- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶ

Srikantadatta Narasimharaja Wodeyar [1]

ಬೆಂಗಳೂರು : ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಮಂಗಳವಾರ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ಎದೆನೋವಿನ ಕಾರಣ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಮಹಾರಾಜರನ್ನು ಕರೆ ತರಲಾಗಿತ್ತು. ಆಸ್ಪತ್ರೆಗೆ ಬರುವಷ್ಟರಲ್ಲೇ ಒಡೆಯರ್ ಅವರು ವಿಧಿವಶರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿರುವ ತುರ್ತು ನಿಗಾ ಘಟಕದಲ್ಲಿ ಒಡೆಯರ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದೆ. ಒಡೆಯರ್ ಅವರ ಪಾರ್ಥೀವ ಶರೀರವನ್ನು ಬುಧವಾರ ಬೆಳಗ್ಗೆ ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ ಹಾಗೂ ಸಂಜೆ ವೇಳೆಗೆ ನಂಜನಗೂಡು ರಸ್ತೆಯಲ್ಲಿರುವ, ರಾಜಮನೆತನಕ್ಕಾಗಿಯೇ ಮೀಸಲಿರುವ ಮಧುವನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಅರಮನೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರು ತಿಳಿಸಿದ್ದಾರೆ.

1953ರ ಫೆಬ್ರುವರಿ 20ರಂದು ಜನಸಿದ್ದ ಒಡೆಯರ್ 1974ರಲ್ಲಿ ಮೈಸೂರು ಮಹಾರಾಜರಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. 1976ರ ಫೆಬ್ರವರಿ 2 ರಂದು ಪ್ರಮೋದಾ ದೇವಿ ಅವರನ್ನು ಮದುವೆಯಾಗಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಗಿ ಮೈಸೂರು ಮಹಾರಾಜರಾಗಿದ್ದರು. ನಾಲ್ಕು ಬಾರಿ ಸಂಸದರಾಗಿದ್ದರು. ಇತ್ತೀಚೆಗೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಪತ್ನಿ ಪ್ರಮೋದಾದೇವಿ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಒಡೆಯರ್ ಅವರು ಅಗಲಿದ್ದಾರೆ.

ಶ್ರೀಕಂಠದತ್ತ ಒಡೆಯರ್ ಅವರು ಎಂ.ಎ(ರಾಜ್ಯಶಾಸ್ತ್ರ) ಹಾಗೂ ಎಲ್ಎಲ್ ಬಿ ಪದವಿ ಪಡೆದಿದ್ದರು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

ಶ್ರೀಕಂಠದತ್ತ ಅವರು ಪಾಶ್ಚಿಮಾತ್ಯ ಸಂಗೀತದಲ್ಲಿ ಪದವಿ. ಲಂಡನ್ನಿನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ನಿಂದ ಮೆರಿಟ್. ಫ್ಯಾಷನ್ ಡಿಸೈನರ್ ಆಗಿ ಮೈಸೂರು ರೇಷ್ಮೆ ಸೀರೆಗಳ ಪ್ರಚಾರಕರಾಗಿದ್ದರು. ರಾಯಲ್ ಸಿಲ್ಕ್ ಆಫ್ ಮೈಸೂರು ಬ್ರಾಂಡ್ ಅಡಿಯಲ್ಲಿ ತಮ್ಮ ವಿನ್ಯಾಸವನ್ನು ಲೋಕಕ್ಕೆ ಪರಿಚಯಿಸುತ್ತಿದ್ದರು.

ಮೈಸೂರಿನಲ್ಲಿರುವ ಜಯಚಾಮರಾಜೇಂದ್ರ ಕಲಾ ಗ್ಯಾಲರಿ, ಲಕ್ಷಮ್ಮ ಅಮ್ಮಣಿ ಶಿಕ್ಷಣ ಟ್ರಸ್ಟ್,ಯುವರಾಮಿ ಕೆಂಪುಚೆಲೊ ವಜಾಮ್ಮ ಶಿಕ್ಷಣ ಟ್ರಸ್ಟ್, ಜಯಚಾಮರಾಜೇಂದ್ರ ಶಿಕ್ಷಣ ಟ್ರಸ್ಟ್ ಗಳ ಚೇರ್ಮನ್ ಆಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಲೆಕ್ಚರರ್ ಆಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.

