ಮಂಗಳೂರು : ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರವು ಜಂಟಿಯಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 50 ಕೇಂದ್ರಗಳಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಂಡು ಒಂದೇ ಬಾರಿ 70000 ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗದ ವಿವಿಧ ಅಭ್ಯಾಸಗಳನ್ನು ಪ್ರದರ್ಶಿಸಿದರು.
ನಗರದ ಶಾರದಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಭವಿಷ್ಯತ್ತಿಗಾಗಿ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಯೋಗ ಸಚಿವ ಯು.ಟಿ.ಖಾದರ್ ಇಂದಿನ ಯುವಜನಾಂಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಿಷ್ಟರಾಗ ಬೇಕಾದರೆ ಯೋಗದಿಂದ ಸಾಧ್ಯ , ಯೋಗಕ್ಕೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢವಾಗಿಡಬಲ್ಲ ಶಕ್ತಿಯಿದೆ ಎಂದು ಹೇಳಿದರು.
ಯೋಗದಿಂದ ಔಷಧದಿಂದ ಗುಣಪಡಿಸಲಾಗದ ರೋಗಗಳನ್ನು ಗುಣಪಡಿಸಬಹುದಾಗಿದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದ್ದು ನಮ್ಮ ಮಕ್ಕಳಲ್ಲಿ ಯೋಗದ ಬಗೆಗೆ ಆಸಕ್ತಿ ಹುಟ್ಟಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಶಂಖನಾದದೊಂದಿಗೆ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ವಿದ್ಯಾರ್ಥಿಗಳು ದ್ಯಾನಮುದ್ರೆ, ಲಘು ವ್ಯಾಯಾಮ, ಸೂರ್ಯನಮಸ್ಕಾರ ಮೊದಲಾದ ಆಸನಗಳನ್ನು ಪ್ರದರ್ಶಿಸಿದರು.
ದ.ಕ. ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ್, ಆಯುಕ್ತ ಡಾ.ಪ್ರಶಾಂತ್, ಧರ್ಮಸ್ಥಳ ಶಾಂತಿವನದ ವೈದ್ಯಾಧಿಕಾರಿ ಡಾ.ಪ್ರಶಾಂತ್ ಶೆಟ್ಟಿ, ಮಂಗಳೂರು ತಹಶೀಲ್ದಾರ್ ಮೋಹನ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಸಂಪತ್ ಕುಮಾರ್, ಡಿಡಿಪಿಐ ಮೋಸೆಸ್ ಜಯಶೇಖರ್, ಕಾಲೇಜಿನ ಪ್ರಾಂಶುಪಾಲರಾದ ಲೀಲಾ ಉಪಾಧ್ಯಾಯ, ಮಣಿ ಮೊದಲಾದವರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.
ಶಾರದಾ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಎಂ.ಬಿ.ಪುರಾಣಿಕ್ ಸ್ವಾಗತಿಸಿದರು.
Click this button or press Ctrl+G to toggle between Kannada and English