ದ ಇಬ್ಬರು ವಿಧವೆಯರು  ಕಳೆದ ಒಂದು ವಾರದಿಂದ ದೇವಸ್ಥಾನದ ಆವರಣದಲ್ಲಿ ಕಾಣಿಸುತ್ತಿಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಕ ಮಾಡುವ ಮೂಲಕ ದೊಡ್ಡ ಕ್ರಾಂತಿ ಮಾಡಿದ್ದೇನೆ ಎಂದು ಹೇಳಿದ್ದ ಜನಾರ್ದನ ಪೂಜಾರಿ ಇದರಿಂದ ಸಾಕಷ್ಟು ಮುಖಭಂಗ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಹಲವಾರು ಮಂದಿ ಪತ್ರಿಕೆಗೆ ಮಾಹಿತಿ ನೀಡಿದ್ದು, ದೇವಸ್ಥಾನದಲ್ಲಿ ಮಹಿಳಾ ಅರ್ಚಕಿಯರು ಕಾಣಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಈವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.

ವಿಧವೆಯರಿಗೆ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ವಿಧವೆಯರಿಗೆ ಅರ್ಚಕ ಸ್ಥಾನ ನೀಡಿದ್ದೇನೆ ಎಂದು ಪೂಜಾರಿ ಹೇಳಿಕೆ ನೀಡಿದ್ದರು. ಇದರಿಂದಾಗಿ ದೇಶದಲ್ಲೆಡೆ ಪರ-ವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆದಿತ್ತಲ್ಲದೆ ಮಾಧ್ಯಮಗಳೂ ಸಹ ಪೂಜಾರಿ ನಿರ್ಧಾರವನ್ನು ಕ್ರಾಂತಿ ಎಂದು ಬಣ್ಣಿಸಿತ್ತು.

ಲಕ್ಷ್ಮಿ ಶಾಂತಿ ಮತ್ತು ಇಂದಿರಾ ಶಾಂತಿ ಇವರಿಬ್ಬರು ಅ.6ರಿಂದ ದೇವಳದ ಪ್ರಧಾನ ದೇವರಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಂದ ದೇವರ ತೀರ್ಥ, ಪ್ರಸಾದವನ್ನು ವಿತರಿಸಲು ಪೂಜಾರಿ ಅವಕಾಶ ಕಲ್ಪಿಸಿದ್ದರು. ಆದರೆ ಸ್ವಲ್ಪ ದಿನದ ನಂತರ ದತ್ತಾತ್ರೇಯ, ಸಾಯಿಬಾಬ ಮತ್ತು ನಾರಾಯಣ ಗುರುಗಳ ಮೂರ್ತಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಅವರು ಕಳೆದ ಒಂದು ವಾರದಿಂದ ದೇವಸ್ಥಾನದ ಆವರಣದಲ್ಲಿ ಕಾಣಿಸದೇ ಇರುವುದರಿಂದ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.

ವಿಧವಾ ಅರ್ಚಕಿಯರನ್ನು ನೇಮಕ ಮಾಡುವ ಬಗ್ಗೆ ಜನಾರ್ದನ ಪೂಜಾರಿ ದೇವಸ್ಥಾನದ ಮೂಲ ಅರ್ಚಕವೃಂದದ ಜೊತೆ ಚರ್ಚೆ ನಡೆಸದೆ ಏಕಾಏಕಿ ಈ ನಿರ್ಧಾರವನ್ನು ಕೈಗೊಂಡಿದ್ದರು ಎಂದು ಮೂಲಗಳು ಪತ್ರಿಕೆಗೆ ಮಾಹಿತಿ ನೀಡಿದ್ದು ಪೂಜಾರಿ ಈ ನಿರ್ಧಾರ ಮೂಲ ಅರ್ಚಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದಾಗಿ ದೇವಸ್ಥಾನದ ಅರ್ಚಕ ವೃಂದ ಮಹಿಳಾ ಅರ್ಚಕಿಯರಿಗೆ ಅಸಹಕಾರ ನೀಡುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೆ ಅರ್ಚಕಿಯರಿಗೆ ದೇವಸ್ಥಾನದ ಸಾಂಪ್ರದಾಯ, ಪೂಜಾ ವಿಧಾನ ಮತ್ತು ಮಂತ್ರೋಚ್ಛಾರ, ಪೂಜಾ ವಿಧಿವಿಧಾನ, ಆಗಮಾದಿಶಾಸ್ತ್ರ ಇತ್ಯಾದಿಗಳನ್ನು ಅವರಿಗೆ ಕಲಿಸಲಾಗಿರಲಿಲ್ಲ. ಈ ಅಂಜಿಕೆಯಿಂದ ಇವರಿ ಬ್ಬರು ದೇವಸ್ಥಾನವನ್ನು ತೊರೆದಿರಬಹುದು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅರ್ಚಕಿಯರು ದೇವಸ್ಥಾನಕ್ಕೆ ಆಗಮಿಸುವರೇ ಇಲ್ಲವೇ ಎಂಬುದು ನಿಗೂಢವಾಗಿ ಉಳಿದಿದೆ.