ಆಳ್ವಾಸ್ ವಿಶ್ವನುಡಿಸಿರಿ: ವಿಶೇಷ ವೇದಿಕೆ, ಭರ್ಜರಿ ಮೆರವಣಿಗೆ

8:24 PM, Friday, December 13th, 2013
Share
1 Star2 Stars3 Stars4 Stars5 Stars
(5 rating, 6 votes)
Loading...
Alvas

ಮೂಡಬಿದಿರೆ : ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ 2013ರ ಉದ್ಘಾಟನೆಗೆ ಸಂಬಂಧಪಟ್ಟಂತೆ ವಿಶೇಷ ತಯಾರಿಗಳು ನಡೆಯುತ್ತಿವೆ. ವಿಶ್ವ ನುಡಿಸಿರಿಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಒಟ್ಟು 9 ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. ಹಾಗೆಯೇ ವಿಶೇಷವಾದ ಜಾನಪದ ಸಾಂಸ್ಕೃತಿಕ ಮೆರವಣಿಗೆಗೆ ಭರ್ಜರಿ ತಯಾರಿಗಳು ನಡೆಯುತ್ತಿವೆ.

ಭರ್ಜರಿ ಮೆರವಣಿಗೆ
ಅಧ್ಭುತ ಜಾನಪದ ಸಾಂಸ್ಕೃತಿಕ ಮೆರವಣಿಗೆಗೆ ವಿಶೇಷ ಮೆರುಗು ಕೊಡುವ ತಯಾರಿಗಳು ನಡೆಯುತ್ತಿವೆ. ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ನ ಮೆರವಣಿಗೆ ಮೂಡುಬಿದಿರೆಯ ಚೌಟರ ಅರಮನೆಯಿಂದ ಹೊರಡಲಿದ್ದು, ಮೆರವಣಿಗೆಯನ್ನು ಜನಪದ ಕಲಾವಿದೆ ನಾಡೋಜ ಸುಕ್ರಿ ಬೊಮ್ಮಗೌಡ ಉದ್ಘಾಟಿಸಲಿದ್ದಾರೆ. ಜಾನಪದಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡಲಿರುವ ಮೆರವಣಿಗೆಯಲ್ಲಿ ಟ್ಯಾಬ್ಲೋಗಳ ಬಳಕೆ ಇಲ್ಲದಿರುವುದು ಇನ್ನೊಂದು ವಿಶೇಷ. ಚೌಟರ ಅರಮನೆಯಿಂದ ಹೊರಡುವ ಮೆರವಣಿಗೆ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಹನುಮಾನ್ ದೇವಸ್ಥಾನದ ಎದುರುಗಡೆ ಸಾಗಿ, ಮೂಡುಬಿದಿರೆ ಪಟ್ಟಣದ ಮೂಲಕ ಬಸ್ಸುನಿಲ್ದಾಣ ಬಳಿಯಾಗಿ ವಿದ್ಯಾಗಿರಿ ಮಾರ್ಗದಲ್ಲಿ ಸಾಗಲಿದೆ.

