ಪಾಲೆಂ: ಆಂಧ್ರಪ್ರದೇಶ ಮಹಬೂಬನಗರ ಜಿಲ್ಲೆ ಪಾಲೆಂ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ಜಬ್ಬಾರ್ ಟ್ರಾವೆಲ್ಸ್‌ನ ವೋಲ್ವೊ ಬಸ್ಸ್ ಗೆ ಬೆಂಕಿ ಹೊತ್ತಿಕೊಂಡು 44 ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ.
ಇದು 44ನೇ ರಾಷ್ಟ್ರೀಯ ಹೆದ್ದಾರಿ. ಕಾಕತಾಳಿಯ ಎಂಬಂತೆ ಮೃತರ ಸಂಖ್ಯೆ ಕೂಡ 44. ಬಸ್‌ನಲ್ಲಿದ್ದ 51 ಜನರಲ್ಲಿ ಚಾಲಕ, ಕ್ಲೀನರ್ ಸೇರಿ 7 ಜನ ಮಾತ್ರ ಬದುಕುಳಿದಿದ್ದಾರೆ. ಇವರಲ್ಲಿ ತೀವ್ರವಾಗಿ ಗಾಯಗೊಂಡ ಐವರನ್ನು ಹೈದರಾಬಾದ್‌ನ ಅಪೊಲೊ ಸಂಸ್ಥೆಯ ಸೇನಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ದೇಹಗಳು ಗುರುತಿಸಲಾಗದಷ್ಟು ಸುಟ್ಟಿದ್ದವು. ಹೀಗಾಗಿ ಬುಧವಾರ ಸಂಜೆಯವರೆಗೆ ಬಹಳಷ್ಟು ಶ್ರಮಪಟ್ಟ ನಂತರ ಕೇವಲ 4 ದೇಹಗಳ ಗುರುತು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಯಿತು. ಮೃತರಲ್ಲಿ ಕರ್ನಾಟಕ, ಆಂಧ್ರ, ಉತ್ತರ ಪ್ರದೇಶವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 6 ವರ್ಷದ ಮಗು ಕೂಡ ಇದರಲ್ಲಿ ಸೇರಿದೆ.
ಬೆಳಗಿನ 5 ಗಂಟೆ ಸುಮಾರಿಗೆ ಈ ದುರ್ದೈವಿ ಬಸ್‌ನ ಬಲಭಾಗ ಹೆದ್ದಾರಿ ಮೇಲಿನ ಸೇತುಗಾಲುವೆಯ ಸಿಮೆಂಟ್ ತಡೆಗೋಡೆಯನ್ನು ಬಲವಾಗಿ ಉಜ್ಜಿತು. ಇದರಿಂದ ಡೀಸೆಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿತು. ಬೆಂಕಿಯು ಕ್ಷಣಾರ್ಧದಲ್ಲಿ ಇಡೀ ಬಸ್ಸನ್ನೇ ವ್ಯಾಪಿಸಿತು. ಸವಿ ನಿದ್ದೆಯಲ್ಲಿದ್ದವರು ಬಸ್‌ನಿಂದ ಹೊರ ಬರಲು ಸಾಧ್ಯವಾಗಲೇ ಇಲ್ಲ.
ಡಿಎನ್‌ಎ ಪರೀಕ್ಷೆ: ಕರಕಲಾಗಿದ್ದ ಶವಗಳನ್ನು ಘಟನಾ ಸ್ಥಳದ ಪಕ್ಕದ ಹೊಲದಲ್ಲಿ ಶಾಮಿಯಾನ ಹಾಕಿ ಇಡಲಾಗಿತ್ತು. ರಾತ್ರಿ ಹೈದರಾಬಾದ್‌ನ ನಾಂಪಲ್ಲಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮರಣೋತ್ತರ ಹಾಗೂ ಡಿಎನ್ಎ ಪರೀಕ್ಷೆಗೆ ಸಾಗಿಸಲಾಯಿತು.