ವಿಶಿಷ್ಟವಾದ ಕಲಾಕೃತಿಗಳು, ವಾಚುಗಳು, ಹೊಸ ಹೊಸ ಕಾರುಗಳನ್ನು ಕೊಳ್ಳುವ ಕ್ರೇಜ್ ಒಡೆಯರ್ ಅವರಿಗಿತ್ತು. ಕ್ರಿಕೆಟ್ ಆಟವನ್ನು ಪ್ರೀತಿಸುತ್ತಿದ್ದ ಒಡೆಯರ್ ಅವರು ಡಿ.1 ರಂದು ನಡೆದ ಕೆಎಸ್ ಸಿಎ ಚುನಾವಣೆಯಲ್ಲಿ ಅನಿಲ್ ಕುಂಬ್ಳೆ ಬೆಂಬಲಿತ ಮಯ್ಯ ಬಣವನ್ನು ಸೋಲಿಸಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದರು. ಕ್ರಿಕೆಟ್ ಅಲ್ಲದೆ ಮೈಸೂರು ರೇಸ್ ಕ್ಲಬ್, ಬೆಂಗಳೂರು ಗಾಲ್ಫ್ ಕ್ಲಬ್, ಬೆಂಗಳೂರು ಟರ್ಫ್ ಕ್ಲಬ್, ದೆಹಲಿ ರೇಸ್ ಕ್ಲಬ್ ನ ಜತೆ ನಿರಂತರ ಸಹಯೋಗ ಹೊಂದಿದ್ದರು.

ಉದ್ಯಮಿಯಾಗಿ ಒಡೆಯರ್ ಹೂಡಿಕೆ ಸಂಸ್ಥೆ ಮೈಸೂರು ಅಂತಾರಾಷ್ಟ್ರೀಯ ಟ್ರಾವೆಲ್ ಏಜೆನ್ಸಿ, ಮಂಜುನಾಥ್ ಪ್ಯಾಕಿಂಗ್ ಅಂಡ್ ವರ್ಕ್ಸ್, ಗಾಯತ್ರಿ ಎಂಟರ್ ಪ್ರೈಸಸ್, ಸರಸ್ವತಿ ಎಂಟರ್ ಪ್ರೈಸಸ್ , ವೆಂಕಟೇಶ್ವರ ರಿಯಲ್ ಎಸ್ಟೇಟ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಹಾಗೂ ಚೇರ್ಮನ್ ಆಗಿದ್ದರು,

2004ರಲ್ಲಿ ಕಾಂಗ್ರೆಸ್ ಸಂಸದರಾಗಿದ್ದಾಗ ಅವರ ಘೋಷಿತ ಆಸ್ತಿ 1,522 ಕೋಟಿ ರು ಇತ್ತು. 1984, 1989, 1996, 1999ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಮೈಸೂರು ಅರಮನೆ, ಬೆಂಗಳೂರು ಅರಮನೆ, ಲೋಕರಂಜನ್ ಮಹಲ್, ಚಾಮುಂಡಿ ಬೆಟ್ಟದಲ್ಲಿರುವ ರಾಜೇಂದ್ರ ವಿಲಾಸ್ ಅರಮನೆ, ಊಟಿಯಲ್ಲಿರುವ ಫರ್ನ್ ಹಿಲ್ ಅರಮನೆ, ಗನ್ ಹೌಸ್, ಸುರಭಿ ಡೇರಿ, ಚೈತನ್ಯ ಹಾಲ್ ಮುಂತಾದವು ಒಡೆಯರ್ ಒಡೆತನದಲ್ಲಿತ್ತು.

ರಾಜ್ಯದಾದ್ಯಂತ ಎರಡು ದಿನ ಶೋಕಾಚರಣೆ ಆಚರಿಸಲಾಗುತ್ತದೆ. ಡಿ. 11, ಬುಧವಾರ ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. ಮೈಸೂರಿನಲ್ಲಿ ಅಘೋಷಿತ ಬಂದ್ ಆಚರಿಸಲಾಗುತ್ತಿದ್ದು, ಅಂಗಡಿ ಮುಂಗಟ್ಟುಗಳು, ಅರಮನೆ ದ್ವಾರಗಳು ಬಂದ್ ಆಗಿವೆ. ಜನತೆ ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಇಡೀ ಮೈಸೂರಿನಾದ್ಯಂತ ಸೂತಕದ ಛಾಯೆ ಮೂಡಿದೆ.