- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ನಕ್ಸಲರ ಹೆಜ್ಜೆಗುರುತು

Belthangady [1]ಬೆಳ್ತಂಗಡಿ :  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರಿನಲ್ಲಿ ರಾಮಚಂದ್ರ ಭಟ್‌ ಎಂಬುವವರ ಮನೆಗೆ ಭೇಟಿ ನೀಡಿದ ನಕ್ಸಲರ ತಂಡವು ಅಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರು ಮತ್ತು ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಇಂದು ಮುಂಜಾನೆ ಸುಮಾರು 2 ಗಂಟೆ ಹೊತ್ತಿಗೆ ನಡೆದಿದೆ.

ಪಂಚಾಯತ್‌ ಸದಸ್ಯರಾಗಿರುವ ರಾಮಚಂದ್ರ ಭಟ್‌ ಅವರು ಪೊಲೀಸ್‌ ಮಾಹಿತಿದಾರರೆಂಬ ಶಂಕೆಯಲ್ಲಿ ನಕ್ಸಲರು ಈ ಕೃತ್ಯ ಎಸಗಿರಬೇಕೆಂದು ಅನುಮಾನಿಸಲಾಗುತ್ತಿದೆ. ಮನೆ ಆವರಣವನ್ನು ಪ್ರವೇಶಿಸಿದ ಸುಮಾರು 10 – 20 ಜನರಷ್ಟಿದ್ದ ಶಸ್ತ್ರಸಜ್ಜಿತ ನಕ್ಸಲರ ತಂಡವು ಮನೆ ಬಾಗಿಲು ತೆರೆಯುವಂತೆ ಒತ್ತಾಯಿಸಿದೆ. ಇದಕ್ಕೆ ಮನೆ ಒಳಗಿದ್ದ ರಾಮಚಂದ್ರ ಭಟ್‌ ಮತ್ತು ಮನೆಯ ಇತರೆ ಸದಸ್ಯರು ಪೂರಕವಾಗಿ ಸ್ಪಂದಿಸದೇ ಇದ್ದಾಗ ಅಲ್ಲೇ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಅಮ್ನಿ ಕಾರು, ಬೈಕ್‌ ಮತ್ತು ಶೆಡ್‌ಗೆ ಬೆಂಕಿ ಹಚ್ಚಿದ ನಕ್ಸಲರ ತಂಡವು ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮೂಲಗಳಿಂದ ತಿಳಿದುಬಂದಿರುವ ಪ್ರಕಾರ ರಾಮಚಂದ್ರ ಭಟ್‌ ಅವರು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರಿಗೆ ಆಪ್ತರಾಗಿದ್ದು, ಅರಣ್ಯವಾಸಿಗಳ ಪುನರ್ವಸತಿ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಮತ್ತು ಅರಣ್ಯವಾಸಿಗಳು ಸರಕಾರದಿಂದ ತಮಗೆ ಸಿಗುವ ಸವಲತ್ತುಗಳನ್ನು ನೇರವಾಗಿ ಪಡೆದುಕೊಳ್ಳುವಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು.

ವಿಷಯ ತಿಳಿಯುತ್ತಿದ್ದಂತೆಯೆ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಪ್ರತಾಪ್‌ ರೆಡ್ಡಿ, ಎಸಿಪಿ ಶಂತನು, ನಕ್ಸಲ್‌ ನಿಗ್ರಹದಳದ ಮುಖ್ಯಸ್ಥ ಸೀಮಂತ್‌ ಕುಮಾರ್‌ ಸಿಂಗ್‌ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೇಣೂರು ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.