ಘಟನಾ ಸ್ಥಳಕ್ಕೆ ರೋದಿಸುತ್ತಲೇ ಬರುತ್ತಿದ್ದ ಸಂಬಂಧಿಕರು ಮೃತ ದೇಹಗಳ ರಾಶಿ ಕಂಡು ದಿಕ್ಕು ತೋಚದೇ ನೆಲಕ್ಕೊರ ಗುವುದು, ಎದುರಿಗೆ ಇದ್ದವರ ಮೇಲೆ ಅಸಹಾಯಕತೆಯಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಮನಕಲ ಕು ವಂತಿತ್ತು. ತಮ್ಮ ಕುಟುಂಬದ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾ ದರೂ ಮೃತ ದೇಹ ಗುರುತಿಸಲು ಆಗದೇ ಸಂಕಟಪಡುತ್ತಿದ್ದರು.
ನಾಲ್ವರ ಗುರುತು ಮಾತ್ರ ಪತ್ತೆ: ಮಹಬೂಬನಗರದ ಪರಿಶಿಷ್ಟ ಜಾತಿ ಪ್ರಕರಣಗಳ ಕೋರ್ಟ್‌ನ ನ್ಯಾಯಾಧೀಶ ಮೋಹನರಾವ್ ಅವರ ಪುತ್ರಿ ಪ್ರಿಯಾಂಕಾ (ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್), ನಿಜಾಮಾಬಾದ್ ಜಿಲ್ಲೆಯ ಕುಸಮಾ ವೇದಪತಿ, ಹೈದರಾಬಾದ್‌ನ ಉಪ್ಪಳ ಪ್ರದೇಶದ ನಿವಾಸಿ ದಿನೇಶ ರಾಮರಾಜ್ ಹಾಗೂ ಆಶ್ವಿನಿ ಎಂಬುವವರ ಗುರುತು ಪತ್ತೆಯಾಗಿದೆ ಎಂದು ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಉಂಗುರು, ಬ್ರಾಸ್ಲೆಟ್, ಪ್ಯಾನ್ ಕಾರ್ಡ್, ಬ್ಯಾಗ್‌ನಿಂದ ಈ ಗುರುತು ಪತ್ತೆಯಾಗಿದೆ. ಸಂಬಂಧಿಕರು ಮೃತ ದೇಹದ ಮೇಲಿದ್ದ ಈ ವಸ್ತುಗಳನ್ನು ಗುರುತಿಸಿ ತಮ್ಮವರು ಎಂದು ಹೇಳಿದ್ದಾರೆ. ಆದರೂ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್‌ಎ ಪರೀಕ್ಷೆ ಬಳಿಕ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ಹಾಗೂ ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಮಾಧ್ಯಮದವರಿಗೆ ಸ್ಪಷ್ಟಪಡಿಸಿದರು.
ಆಂಧ್ರಪ್ರದೇಶ ವಾರ್ತಾ ಸಚಿವೆ ಡಿ.ಕೆ ಅರುಣಾ ಸ್ಥಳದಲ್ಲಿದ್ದು ಉಸ್ತುವಾರಿ ನೋಡಿಕೊಂಡರು. ರಾಯಚೂರು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು, ಆಂಧ್ರ ಡಿಜಿಪಿ ನವೀನ್ ಚಂದ್, ಐಜಿ ರಾಜೇಂದ್ರರೆಡ್ಡಿ, ಸಾರಿಗೆ ಅಧಿಕಾರಿಗಳು, ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ನಾಗರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ ಮುಂತಾದವರು ಕೂಡ ಸ್ಥಳದಲ್ಲಿದ್ದರು.
ಮೃತರ ಕುಟುಂಬಕ್ಕೆ ತಲಾ ರೂ.1 ಲಕ್ಷ ಪರಿಹಾರ: ಬಸ್ ಅಗ್ನಿ ಆಕಸ್ಮಿಕ ಘಟನೆಯಲ್ಲಿ ಸಾವನ್ನಪ್ಪಿದ 44 ಪ್ರಯಾಣಿಕರ ಕುಟುಂಬ ವರ್ಗದವರಿಗೆ ತಲಾ ರೂ.1 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಚಿವೆ ಡಿ.ಕೆ ಅರುಣಾ ಹೇಳಿದರು.
Click this button or press Ctrl+G to toggle between Kannada and English