110ಕ್ಕೂ ಹೆಚ್ಚು ತಂಡಗಳ ಸುಮಾರು 5,000 ಜಾನಪದ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಎಲ್ಲಾ 80 ನುಡಿಸಿರಿ ವಿರಾಸತ್ ಘಟಕಗಳ ಅದ್ಯಕ್ಷರುಗಳು, ಪದಾಧಿಕಾರಿಗಳು, ಊರಿನ ಗಣ್ಯರು ಒಟ್ಟು ಸೇರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಉತ್ಸಾಹ ಭರಿಸಬಹುದಾದಂತಹ ಜನಪದ ಕಲಾತಂಡಗಳ ಪ್ರದರ್ಶನಗಳು ಮೆರವಣಿಗೆಯುದ್ದಕ್ಕೂ ಮೇಳೈಸಲಿವೆ. ಸುಮಾರು 100 ಡೊಳ್ಳುಕುಣಿತದ ಕಲಾವಿದರು, 70 ಕೊರಗರ ಡೋಲು, 40 ಜನ ವೀರಭದ್ರ ಕುಣಿತದ ಕಲಾವಿದರು, ಕಲ್ಲಡ್ಕ ರಮೇಶ್ ಗೊಂಬೆಯಾಟದ 80 ಜನ ಕಲಾವಿದರು, 30 ಅಟಿಕಳೆಂಜಗಳು, 50 ದುಡಿಕುಣಿತ ಕಲಾವಿದರು, ಅಷ್ಟೇ ಸಂಖ್ಯೆಯ ದಫ್, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳ 200ಕ್ಕೂ ಹೆಚ್ಚು ಪಾತ್ರಗಳನ್ನೊಳಗೊಂಡ ರಂಗಭೂಮಿಯ ವಿಶೇಷ ನಡಿಗೆ, 25 ಯಕ್ಷಗಾನದ ವಿವಿಧ ವೇಷಗಳು, 100 ಜನ ಬಂಜಾರ ನೃತ್ಯಗಾರ್ತಿಯರು, 30 ದೇವಸ್ಥಾನದ ತಟ್ಟೀರಾಯ, ಸೋಮನ ಕುಣಿತ, ಹುಲಿವೇಷ, ಕೇರಳದ ದೇವರ ವೇಷಗಳು, ತೆಯ್ಯಂ, ಕಥಕ್ಕಳಿ, ಕೇರಳದ ಮಹಿಳಾ ಚೆಂಡೆ ಬಳಗ, ತ್ರಿವರ್ಣ ಧ್ವಜ ಹಿಡಿದು ಸಾಗುವ 500 ಜನರ ತಂಡ, ಹಾಲಕ್ಕಿ, ಕರಗ, ಶಂಖಧ್ವನಿ, ಕಂಸಾಳೆ, ನಂದಿಧ್ವಜ, ಪಟದ ಕುಣಿತ, ಕೊಡಗಿನ ಉಮ್ಮತ್ತಾಟು, ಕೋಲಾಟ, ಮರಗಾಲು ಕುಣಿತ, ಕಂಗೀಲು, ಶ್ರೀಲಂಕಾದ ಡ್ರಮ್ಸ್ ಹೀಗೆ ಸುಮಾರು 5000 ಕಲಾವಿದರು ಸೇರಿದಂತೆ 7000ದಷ್ಟು ಜನ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ನ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

9 ವೇದಿಕೆಗಳು
ಸಮ್ಮೇಳನದಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ರತ್ನಕರವರ್ಣಿ ವೇದಿಕೆಯಲ್ಲಿ, ವಿಧ್ಯಾರ್ಥಿ ಸಿರಿ ಕಾರ್ಯಕ್ರಮಗಳು ಪಂಜೆ ಮಂಗೇಶರಾಯ ವೇದಿಕೆ, ಜನಪದ ಸಿರಿ ಕಾರ್ಯಕ್ರಮ ನಾಡೋಜ ಎಚ್.ಎಲ್.ನಾಗೇಗೌಡ ವೇದಿಕೆ, ಕೃಷಿ ಸಿರಿ ಕಾರ್ಯಕ್ರಮಗಳು ಪದ್ಮಭೂಷಣ ವರ್ಗೀಸ್ ಕುರಿಯನ್ ವೇದಿಕೆಯಲ್ಲಿ ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವೇದಿಕೆಗಳಲ್ಲಿ ನಡೆಯಲಿದ್ದು ಜೊತೆಗೆ ಆಳ್ವಾಸ್ ವಿರಾಸತ್ ವೇದಿಕೆ, ವಿ.ಎಸ್ ಆಚಾರ್ಯ ವೇದಿಕೆ, ಕೆ.ವಿ.ಸುಬ್ಬಣ್ಣ ರಂಗ ಮಂದಿರ, ಕು.ಶಿ.ಹರಿದಾಸ ಭಟ್ಟ ವೇದಿಕ, ಸಂತ ಭದ್ರಗಿರಿ ಅಚ್ಯುತದಾಸ ವೇದಿಕೆಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English